ಹೊನ್ನಾವರ: ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಚರ್ಚೆ ನಡೆಯಿತು.ಸಭೆ ಪ್ರಾರಂಭದಲ್ಲಿ ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು ಅವರು ಯೋಜನೆಗೆ ಸರ್ಕಾರ ಮುಂದಾಗಿರುವ ವಿಷಯ ತಿಳಿಸಿ ಸದಸ್ಯರು ಸಭೆಯಲ್ಲಿ ಅಭಿಪ್ರಾಯ ತಿಳಿಸುವಂತೆ ವಿನಂತಿಸಿದರು.
ಪಪಂ ಉಪಾಧ್ಯಕ್ಷ ಸುರೇಶ್ ಮೇಸ್ತ ಮಾತನಾಡಿ, ಶರಾವತಿ ನದಿ ನೀರು ಅವಲಂಬಿಸಿಕೊಂಡಿರುವ ನಮಗೆಲ್ಲ ಈ ಯೋಜನೆ ಜಾರಿಯಿಂದ ಮಾರಕ ಆಗಲಿದೆ. ಸಮುದ್ರದ ಉಪ್ಪು ನೀರು ನದಿಗೆ ನುಗ್ಗಿ ಕೃಷಿ ತೋಟಕ್ಕೂ ಹಾನಿಯಾಲಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ವಿಜಯ ಕಾಮತ್ ಮಾತನಾಡಿ, ಯೋಜನೆ ಜಾರಿಯಾದರೆ ನಾವೆಲ್ಲ ಉಪ್ಪುನೀರು ಕುಡಿಯಬೇಕಾಗುತ್ತದೆ. ನಾವೆಲ್ಲ ಈ ಯೋಜನೆಗೆ ವಿರೋಧಿಸೋಣ ಎಂದರು.ಈ ವೇಳೆ ಸದಸ್ಯರಾದ ಅಜಾದ್ ಅಣ್ಣಿಗೇರಿ ಆಕ್ಷೇಪ ವ್ಯಕ್ತಪಡಿಸಿ, ಅಧ್ಯಕ್ಷರೇ ನೀವು, ಎಲ್ಲರು ವಿರೋಧಿಸೋಣ ಎಂದು ಹೇಗೆ ಹೇಳುವಿರಿ? ಈ ಯೋಜನೆಯ ಸಾಧಕ-ಬಾಧಕ ತಿಳಿಸಬೇಕು. ತನ್ನದು ಈ ವಿಚಾರದಲ್ಲಿ ತಟಸ್ಥ ನಿಲುವು ಎಂದರು.
ನಂತರ ಗಣೇಶೋತ್ಸವ ಆಚರಣೆ,ಬಿಡಾಡಿ ದನಗಳ ಸಂಚಾರದಿಂದ ಆಗುತ್ತಿರುವ ಸಮಸ್ಯೆ, ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಕುರಿತ ಚರ್ಚೆ ನಡೆದವು.ಈ ವೇಳೆ ಪಟ್ಟಣ ಪಂಚಾಯತ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ,ಸದಸ್ಯರು ಉಪಸ್ಥಿತರಿದ್ದರು.