ಶ್ರೀರಂಗಪಟ್ಟಣ : ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಸೇರಿದಂತೆ ಬಾಳೆ ತೋಟದಲ್ಲಿ ಗಿಡಗಳು ಸಂಪೂರ್ಣವಾಗಿ ಧರೆಗುಳಿರುವ ಘಟನೆ ನಡೆದಿದೆ.
ತಾಲೂಕಿನ ಕಾರೇಕುರ ಗೇಟ್ ಹಾಗೂ ಪಂಪ್‌ಹೌಸ್ ಬಳಿ ಪ್ರತ್ಯೇಕವಾಗಿ ಎರಡು ಬೃಹತ್ ಗಾತ್ರದ ನೀಲಗಿರಿ ಮರಗಳು ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಗೆ ನೆಲಕ್ಕುರುಳಿದ್ದು, ಇದರಿಂದ ಪಶ್ಚಿಮವಾಹಿನಿ-ಕೆಆರ್‌ಎಸ್ ರಸ್ತೆ ಸಂಪೂರ್ಣವಾಗಿ ಅಸ್ಥವೆಸ್ತಗೊಂಡಿತ್ತು.
ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಹೆದ್ದಾರಿಯಲ್ಲಿ ಬಿದಿದ್ದ ಮರಗಳನ್ನು ತೆರವುಗಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬಾಳೆ ತೋಟ ನಾಶ:
ತಾಲೂಕಿನ ಅರಕೆರೆ ಗ್ರಾಮದ ಕೆ.ರಾಜು ಅವರಿಗೆ ಸೇರಿದ್ದ ಸುಮಾರು 2.5 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟೆ ಬಿರುಗಾಳಿಯಿಂದ ಸಂಪೂರ್ಣ ನೆಲಕ್ಕುರುಳಿವೆ. ಇದರಿಂದ ಫಸಲು ಕೈಗೆ ಸಿಗುವ ವೇಳೆ ಘಟನೆ ನಡೆದು ನಷ್ಟಕ್ಕೊಳಗಾಗಿರುವ ರೈತ ಕಂಗಾಲಾಗಿದ್ದಾರೆ. ಶೀಗ್ರ ಪ್ರಕೃತಿ ವಿಕೋಪದಡಿ ಸೂಕ್ತ ಪರಿಹಾರ ನೀಡುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ. ತಾಲೂಕಿನ ಮಹದೇವಪುರ ಗ್ರಾಮದ ಪುಟ್ಟಸ್ವಾಮಿರ ಮನೆ ಮೇಲಿನ ಸೀಟ್‌ಗಳು ಸಂಪೂರ್ಣವಾಗಿ ಹಾರಿ ಹೋಗಿ ನಷ್ಟವಾಗಿದೆ.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ತಾಲೂಕಿನಾದ್ಯಂತ ಭಾರೀ ಮಳೆಯಿಂದಾಗಿ ರೈತರ ಬೆಳೆಗಳು ಸೇರಿದಂತೆ ಅನೇಕ ಮನೆಗಳು ಅನಾಹುತ ಸಂಬಂವಿಸಿರುವುದು ಕಂಡುಬಂದಿದೆ. ಹಾನಿಯಾಗಿರುವ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಅರ್ಜಿ ನೀಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು.
ಬಿರುಗಾಳಿ ಸಹಿತ ಮಳೆ ಮನೆ ಮೇಲ್ಚಾವಣಿಗೆ ಹಾನಿ
ಮದ್ದೂರು: ತಾಲೂಕಿನ ಬುಳ್ಳನದೊಡ್ಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ 2 ಮನೆಗಳ ಮೇಲ್ಛಾವಣಿಗೆ ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ.
ಗ್ರಾಮದ ಚಿಕ್ಕತಿಮ್ಮಯ್ಯ ಹಾಗೂ ಪುಟ್ಟಸ್ವಾಮಿ ಅವರ ಮನೆಗಳ ಮೇಲ್ಛಾಣಿಗೆ ಹಾರಿ ಹೋಗುವ ಜತೆಗೆ ಮನೆಯಲಿದ್ದ ಹಲವಾರು ಗೃಹೋಪಯೋಗಿ ವಸ್ತುಗಳು ಜಾಖಂಗೊಂಡು ಅಪಾರ ನಷ್ಟವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನೆ ಮಾಲೀಕರು ಮನವಿ ಮಾಡಿದ್ದಾರೆ.
ಪರಿಹಾರ ವಿತರಣೆ:
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು ಮನೆಗಳ ಮಾಲೀಕರಿಗೆ ಆರ್ಥಿಕ ಸಹಾಯ ಮಾಡುವ ಜತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಗ್ರಾಪಂ ಸದಸ್ಯ ರಾಘವೇಂದ್ರ ಇದ್ದರು.