ಸರ್ಕಾರಿ ಜಾಗ ಉಳಿಸಿಕೊಳ್ಳಲು ಸೂರುಗೋಡು ಗ್ರಾಮಸ್ಥರ ಹೋರಾಟ

KannadaprabhaNewsNetwork | Published : May 1, 2025 12:50 AM

ಸಾರಾಂಶ

ಲಕ್ಕುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೂರುಗೋಡು ಗ್ರಾಮದ ಸರ್ವೆ ನಂ 46/2ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಗೋಮಾಳ ಇದ್ದಂತ ಜಾಗದಲ್ಲಿ ಸುಮಾರು 10 ಗುಂಟೆ ಜಾಗವನ್ನು ಶಾಲೆಗೆ ಮೀಸಲಿಟ್ಟು 1996ರಲ್ಲಿ 1ರಿಂದ 4ನೇ ತರಗತಿಯವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಮಂಜೂರು ಮಾಡಲಾಗಿತ್ತು. ಅಂದಿನಿಂದ ಇಲ್ಲಿವರೆಗೂ ಗ್ರಾಮೀಣ ಭಾಗದ ನೂರಾರು ಬಡ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅದರಂತೆ 2002-03ರಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು.

ಕನ್ನಡಪ್ರಭ ವಾರ್ತೆ ಬೇಲೂರು

ಸರ್ಕಾರಿ ಶಾಲೆ ಕಟ್ಟಡವನ್ನು ಧ್ವಂಸಗೊಳಿಸಿ ನಕಲಿ ಖಾತೆ ಸೃಷ್ಟಿಸಿಕೊಂಡು ಈ ಜಾಗ ನನಗೆ ಸೇರಿದೆ ಎಂದು ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಯಿಂದ ಸರ್ಕಾರಿ ಜಾಗ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಸೂರುಗೋಡು ಗ್ರಾಮಸ್ಥರಾದ ರಾಜಶೇಖರ್, ಅರುಣ್, ಹೇಮಂತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಕುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೂರುಗೋಡು ಗ್ರಾಮದ ಸರ್ವೆ ನಂ 46/2ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಗೋಮಾಳ ಇದ್ದಂತ ಜಾಗದಲ್ಲಿ ಸುಮಾರು 10 ಗುಂಟೆ ಜಾಗವನ್ನು ಶಾಲೆಗೆ ಮೀಸಲಿಟ್ಟು 1996ರಲ್ಲಿ 1ರಿಂದ 4ನೇ ತರಗತಿಯವರೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಮಂಜೂರು ಮಾಡಲಾಗಿತ್ತು. ಅಂದಿನಿಂದ ಇಲ್ಲಿವರೆಗೂ ಗ್ರಾಮೀಣ ಭಾಗದ ನೂರಾರು ಬಡ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅದರಂತೆ 2002-03ರಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇರುವ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿತ್ತು.ಇದನ್ನೇ ಕಾಯುತ್ತಿದ್ದ ಇದೇ ಗ್ರಾಮದ ಹರೀಶ್ ಹಾಗೂ ಅವರ ಪತ್ನಿ ಹರಿಣಾಕ್ಷಿ ಎಂಬುವವರು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಅವರು ಶಾಲೆಯ ಪಕ್ಕದಲ್ಲಿದ್ದಂತ ಅವರಿಗೆ ಸೇರಿದ ಜಾಗ ಸೇರಿದಂತೆ ಸುಮಾರು 10 ಕುಂಟೆ ಜಾಗ ಸೇರಿ ಬೇಲಿಯನ್ನು ಹಾಕಿಕೊಂಡು ಈ ಜಾಗ ನಮಗೆ ಸೇರಿದೆ ಎಂದು ದಬ್ಬಾಳಿಕೆ ನಡೆಸಿದ್ದರು. ನಾವು, ಗ್ರಾಮಸ್ಥರು ಈ ಜಾಗ ಸರ್ಕಾರಿ ಜಾಗವಾಗಿದ್ದು ಈ ಜಾಗ ತೆರವಾದ ನಂತರ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಲು ಇದನ್ನು ಮೀಸಲಿಡಲು ನಿರ್ಧರಿಸಿದ್ದೆವು. ಆದರೆ ಇದರಲ್ಲಿ ಕೆಲ ಅಧಿಕಾರಿಗಳು, ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಶಾಮೀಲಾಗಿದ್ದು, ಸಂಪೂರ್ಣ ನಕಲಿ ದಾಖಲೆ ಸೃಷ್ಟಿಸಿಕೊಂಡು ಹರೀಶ್ ತಮ್ಮ ಪತ್ಮಿ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ‌. ಇದರ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ, ಎಸಿಯವರಿಗೆ ಹಾಗು ತಾಲೂಕು ದಂಡಾಧಿಕಾರಿಗಳಿಗೆ ಸಂಪೂರ್ಣ ದಾಖಲೆ ಸಮೇತ ನೀಡಿದರೂ ಕೂಡ ಇದರ ಬಗ್ಗೆ ಕ್ರಮಕೈಗೊಳ್ಳದೆ ಗ್ರಾಮಸ್ಥರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಇದು ಸರ್ಕಾರ ಶಾಲೆಗಾಗಿ ನಿಗದಿ ಮಾಡಿದ ನಂತರ ಅದಕ್ಕೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ನೀಡಿದೆ. ಇಲ್ಲಿಯ ಗ್ರಾಪಂ ಅಧಿಕಾರಿಗಳು ಹಾಗು ಪಿಡಿಒ, ಕಂದಾಯ ಇಲಾಖೆಯ ಕೆಲವರು ಇದರಲ್ಲಿ ಶಾಮೀಲಾಗಿರುವುದರಿಂದ ಇಲ್ಲಿ ಸಾರ್ವಜನಿಕರ ಜಾಗ ಈಗ ಬಲಾಢ್ಯರ ಪಾಲಾಗಿದೆ‌ ಎಂದರು.

ಈ ಹಿಂದೆ ಶಾಲೆಗೆ ಏಕಾಎಕಿ ಬೇಲಿ ಹಾಕಿದ ಪರಿಣಾಮ ನಾವುಗಳು ಹೋರಾಟ ಮಾಡಿ ತೆರವುಗೊಳಿಸಿದ್ದೆವು. ಈ ಶಾಲೆಯ ಕಟ್ಟಡ ಸಂಪೂರ್ಣ ನೆಲಸಮಮಾಡಿ ಈ ಜಾಗ ನನಗೆ ಸೇರಿದೆ ಎಂದು ದೌರ್ಜನ್ಯ ಮಾಡುತ್ತಿರುವ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗವನ್ನು ಉಳಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ಮೀಸಲಿಡಬೇಕು ಇದರ ಬಗ್ಗೆ ಶಾಸಕರಿಗೂ ಮಾಹಿತಿ ನೀಡುತ್ತೇವೆ. ನಂತರ ಇಡೀ ಸೂರುಕೋಡು ಗ್ರಾಮದ ಎಲ್ಲಾ ಗ್ರಾಮಸ್ಥರು ಸೇರಿ ಉಗ್ರ ರೀತಿಯಲ್ಲಿ ಹೋರಾಟ ಮಾಡಿ ಜಾಗ ಉಳಿಸಿಕೊಳ್ಳಬೇಕಾಗುತ್ತದೆ. ಕೂಡಲೇ ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

Share this article