ಹಿಂಗಾರು ಬಿತ್ತನೆ ಶುರು । ರೈತರ ಮೊಗದಲ್ಲಿ ನಗು
ತಾಲೂಕಿನಾದ್ಯಾಂತ ಹಿಂಗಾರು ಮಳೆ ಪ್ರವೇಶ ಉತ್ತಮವಾಗಿದ್ದು, ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ತಡರಾತ್ರಿಯಿಂದ ಆರಂಭವಾಗಿ ಬೆಳಗಿನ ಜಾವದವರೆಗೂ ಸುರಿದಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಚೆಳ್ಳೂರು, ಚೆಳ್ಳೂರು ಕ್ಯಾಂಪ್, ಹಗೇದಾಳ, ಸೋಮನಾಳ, ಹುಳ್ಕಿಹಾಳ, ತೊಂಡಿಹಾಳ, ಮರ್ಲಾನಹಳ್ಳಿ, ರವಿನಗರ, ಸಿದ್ದಾಪುರ ಹೋಬಳಿ ವ್ಯಾಪ್ತಿಯ ನದಿ ಭಾಗದಲ್ಲಿಯೂ ಸಹ ಉತ್ತಮ ಮಳೆಯಾಗಿದ್ದು, ಬತ್ತದ ಬೆಳೆಗೆ ಅನುಕೂಲವಾಗಿದೆ.
ಈ ಬಾರಿಯ ಮುಂಗಾರು ಉತ್ತಮವಾಗಿ ಸುರಿದಿದ್ದು, ಕಾಲುವೆಗೂ ನೀರು ಬಿಟ್ಟಿರುವುದರಿಂದ ಅಂದಾಜು ೧೫ ಸಾವಿರ ಹೆಕ್ಟೇರ್‌ನಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ನಾಟಿ ಕಾರ್ಯ ಮುಗಿದು ಭತ್ತದ ಗದ್ದೆಗಳು ನಳನಳಿಸುತ್ತಿದ್ದು, ಕೆಲ ಪ್ರದೇಶದಲ್ಲಿ ತೆನೆಗಳು ಹಾಲು ಕಟ್ಟುವ ಸ್ಥಿತಿಯಲ್ಲಿವೆ. ಇನ್ನು ಕೆಲ ಪ್ರದೇಶದಲ್ಲಿ ತೆನೆ ಒಡೆಯುವ ಹಂತಕ್ಕೆ ಬಂದಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ.
ಇನ್ನೂ ಕಳೆದ ಎರಡ್ಮೂರು ದಿನಗಳಿಂದ ತಾಲೂಕಿನಾದ್ಯಾಂತ ಮಳೆ ಸುರಿಯುತ್ತಿದ್ದು, ಹಿಂಗಾರಿನ ಉತ್ತಮ ಪ್ರವೇಶವಾಗಿದೆ. ಈ ಲಕ್ಷಣಗಳನ್ನು ಅರಿತ ರೈತ ಸಮೂಹ ಹಿಂಗಾರಿಗೆ ಹುಳಿಗಡಲೆ ಬಿತ್ತನೆ ಮಾಡಲು ಸಿದ್ಧವಾಗಿದ್ದಾರೆ.
ಹಿಂಗಾರು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಈಗಾಗಲೇ ೫೦೦ ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಮಾಡಲಾಗಿದೆ. ಒಟ್ಟಿನಲ್ಲಿ ಬೀಜ ಕೊರತೆಯಾಗದಂತೆ ಇಲಾಖೆ ಕ್ರಮ ಕೈಗೊಂಡಿದ್ದು, ಒಟ್ಟು ೩ ಸಾವಿರದ ೫೦೦ ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿ ಅಧಿಕಾರಿ ನಾಗರಾಜ ರ್‍ಯಾವಳದ ತಿಳಿಸಿದ್ದಾರೆ.