ಧಾರಾಕಾರ ಮಳೆಯಿಂದ ಕಾಫಿ ಬೆಳೆ ನಾಶ

KannadaprabhaNewsNetwork |  
Published : Aug 03, 2024, 12:35 AM IST
2ಎಚ್ಎಸ್ಎನ್3 : ಹೆಚ್ಚು ಮಳೆಯಿಂದಾಗಿ ಕಾಫಿ ಕಾಯಿಗಳು ನೆಲಕ್ಕೆ ಉದುರಿರುವುದು. | Kannada Prabha

ಸಾರಾಂಶ

ಈ ಬಾರಿ ಮುಂಗಾರು ಮಳೆಯಾಗದಿರುವುದರಿಂದ ನೀರಿನ ಕೊರತೆಯ ನಡುವೆಯು ಸಾಕಷ್ಟು ಬೆಳೆಗಾರರು ಹನಿನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ, ಮೇ ತಿಂಗಳಿನಲ್ಲಿ ಏಕಾಏಕಿ ಹಿಡಿದ ಮಳೆ ಮೂರು ತಿಂಗಳು ಕಳೆದರೂ ಬಿಡುವು ನೀಡದ ಪರಿಣಾಮ ಹನಿನೀರಾವರಿ ವ್ಯವಸ್ಥೆ ಮಾಡಿದ್ದ ಬಹುತೇಕ ಕಾಫಿ ತೋಟದಲ್ಲಿ ಶೇ. ೫೦ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರೊಬೋಸ್ಟಾ ಕಾಫಿ ನೆಲ ಸೇರಿದೆ.

ಶ್ರೀವಿದ್ಯಾ ಸಕಲೇಶಪುರ ಕನ್ನಡಪ್ರಭ ವಾರ್ತೆ ಸಕಲೇಶಪುರ

ಮೂರು ತಿಂಗಳ ನಿರಂತರ ಮಳೆಗೆ ಕಾಫಿ ಬೆಳೆ ಅರ್ಧಕ್ಕೂ ಅಧಿಕ ನಾಶವಾಗಿದ್ದು ಬೆಳೆಗಾರರ ವಲಯದಲ್ಲಿ ದಿಗಿಲು ದುಪ್ಪಟ್ಟುಗೊಂಡಿದೆ. ಹೌದು ಕಾಫಿ ಬೆಳೆಗೆ ಅಗತ್ಯಕ್ಕಿಂತ ದುಪ್ಪಟ್ಟು ಮಳೆಯಾಗಿದ್ದು ಬಿಡುವು ನೀಡದ ನಿರಂತರ ಮಳೆ ಭೂಮಿಯನ್ನು ಶೀತಪ್ರದೇಶವನ್ನಾಗಿಸಿರುವುದು ವಾಣಿಜ್ಯ ಬೆಳೆಯಾದ ಕಾಫಿ ಭಾರಿ ಪ್ರಮಾಣದಲ್ಲಿ ನೆಲಸೇರಲು ಪ್ರಮುಖ ಕಾರಣವಾಗಿದೆ.

ಸಾಮಾನ್ಯವಾಗಿ ಸೂಕ್ಷ್ಮಬೆಳೆಯಾಗಿರುವ ರೊಬೋಸ್ಟಾ ಕಾಫಿಗೆ ಫೆಬ್ರವರಿ ತಿಂಗಳಿನಿಂದ ಹದಮಳೆಯ ಅವಶ್ಯಕತೆ ಇದ್ದು, ಪ್ರತಿ ೨೦ ದಿನಕ್ಕೊಮ್ಮೆ ಮಳೆಯಾದರೆ ರೊಬೋಸ್ಟಾ ತೋಟಗಳಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಆದರೆ, ಕಾಫಿ ಕೊಯ್ಲಿನ ನಂತರ ಮಳೆಯಾಗದಿದ್ದರೆ ಅಥವಾ ಹನಿನೀರಾವರಿ ವ್ಯವಸ್ಥೆ ಮಾಡದಿದ್ದರೆ ರೊಬೋಸ್ಟಾ ತೋಟಗಳಲ್ಲಿ ನಿರೀಕ್ಷಿತ ಫಸಲು ಪಡೆಯುವುದು ಅಸಾಧ್ಯ. ಈ ಬಾರಿ ಮುಂಗಾರು ಮಳೆಯಾಗದಿರುವುದರಿಂದ ನೀರಿನ ಕೊರತೆಯ ನಡುವೆಯು ಸಾಕಷ್ಟು ಬೆಳೆಗಾರರು ಹನಿನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ, ಮೇ ತಿಂಗಳಿನಲ್ಲಿ ಏಕಾಏಕಿ ಹಿಡಿದ ಮಳೆ ಮೂರು ತಿಂಗಳು ಕಳೆದರೂ ಬಿಡುವು ನೀಡದ ಪರಿಣಾಮ ಹನಿನೀರಾವರಿ ವ್ಯವಸ್ಥೆ ಮಾಡಿದ್ದ ಬಹುತೇಕ ಕಾಫಿ ತೋಟದಲ್ಲಿ ಶೇ. ೫೦ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರೊಬೋಸ್ಟಾ ಕಾಫಿ ನೆಲ ಸೇರಿದೆ. ಸಾಮಾನ್ಯವಾಗಿ ರೋಬಸ್ಟ್ ಕಾಫಿಗೆ ೧೭೫೦ರಿಂದ ೨೦೦೦ ಮೀ.ಮೀಟರ್‌ ಮಳೆ ಉತ್ತಮ ಆದರೆ, ಜುಲೈ ಅಂತ್ಯಕ್ಕೆ ಬಹುತೇಕ ತಾಲೂಕಿನಲ್ಲಿ ಮೂರರಿಂದ ನಾಲ್ಕು ಸಾವಿರ ಮೀ.ಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ ಶೇ. ೧೫೦ರಷ್ಟು ಅಧಿಕವಾಗಿದೆ. ಪರಿಣಾಮ ಸೂಕ್ಷ್ಮ ರಚನೆಹೊಂದಿರುವ ರೊಬೋಸ್ಟಾ ಕಾಫಿಗೆ ಕೊಳೆರೋಗ ಬರಲು ಪ್ರಮುಖ ಕಾರಣವಾಗಿದೆ.

ಏಪ್ರಿಲ್ ತಿಂಗಳವರೆಗೆ ಮಳೆ ಅಗತ್ಯವಿಲ್ಲದ ಅರೇಬಿಕ ಕಾಫಿಗೆ ಸಾಮಾನ್ಯವಾಗಿ ಹನಿನೀರಾವರಿ ವ್ಯವಸ್ಥೆಮಾಡುವುದು ಅಪರೂಪ. ಆದರೆ, ಎಕರೆಗೆ ಇಂತಿಷ್ಟೆ ಇಳುವರಿ ತೆಗೆಯ ಬೇಕು ಎಂಬ ಮನಸ್ಥಿತಿ ಹೊಂದಿರುವ ಬೆಳೆಗಾರರು ಹನಿನೀರಾವರಿ ವ್ಯವಸ್ಥೆ ಮಾಡಿದ್ದು ಹನಿನೀರಾವರಿ ವ್ಯವಸ್ಥೆ ಮಾಡಿರುವ ತೋಟಗಳಲ್ಲಿ ಈಗಾಗಲೇ ಅರೇಬಿಕ ಕಾಫಿ ಕಾಯಿಯಲ್ಲಿ ಬೀಜ ಮೂಡಿದ್ದು ಬಹುತೇಕ ತೋಟಗಳಲ್ಲಿ ಇನ್ನೊಂದು ತಿಂಗಳಿನಲ್ಲಿ ಕೂಯಿಲಿಗೆ ಬರಲಿದೆ. ಇಂತಹ ಸ್ಥಿತಿಯಲ್ಲಿ ಹೆಚ್ಚಿನ ಗಾಳಿ ಬೀಸುತ್ತಿರುವುದು ಬೆಳೆಗಾರರ ಪಾಲಿಗೆ ಕರಾಳವಾಗಿದ್ದು ಅರೇಬಿಕ ಗಿಡದ ರಂಬೆಗಳೆ ಮುರಿದು ನೆಲಸೇರುತ್ತಿದ್ದರೆ ರೊಬೋಸ್ಟಾ ಕಾಫಿಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕ ಕಾಫಿ ನೆಲಸೇರುತ್ತಿದೆ. ಅರೇಬಿಕ ಕಾಫಿಗೆ ೧೨೫೦ರಿಂದ ೧೭೫೦ ಮೀ.ಮೀಟರ್‌ ಮಳೆ ಅಗತ್ಯವಿದೆ. ಆದರೆ ಬಾರಿ ಮಳೆ ಅರೇಬಿಕ ಕಾಫಿಗೂ ಶಾಪವಾಗಿ ಕಾಡುತ್ತಿದೆ.

ಎಲೆಗಳು ಇಲ್ಲ: ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯ ಹಲವೆಡೆ ಅಧಿಕ ಮಳೆ ಹಾಗೂ ಭಾರಿ ಪ್ರಮಾಣದ ಗಾಳಿಯಿಂದಾಗಿ ರೊಬೋಸ್ಟಾ ಗಿಡಗಳಲ್ಲಿ ಎಲೆಯು ಉಳಿಯದಂತೆ ಉದುರಿದ್ದು ಇನ್ನೂ ಫಸಲು ಉಳಿಸಿಕೊಳ್ಳುವ ಮಾತೆ ಇಲ್ಲದಾಗಿದೆ.

ಶುಂಠಿ ಬೆಳೆ ಸರ್ವನಾಶ: ತಾಲೂಕಿನಲ್ಲಿ ಹಲವೆಡೆ ದಿಣ್ಣೆ ಹಾಗೂ ಭತ್ತದ ಗದ್ದೆಗಳಲ್ಲಿ ಶುಂಠಿ ಬೆಳೆ ಬೆಳೆಯಲಾಗಿದ್ದು, ಬೇಸಿಗೆಯಲ್ಲಿ ಶುಂಠಿ ಬೆಳೆಗೆ ನೀರಿನ ಕೊರತೆಯಾಗಿ ಬಸವಳಿದಿದ್ದ ಬೆಳೆಗಾರರಿಗೆ ಈಗ ಅಧಿಕ ಮಳೆ ಹಾಗು ಶೀತದ ವಾತಾವರಣ ಶಾಪವಾಗಿ ಕಾಡುತ್ತಿದ್ದು ಶೇ. ೮೦ಕ್ಕೂ ಅಧಿಕ ಶುಂಠಿ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಹಳದಿಬಣ್ಣಕ್ಕೆ ಬದಲಾಗಿದ್ದು, ಬಿಡುವಿಲ್ಲದ ಮಳೆ ಬೆಳೆಗಾರ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೂ ಕೈಹಾಕದಂತೆ ಮಾಡಿದೆ.

ಭತ್ತದ ಬೆಳೆಗೂ ಕುತ್ತು: ತಾಲೂಕಿನಲ್ಲಿ ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ನಾಟಿ ಕಾರ್ಯ ಆರಂಭವಾಗುವುದರಿಂದ ಜೂನ್ ತಿಂಗಳಿನಲ್ಲಿ ಸಸಿಮಾಡಿಮಾಡುವುದು ವಾಡಿಕೆ. ಈಗಾಗಲೇ ಸಾಕಷ್ಟು ರೈತರು ನಾಟಿ ಮಾಡಿದ್ದರೆ ಮತ್ತಷ್ಟು ರೈತರು ನಾಟಿಗೆ ಸಿದ್ಧತೆ ನಡೆಸಿದ್ದರು. ಆದರೆ, ಜುಲೈ ಮಧ್ಯಭಾಗದಿಂದ ಆರಂಭವಾದ ಬಿರುಸಿನ ಮಳೆ ನದಿ, ಹಳ್ಳ, ಕೊಳ್ಳಗಳನ್ನು ಉಕ್ಕಿ ಹರಿಯುವಂತೆ ಮಾಡಿದ್ದು ಜುಲೈ ೧೫ರಿಂದ ಜುಲೈ ಅಂತ್ಯದವರೆಗೆ ತಾಲೂಕಿನ ಬಹುತೇಕ ಜಲಮೂಲಗಳಲ್ಲಿ ಮೂರು ಬಾರಿ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ ಸಾವಿರಾರು ಎಕರೆ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ವಾರಗಟ್ಟಲೆ ನೀರು ನಿಲುಗಡೆಯಾಗಿ ಬೆಳೆ ಹಾಳಾದರೆ ಹಲವೆಡೆ ಭೂಕುಸಿತ ಸಂಭವಿಸಿ ಸಸಿಮಡಿ, ನಾಟಿಮಾಡಿದ ಭತ್ತದ ಬೆಳೆ ಸಹ ನಾಶವಾಗಿದೆ.

ಅಡಿಕೆ, ಮೆಣಸಿಗೂ ರೋಗದ ಭೀತಿ: ಗರಿಮೂಡಿರುವ ಮೆಣಸಿನ ಬಳ್ಳಿಗಳಲ್ಲಿ ಕಾಯಿ ಕಟ್ಟಲಾರಂಭಿಸಿದ್ದು ಇದುವರೆಗೆ ಯಾವುದೇ ಸಮಸ್ಯೆ ಇಲ್ಲದಿದ್ದರೆ ಮತ್ತಷ್ಟು ಮಳೆ ಅಥವಾ ಶೀತದ ವಾತಾವರಣ ಮುಂದುವರಿದರೆ ಕೊಳೆರೋಗ ಬಾಧಿಸುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಇದಲ್ಲದೆ ಅಡಿಕೆ ಬೆಳೆಗೆ ಗಾಳಿಯದೆ ಸಮಸ್ಯೆ ಹೆಚ್ಚಾಗಿದ್ದು ಸಾಮಾನ್ಯವಾಗಿ ೮ ಅಡಿಗೊಂದರಂತೆ ಬೆಳೆಯಲಾಗಿರುವ ಅಡಿಕೆ ಮರಗಳು ಪರಸ್ಪರ ಡಿಕ್ಕಿ ಹೊಡೆದು ಅಡಿಕೆ ಗೊಂಚಲುಗಳು ಹಲವು ತೋಟಗಳಲ್ಲಿ ಉದುರಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಈ ಬಾರಿಯ ಬಿಡುವು ನೀಡದ ಮಳೆ ತಾಲೂಕಿನ ಬೆಳೆಗಾರರ ನೆಮ್ಮದಿ ಕಸಿದಿರುವುದು ಮಾತ್ರ ಸತ್ಯ.

೨ ಎಸ್‌ಕೆಪಿಪಿ ೧ ಸುಳ್ಳಕ್ಕಿ ಗ್ರಾಮದ ವಿಕ್ರಂ ಎಂಬುವವರ ಕಾಫಿ ತೋಟದಲ್ಲಿ ಬಾರಿ ಪ್ರಮಾಣದಲ್ಲಿ ಕಾಫಿ ನೆಲ ಸೇರಿರುವುದು.ಹೇಳಿಕೆ: 1

ಕಾಫಿ ತೋಟಕ್ಕೆ ಹೋಗಲು ಬೇಸರವಾಗುತ್ತಿದೆ. ಶೇಕಡಾ ೬೦ರಷ್ಟು ಕಾಫಿ ನೆಲಸೇರಿದ್ದು ಏನು ಮಾಡುವುದೆಂಬ ಚಿಂತೆ ಕಾಡುತ್ತಿದೆ.

- ವಿಕ್ರಂ ಸುಳ್ಳಕ್ಕಿ,ಕಾಫಿ ಬೆಳೆಗಾರ.ಹೇಳಿಕೆ:2

ಅಧಿಕ ಮಳೆ ಕಾಫಿಗೆ ಮಾರಕವಾಗಿರುವುದು ಸತ್ಯ. ಹಲವು ತೋಟಗಳಲ್ಲಿ ಕಾಫಿ ವ್ಯಾಪಕವಾಗಿ ಉದುರಿದೆ. ಆದರೆ, ಆಶ್ಚರ್ಯಪಡುವಂತೆ ಸಾಕಷ್ಟು ತೋಟಗಳಲ್ಲಿ ಯಾವುದೇ ಹಾನಿಯು ಸಂಭವಿಸಿಲ್ಲ. ಹಾನಿ ಪ್ರಮಾಣ ಹೆಚ್ಚಲು ಬೆಳೆಯುವ ವಿಧಾನವು ಮಾನದಂಡವಾಗಿರುವ ಲಕ್ಷಣಗಳಿದೆ.

- ಬಸವರಾಜ್, ವಿಸ್ತರಣಾಧಿಕಾರಿ, ಕಾಫಿ ಮಂಡಳಿ, ಮಠಸಾಗರ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ