ಮಹೇಶ ಛಬ್ಬಿ
ಗದಗ: ಗದಗ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಕಟಾವು ಮಾಡಿದ ಗೆಜ್ಜೆ ಶೇಂಗಾ ರಕ್ಷಣೆಗೆ ರೈತರು ಪರದಾಡುತ್ತಿದ್ದಾರೆ.ಈಗಾಗಲೇ ಅಕಾಲಿಕ ಮಳೆಯಿಂದ ಹೆಸರು ಬೆಳೆ ಸಂಪೂರ್ಣ ನಾಶವಾಗಿ ಬಿತ್ತನೆಗೆ ಮಾಡಿದ್ದ ಖರ್ಚು ಸಹ ಬಾರದಂತಾಗಿ ರೈತರನ್ನು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕುವಂತೆ ಮಾಡಿತ್ತು. ಹಲವೆಡೆ ಹೆಸರು ಬಿತ್ತಿದ್ದ ರೈತರು ಮಳೆಯಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದನ್ನು ಕಂಡು ಮಾಡಿದ ಖರ್ಚುೂ ಬರುವುದಿಲ್ಲ ಎಂದು ಕಟಾವೂ ಮಾಡಿಸದೇ ಹಾಗೇ ಬಿಟ್ಟು ಹೊಲವನ್ನು ಹರಗಿದ್ದರು.
ಗದಗ ಗ್ರಾಮೀಣ ಭಾಗದಲ್ಲಿ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿಜೋಳ, ಹತ್ತಿ, ಮೆಣಸಿನಕಾಯಿ ಬೆಳೆಯು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಎಲ್ಲ ಬೆಳೆಗಳು ಹಾನಿಯಾಗುವ ಆತಂಕ ರೈತರಲ್ಲಿ ಹೆಚ್ಚಾಗಿದೆ.ರೈತರ ಪರದಾಟ: ತಾಲೂಕಿನಲ್ಲಿ ಗೆಜ್ಜೆ ಶೇಂಗಾ ಕಟಾವು ಹಂತಕ್ಕೆ ಬಂದಿದ್ದು, ಕೆಲ ಭಾಗದಲ್ಲಿ ರೈತರು ಕಟಾವು ಮಾಡಿ ಒಕ್ಕಲು ಮಾಡಿ, ಬಿಸಿಲಿಗೆ ಒಣಗಿಸಲು ರಸ್ತೆ ಸೇರಿದಂತೆ ಖುಲ್ಲಾ ಜಾಗಗಳಲ್ಲಿ ತಂದು ಹಾಕಿದ್ದಾರೆ. ಆದರೆ ನಿತ್ಯ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಬಿಸಿಲಿನ ಮುಖವೇ ಕಾಣದಂತಾಗಿ, ಶೇಂಗಾ ರಕ್ಷಣೆಗೆ ತಾಡಪತ್ರಿ ಹಾಕಿ ಕಾಯುವಂತಾಗಿದೆ.
ಕೆಲವು ಭಾಗಗಳಲ್ಲಿ ಗೆಜ್ಜೆ ಶೇಂಗಾವನ್ನು ಕಿತ್ತು ಹೊಲದಲ್ಲಿಯೇ ಬಿಡಲಾಗಿದ್ದು, ಮೊಳಕೆ ಒಡೆಯುತ್ತಿವೆ. ಇದೇ ರೀತಿ ಮಳೆ ಮುಂದುವರಿದರೆ ಗಾಳಿ, ಬಿಸಿಲು ಬೀಳದೆ ಶೇಂಗಾ ಕೊಳೆತು ಹೋಗುತ್ತದೆ ಎನ್ನುವ ಭಯ ರೈತರನ್ನು ಕಾಡುತ್ತಿದೆ. ಈಗಾಗಲೇ ಹೆಸರು ಬೆಳೆಯಲ್ಲಿ ಕೈ ಸುಟ್ಟುಕೊಂಡ ರೈತರು ಶೇಂಗಾ ಬೆಳೆಯೂ ಹಾಗೇ ಆದರೆ ರೈತನ ಕುತ್ತಿಗೆ ಹಿಚ್ಚುಕಿದಂತಾಗುತ್ತದೆ ಎನ್ನುತ್ತಾರೆ ಅನ್ನದಾತರು.ವಿಪರಿತ ಶೀತ ಗಾಳಿ: ಜಿಲ್ಲಾದ್ಯಂತ ಮೊಡ ಕವಿದ ವಾತಾವರಣವಿದ್ದು, ಕೆಲವೆಡೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ. ಶೀತಗಾಳಿಯಿಂದ ಜನತೆ ಮನೆಯಿಂದ ಆಚೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜಿಟಿಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆಲವೊಮ್ಮೆ ರಭಸವಾಗಿ ಬೀಳುತ್ತಿದೆ.
ನಗರದ ಕೆಲ ಬಡಾವಣೆಗಳ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಕೆಲ ರಸ್ತೆಗಳು ಮಳೆಯಿಂದ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.ಶೇಂಗಾ ಕಿತ್ತು ಜಮೀನಿನಲ್ಲಿ ಹಾಕಿದ್ದು, ಜಿಟಿ ಜಿಟಿ ಮಳೆಗೆ ಮೊಳಕೆ ಒಡೆಯುತ್ತಿವೆ. ಇನ್ನು ಕೆಲ ರೈತರು ಕಟಾವು ಮಾಡಿ ಒಕ್ಕಲು ಮಾಡಲು ರಸ್ತೆಗಳಲ್ಲಿ ತಂದು ಹಾಕಿದ್ದು, ಅವುಗಳನ್ನು ರಕ್ಷಣೆ ಮಾಡುವುದೇ ಹರಸಾಹಸವಾಗಿದೆ. ಸರ್ಕಾರ ಕಾಳಜಿ ವಹಿಸಿ ಕೂಡಲೇ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಮುಳಗುಂದದ ರೈತರಾದ ಗಂಗಪ್ಪ ಸುಂಕಾಪುರ, ದೇವರಾಜ ಸಂಗನಪೇಟಿ, ಮಹಾಂತೇಶ ಗುಂಜಳ ಆಗ್ರಹಿಸಿದ್ದಾರೆ.