ಭಟ್ಕಳ: ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದರೆ, ಹೊಳೆ ಉಕ್ಕಿ ಹರಿದು ಕೃಷಿ ಭೂಮಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಉತ್ತರಕೊಪ್ಪ, ಕಟಗಾರಕೊಪ್ಪ ಮುಂತಾದ ಭಾಗಗಳಲ್ಲಿ ಹೊಳೆ ನೀರು ಉಕ್ಕಿ ಹರಿದು ತೋಟಕ್ಕೆ ನುಗ್ಗಿದ್ದು, ತೋಟದ ಗೊಬ್ಬರ, ಅಡಕೆ, ಬಾಳೆ ಗಿಡಗಳು ಕೊಚ್ಚಿಕೊಂಡು ಹೋಗಿದೆ. ಕಟಗಾರಕೊಪ್ಪದಲ್ಲಿ ಹೊಳೆ ನೀರು ಸೇತುವೆ ಮೇಲೆ ಹರಿದಿದಿದ್ದರಿಂದ ಸಂಚಾರಕ್ಕೆ ಕೆಲಹೊತ್ತು ಪರದಾಡುವಂತಾಯಿತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಿಸಿರುವುದು ಮಕ್ಕಳು ಮಳೆಯಲ್ಲಿ ಶಾಲೆಗೆ ಬರುವುದು ತಪ್ಪಿತು.
ಶುಕ್ರವಾರ ಮಧ್ಯಾಹ್ನದ ನಂತರ ಮಳೆ ಸ್ವಲ್ಪ ಕಡಿಮಯಾದ ನಂತರ ನೀರು ಇಳಿಮುಖವಾಗಿದೆ.
ಭಾರಿ ಮಳೆಗೆ ಕಾಯ್ಕಿಣಿ ನಿವಾಸಿ ಮಾಸ್ತಮ್ಮ ಮಂಜುನಾಥ ನಾಯ್ಕ ಹಾಗೂ ಭಾಗೀರಥಿ ಶೇಖರ ಮೊಗೇರ ಮನೆ ಕುಸಿದು ಭಾಗಶಃ ಹಾನಿಯಾಗಿದೆ. ಬೈಲೂರು ನಿವಾಸಿ ಲಲಿತಾ ಈಶ್ವರ ನಾಯ್ಕ, ಸುರೇಶ ನಾರಾಯಣ ನಾಯ್ಕ, ಸೋಮಯ್ಯ ಕುಪ್ಪಯ್ಯ ನಾಯ್ಕ, ನಂದಿನಿ ಅಶೋಕ ದೇವಾಡಿಗ, ಅಮ್ಮ ಮಾಸ್ತಿ ಗೊಂಡ, ಮಂಜುಳಾ ನಾಗಪ್ಪ ನಾಯ್ಕ ಹಾಗೂ ಜಟ್ಟ ಈರಯ್ಯ ನಾಯ್ಕ ಅವರ ಮನೆಗಳಿಗೆ ನೀರು ನುಗ್ಗಿ, ಮನೆಯ ಗೋಡೆ ಹಾಗೂ ಚಾವಣಿ ಕುಸಿದು ಹಾನಿಯಾಗಿದೆ. ಬೈಲೂರು ನಿವಾಸಿ ಶ್ರೀನಿವಾಸ ನಾಗಪ್ಪ ನಾಯ್ಕ ಅವರ ಮನೆಯ ಮುಂಭಾಗ ಒಣಗಲು ಹಾಕಿದ್ದ ಅಡಕೆ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಅಪಾರ ಹಾನಿ ಸಂಭವಿಸಿದೆ.ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನದಿಯಂಚಿನ ವಾಸಿಗಳಿಗೆ ಬೇರೆಡೆ ಸ್ಥಳಾಂತರವಾಗುವಂತೆ ಸೂಚಿಸಲಾಗಿದೆ. ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚನೆ ನೀಡಲಾಗಿದೆ. ಹಾನಿ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ತಾಲೂಕಾಡಳಿತದಿಂದ ಸಿದ್ಧತೆ ಮಾಡಿಕೊಂಡಿದೆ. ಪಿಡಿಒ ಮತ್ತು ನೋಡಲ್ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಶುಕ್ರವಾರ ಬೆಳಿಗ್ಗೆವರೆಗೆ 91.4 ಮಿ.ಮೀ. ಮಳೆ ಸುರಿದಿದೆ. ಸತತವಾಗಿ ಮಳೆ ಸುರಿದಿದ್ದರಿಂದ ಗುರುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆಗೆ ತೊಂದರೆ ಉಂಟಾಯಿತು. ಇಷ್ಟು ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ತಾಲೂಕಿನಲ್ಲಿ ದಾಖಲೆಯ ಮಳೆ ಸುರಿದೆ. ಶುಕ್ರವಾರ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರಿಂದ ಗಣೇಶ ಮೂರ್ತಿ ವೀಕ್ಷಣೆಗೆ ಅನುಕೂಲವಾಯಿತು.