ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಲ್ಲಿ ಅಬ್ಬರದ ಮಳೆ

KannadaprabhaNewsNetwork | Published : Jul 19, 2024 12:49 AM

ಸಾರಾಂಶ

ದಿನೇ ದಿನೇ ನದಿ ನೀರಿನಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ಜನ ಜಾನುವಾರುಗಳು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು. ನದಿ ಪಾತ್ರದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೂಚನೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬುಧವಾರ ಇಡೀ ದಿನ ಬಿಡುವು ನೀಡಿದ್ದ ಮಳೆ ಮಧ್ಯರಾತ್ರಿಯಿಂದ ಗುರುವಾರ ರಾತ್ರಿವರೆಗೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಅವಳಿ ತಾಲೂಕಿನಾದ್ಯಂತ ಜನಜೀವನ ನಿಜಕ್ಕೂ ಅಕ್ಷರಶಃ ದುಸ್ತರವಾಗಿದೆ. ಗುರುವಾರ ನ್ಯಾಮತಿ ತಾಲೂಕಿನಲ್ಲಿ ಉಪವಿಭಾಗಾಧಿಕಾರಿಗಳ ಆದೇಶದಂತೆ ಎಲ್ಲಾ ಶಾಲೆಗಳಿಗೆ ರಜೆ ನೀಡಿಲಾಗಿತ್ತು ಆದರೆ ಹೊನ್ನಾಳಿಯಲ್ಲಿ ಮಾತ್ರ ಎಂದಿನಂತೆ ಶಾಲೆಗಳು ನಡೆದಿದ್ದು ಗುರುವಾರ ಬೆಳಗ್ಗೆ ಶಾಲೆಗೆ ಹೋಗುವ ಮಕ್ಕಳು ಪರದಾಡಿದರೆ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರ ಸಂಖ್ಯೆ ಕ್ಷೀಣವಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಹೊನ್ನಾಳಿ ತಾಲೂಕಿನ ಅರಬಗಟ್ಟೆ, ಹುಣಸಘಟ್ಟ, ಘಂಟ್ಯಾಪುರ, ಕುಳಗಟ್ಟೆ, ಏಕೆ ಕಾಲೂನಿ, ಹೊಸಹಳ್ಳಿ, ಕಮ್ಮಾಟಗಟ್ಟೆ ಹಾಗೂ ಕ್ಯಾಸಿನಕೆರೆ ಸೇರಿ ಒಟ್ಟು 14 ಮನೆಗಳು ಭಾಗಶಃ ಹಾನಿಯಾಗಿವೆ. ಅಲ್ಲದೆ ಮತ್ತಷ್ಟು ಮನೆಗಳು ಬೀಳುವ ಸಾಧ್ಯತೆ ಇದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ.

ದಿನೇ ದಿನೇ ನದಿ ನೀರಿನಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆ ಜನ ಜಾನುವಾರುಗಳು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು. ನದಿ ಪಾತ್ರದಲ್ಲಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಸೂಚನೆ ನೀಡಿದ್ದಾರೆ.

ಮಳೆ ವಿವರ:

ಹೊನ್ನಾಳಿ 16.4ಮಿ.ಮೀ, ಸವಳಂಗ 28.0, ಬೆಳಗುತ್ತಿ 31.5, ಹರಳಹಳ್ಳಿ 22.4, ಗೋವಿನಕೋವಿ 17.3, ಕುಂದೂರು 12.6, ಸಾಸ್ವೇಹಳ್ಳಿ18.6 ಮಿಮೀ ಮಳೆಯಾಗಿರರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನದಿ ನೀರಿನಮಟ್ಟ:

ಇಲ್ಲಿನ ತುಂಗಭದ್ರಾ ನದಿ ನೀರಿನಮಟ್ಟ 9.900 ಮೀಟರ್ ಇದೆ. ಆದರೆ ಶಿವಮೊಗ್ಗದ ತುಂಗಾ ಜಲಾಶಯದಿಂದ 71.750 ಕ್ಯುಸೆಕ್ ನೀರು ಬಿಟ್ಟಿದ್ದಾರೆ ಅಲ್ಲದೆ ಅವಳಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ನೀರು ತುಂಗಭದ್ರಾ ನದಿ ಸೇರುತ್ತಿರುವುದರಿಂದ ನದಿ ನೀರಿನಮಟ್ಟ ರಾತ್ರಿ ವೇಳೆಗೆ ಬಹುತೇಕ ಏರಿಕೆಯಾಗುವ ಸಂಭವವಿದೆ.

ಅಲರ್ಟ್:

ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲೇ ಇರಬೇಕು ಎಂದು ಉಪವಿಭಾಗಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಮಳೆ ಹೆಚ್ಚಾಗಬಹುದು ಹಾಗೂ ನದಿ ನೀರಿನಮಟ್ಟ ಹೆಚ್ಚಾಗುವ ಮಾಹಿತಿ ಇರುವದರಿಂದ ಎಲ್ಲರೂ ಅಲರ್ಟ್ ಆಗಿರಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ತಹಸೀಲ್ದಾರ್ ಭೇಟಿ:

ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹಾಗೂ ಅಧಿಕಾರಿಗಳ ತಂಡ ನದಿ ನೀರಿನಮಟ್ಟದ ಮಳೆ ಮಾಪನ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Share this article