ಮ್ಯಾನ್‌ಹೋಲ್‌ಗೆ ಕಾರ್ಮಿಕರ ಇಳಿಸಿ ಸ್ವಚ್ಛತಾ ಕಾರ್ಯ; ದಿಎಸ್‌ಎಸ್‌ ಖಂಡನೆ

KannadaprabhaNewsNetwork | Published : Jul 19, 2024 12:48 AM

ಸಾರಾಂಶ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಗರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಸ್ವಚ್ಛತಾ ಕಾಯ್ದೆ ಉಲ್ಲಂಘಿಸಿ ಮ್ಯಾನ್ ಹೋಲ್‌ಗೆ ಇಳಿಸಿ ಕೆಲಸ ನಿರ್ವಹಿಸಿದ್ದು, ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ನಗರಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಗರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ಸ್ವಚ್ಛತಾ ಕಾಯ್ದೆ ಉಲ್ಲಂಘಿಸಿ ಮ್ಯಾನ್ ಹೋಲ್‌ಗೆ ಇಳಿಸಿ ಕೆಲಸ ನಿರ್ವಹಿಸಿರುವ ಘಟನೆ ನಡೆದಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಘಟನೆಯನ್ನು ತೀವ್ರ ಖಂಡಿಸಿ, ನಗರಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಗುರುವಾರ ಬೆಳಿಗ್ಗೆ ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ಕಾರ್ಖಾನೆಯ ನಗರಾಡಳಿತ ಕಛೇರಿಗೆ ಸ್ವಚ್ಛತಾ ಕಾರ್ಮಿಕರೊಂದಿಗೆ ಆಗಮಿಸಿದ ದಲಿತ ಮುಖಂಡರು ನಗರಾಡಳಿತಾಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ನಗರಾಡಳಿತಾಧಿಕಾರಿ ಮೋಹನ್‌ ರಾಜ್‌ಶೆಟ್ಟಿ ಮ್ಯಾನ್ ಹೋಲ್‌ಗೆ ಇಳಿದು ಕೆಲಸ ನಿರ್ವಹಿಸುವಂತೆ ಯಾರಿಗೂ ನಾನು ಸೂಚಿಸಿಲ್ಲ. ಆದರೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಇಲಾಖೆಯ ಸೂಪರ್‌ವೈಸರ್‌ಗೆ ತಿಳಿಸಿದ್ದೇನೆ. ಅವರ ಉಸ್ತುವಾರಿ ಮೇಲೆ ಕೆಲಸ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಮ್ಯಾನ್ ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ಕಾರ್ಮಿಕರು ನಮ್ಮನ್ನು ಇಲಾಖೆಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಯಾವುದೇ ಸೌಲಭ್ಯಗಳನ್ನು ನೀಡದೆ ಮ್ಯಾನ್ ಹೋಲ್‌ಗೆ ಇಳಿದು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆಂದು ಅಳಲು ತೋಡಿಕೊಂಡರು.

ಕಾರ್ಖಾನೆಯ ನಗರಾಡಳಿತ ಇಲಾಖೆ ವ್ಯಾಪ್ತಿ ನ್ಯೂ ಕಾಲೋನಿ ಭಾಗದಲ್ಲಿ ಜೂ.೨೧ ಹಾಗೂ ಜು.೧೫ರಂದು ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡಿರುವ ಘಟನೆಗಳು ನಡೆದಿವೆ ಎನ್ನಲಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಈ ಮಾಹಿತಿಯನ್ನು ಸ್ವಚ್ಛತಾ ಕಾರ್ಮಿಕರು ದಲಿತ ಸಂಘರ್ಷ ಸಮಿತಿ ಮುಖಂಡರ ಗಮನಕ್ಕೆ ಬುಧವಾರ ಸಂಜೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ನಗರಾಡಳಿತ ಇಲಾಖೆ ಕಛೇರಿಗೆ ಭೇಟಿ ನೀಡಿದ ಮುಖಂಡರು ಸುಮಾರು ೨ ಗಂಟೆ ಕಾಲ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಘಟನೆ ತೀವ್ರವಾಗಿ ಖಂಡಿಸುವ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಮತ್ತು ಸಮಾಜ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ಕಾರ್ಮಿಕರಾದ ಸುಬ್ರಮಣಿ, ಕುಮಾರ್ ಮತ್ತು ಮಹಾದೇವ ಅವರ ಹೇಳಿಕೆ ಪಡೆದು ವಿಚಾರಣೆ ನಡೆಸಿದರು. ಈ ಹಂತದಲ್ಲಿ ಯಾವುದೇ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ನಗರಸಭೆ ವತಿಯಿಂದ ದೂರು ದಾಖಲು ಮಾಡಲು ನಿರ್ಧರಿಸಲಾಯಿತು.

ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ತಾಲೂಕು ಸಂಚಾಲಕ ಕೆ. ರಂಗನಾಥ್, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ ರಾಜ್, ಜಿಂಕ್‌ಲೈನ್ ಮಣಿ, ಪರಮೇಶ್ವರಪ್ಪ, ಎನ್. ಗೋವಿಂದ, ಶಾಂತಿ, ಪ್ರಸನ್ನ, ಕೃಷ್ಣಪ್ಪ, ಚಂದ್ರ, ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೂವರ ವಿರುದ್ಧ ದೂರು ದಾಖಲು:

ಘಟನೆಗೆ ಸಂಬಂಧಿಸಿದಂತೆ ನಗರಸಭೆ ವತಿಯಿಂದ ಪರಿಸರ ಅಭಿಯಂತರ ಪ್ರಭಾಕರ್‌ರವರು ನ್ಯೂಟೌನ್ ಪೊಲೀಸ್ ಠಾಣೆಗೆ ಸ್ವಚ್ಛತಾ ಕಾರ್ಮಿಕರ ಹೇಳಿಕೆ ಮೇರೆಗೆ ವಿಐಎಸ್‌ಎಲ್ ನಗರಾಡಳಿತಾಧಿಕಾರಿ ಮೋಹನ್‌ ರಾಜ್ ಶೆಟ್ಟಿ, ಸೂಪರ್ ವೈಸರ್ ಹಾಗೂ ಗುತ್ತಿಗೆದಾರ ಒಟ್ಟು ೩ ಜನರ ವಿರುದ್ಧ ದೂರು ನೀಡಲಾಗಿದೆ.ಇನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಗೋಪಾಲಪ್ಪ ಮಾತನಾಡಿ, ಕಾಯ್ದೆ ಪ್ರಕಾರ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಅಪರಾಧವಾಗಿದ್ದು, ಅದರಲ್ಲೂ ಯಾವುದೇ ಸೌಲಭ್ಯ (ಪರಿಕರ)ಗಳನ್ನು ನೀಡದೆ ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುವುದು ಮತ್ತೊಂದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ನಗರಸಭೆ ಮೂಲಕ ದೂರು ದಾಖಲಿಸಲಾಗಿದೆ ಎಂದರು.

Share this article