ಕೊಡಗು, ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ : ಮಂ-ಬೆಂ ಸಂಚಾರಕ್ಕೆ ಅಡ್ಡಿ

KannadaprabhaNewsNetwork |  
Published : Jun 27, 2025, 12:48 AM ISTUpdated : Jun 27, 2025, 09:42 AM IST
ಮದುಮಗಳ ಕರೆತರಲು ತೆಪ್ಪ ಬಳಕೆ. | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.

  ಬೆಂಗಳೂರು :  ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಗೆ ಕೊಡಗಿನ ಭಾಗಮಂಡಲ ಮತ್ತೆ ಜಲಾವೃತಗೊಂಡರೆ, ಗುಡ್ಡ ಕುಸಿತದಿಂದಾಗಿ ಶಿರಾಡಿ ಘಾಟ್‌ ಮತ್ತೆ ಬಂದ್‌ ಆಗಿದೆ. ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಪ್ರವಾಹ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ 18 ಸೇತುವೆಗಳು ಮುಳುಗಡೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಕೊಡಗು, ಚಿಕ್ಕಮಗಳೂರಿನ ಶಾಲೆಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿದೆ.

ನದಿಗಳಿಗೆ ಒಳಹರಿವು ಹೆಚ್ಚಳ:

ಕೇರಳದ ವೈನಾಡು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೆ 20,225 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 2,278.90 (ಗರಿಷ್ಟ 2284 ) ಅಡಿಗಳಿಗೆ ಏರಿದ್ದು, ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಭಾರೀ ಮಳೆಯಿಂದಾಗಿ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಮುಳುಗಡೆಯಾಗಿದೆ. ನಾಪೋಕ್ಲು-ಮೂರ್ನಾಡು ಸಂಪರ್ಕ ಕಡಿತಗೊಂಡಿದೆ. ಕೆಆರ್‌ಎಸ್‌ಗೆ 55 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯ ಭರ್ತಿಗೆ ಕೇವಲ 3 ಅಡಿ ಬಾಕಿಯಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಮೈದುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ತುಂಗೆ, ಮಾಲತಿ ನದಿಗಳಲ್ಲಿ ಪ್ರವಾಹ ಬಂದಿದೆ. ಶಿವಮೊಗ್ಗ ಸಮೀಪದ ತುಂಗಾ ನದಿಯಲ್ಲಿರುವ ರಾಮಮಂಟಪ ಮುಳುಗುವ ಹಂತಕ್ಕೆ ಬಂದಿದೆ. ತಾಲೂಕಿನ ಜೋಗಿಗುಂಡಿ, ಬರ್ಕಣ, ಒನಕೆ ಅಬ್ಬಿ ಫಾಲ್ಸ್ ಸೇರಿದಂತೆ ಎಲ್ಲಾ ಫಾಲ್ಸ್‌ಗಳೂ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ. ಶೃಂಗೇರಿ ಮಠದ ತುಂಗಾ ನದಿ ದಡದ ಕಪ್ಪೆಶಂಕರ ಮತ್ತೆ ಜಲಾವೃತಗೊಂಡಿದೆ.

ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವ ಕಾರಣ ಕೃಷ್ಣಾ ಹಾಗೂ ಅದರ ಉಪನದಿಗಳಿಗೆ ಪ್ರವಾಹ ಬಂದಿದ್ದು, ಬೆಳಗಾವಿ ಜಿಲ್ಲೆಯಲ್ಲಿ 18 ಸೇತುವೆಗಳು ಮುಳುಗಡೆಯಾಗಿವೆ. ಗುರುವಾರ ಒಂದೇ ದಿನ 8 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ 1 ಲಕ್ಷ 9 ಸಾವಿರ ಕ್ಯೂಸೆಕ್‌ ಒಳಹರಿವಿದೆ.

ಗುಡ್ಡ ಕುಸಿತ: ಮಂ-ಬೆಂ ಸಂಚಾರಕ್ಕೆ ಅಡ್ಡಿ:

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪದ ಏಲಕ್ಕಿ ಮಂಡಳಿ, ಆನೇಮಹಲ್, ದೊಡ್ಡತಪ್ಲೆ, ಕಪ್ಪಳಿ, ನೆಲ್ಯಾಡಿ ಸೇರಿ ಹಲವೆಡೆ ಗುಡ್ಡ ಕುಸಿದಿದ್ದು, ಬೆಂಗಳೂರು-ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹೆಗ್ಗದ್ದೆ ಬಳಿ ಇದೇ ಮೊದಲ ಬಾರಿಗೆ ಸುಮಾರು ಮೂನ್ನೂರು ಮೀಟರ್ ನಷ್ಟು ದೂರದವರಗೆ ಭೂಮಿ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಶೃಂಗೇರಿ ಸಮೀಪ ಆನೆಗುಂದ, ಸಂಕ್ಲಾಪುರ, ನೆಮ್ಮಾರು, ತನಿಕೋಡು ಸೇರಿದಂತೆ ಹಲವೆಡೆ ಗುಡ್ಡ ಕುಸಿಯುತ್ತಿದೆ. ರಾ.ಹೆ.169ರಲ್ಲಿ ಮಂಗಳೂರು-ಶಿವಮೊಗ್ಗ ನಡುವಿನ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಗಾಳಿ-ಮಳೆಗೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 85ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ.

ಮದುಮಗಳ ಕರೆತರಲು ತೆಪ್ಪ ಬಳಕೆ:ಕಳೆದ ವಾರ ಚೆರಿಯಪರಂಬುವಿನ ವರ ಹಾಗೂ ಮಡಿಕೇರಿಯ ವಧುವಿನ ವಿವಾಹ ನೆರವೇರಿದ್ದು, ವಧುವನ್ನು ಚೆರಿಯಪರಂಬುವಿನ ವರನ ಮನೆಗೆ ಕಳುಹಿಸಿಕೊಡಲಾಗಿತ್ತು. ಗುರುವಾರ ವಧುವನ್ನು ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯವಿತ್ತು. ಈ ಮಧ್ಯೆ, ಮಳೆಯಿಂದಾಗಿ ನಾಪೋಕ್ಲು-ಚೆರಿಯಪರಂಬು ರಸ್ತೆ ಪ್ರವಾಹದಲ್ಲಿ ಮುಳುಗಿತ್ತು. ಹೀಗಾಗಿ, ಮಧುಮಗಳ ಕರೆತರಲು ಬಂದವರು ತೆಪ್ಪದ ಮೂಲಕ ಪ್ರವಾಹದ ನೀರಿನಲ್ಲಿ ಸಾಗಿ, ಚೆರಿಯಪರಂಬುವಿನಲ್ಲಿರುವ ವರನ ಮನೆ ತಲುಪಿದರು.ವ್ಯಕ್ತಿಯ ರಕ್ಷಣೆ:

ಈ ಮಧ್ಯೆ, ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಕಪಿಲ ನದಿಯ ಸೇತುವೆ ಮೇಲಿಂದ ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ನದಿಗೆ ಬಿದ್ದಿದ್ದು, ಆತನನ್ನು ರಕ್ಷಣೆ ಮಾಡಲಾಗಿದೆ.

ಶಿರಾಡಿ ಭೂಕುಸಿತ- ಶೌಚಕ್ಕೆ ₹200:

ಉಪ್ಪಿನಂಗಡಿ: ಮಳೆಯಿಂದಾಗಿ ಶಿರಾಡಿಘಾಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-75ರ ಮಾರನಹಳ್ಳಿ ದೊಡ್ಡತಪ್ಪಲು ಎಂಬಲ್ಲಿ ಬುಧವಾರ ರಾತ್ರಿ ಗುಡ್ಡ ಕುಸಿದು ಮಂಗಳೂರು-ಬೆಂಗಳೂರು ನಡುವಿನ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಕಿ.ಮೀ.ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಪ್ರಯಾಣಿಕರು ಹಸಿವು, ಬಾಯಾರಿಕೆಯಿಂದ ಬಳಲುವಂತಾಯಿತು. ಪರಿಸರದಲ್ಲಿನ ಕೆಲ ಸಣ್ಣಪುಟ್ಟ ಹೋಟೆಲ್‌ಗಳಲ್ಲಿನ ಶೌಚಾಲಯ ಬಳಕೆಗೆ ₹200 ಶುಲ್ಕ ನೀಡಬೇಕಾಯಿತು. ಗುರುವಾರ ಮಧ್ಯಾಹ್ನದ ಹೊತ್ತಿಗೆ ಮಣ್ಣು ತೆರವುಗೊಳಿಸಿ, ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮುಖ್ಯ ರಸ್ತೆಯಲ್ಲಿ ಮಟನ್‌, ಚಿಕನ್‌ ಮಾರಾಟ: ಸ್ಥಳಾಂತರಕ್ಕೆ ಒತ್ತಾಯ
ಜೀವನದಲ್ಲಿ ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವವರು ನಿಜವಾದ ಸಾಧಕರು-ಸಂಸದ ಬೊಮ್ಮಾಯಿ