ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ

KannadaprabhaNewsNetwork |  
Published : Jun 18, 2025, 12:41 AM IST
ಚಿತ್ರ : 17ಎಂಡಿಕೆ1 : ಅಮ್ಮತ್ತಿ ಕೊಂಡಂಗೇರಿ ಸಮೀಪ ಪ್ರವಾಹ ಸಂಭವಿಸಿರುವುದು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, 18 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.

ಹಾರಂಗಿಯಿಂದ ಮಧ್ಯಾಹ್ನ 1 ಗಂಟೆ ವೇಳೆಗೆ 18 ಸಾವಿರ ಕ್ಯೂಸೆಕ್ ನೀರು ಹರಿಸಲಾಯಿತು. ಜಲಾಶಯಕ್ಕೆ ಭಾರಿ ನೀರು ಹರಿದು ಬರುತ್ತಿರುವ ಹಿನ್ನೆಲೆ, ಜಲಾಶಯದಿಂದ 18 ಸಾವಿರ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರು ಎಚ್ಚರವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಪ್ರವಾಹದ ನೀರು ಹೆಚ್ಚಾಗಿದೆ. ಭಾಗಮಂಡಲದ ಮೇಲ್ಸೇತುವೆ ಕೆಳಗಿದ್ದ ಅಂಗಡಿಗಳು ಮುಳುಗಡೆಗೊಂಡಿದ್ದು, ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ನೀರು ಪಾಲಾಗಿದೆ. ತಿಂಡಿ ತಿನಿಸು ವಸ್ತುಗಳು ಪ್ರವಾಹಕ್ಕೆ ತುತ್ತಾಗಿದೆ.

ಅಂಗಡಿಯಲ್ಲಿದ್ದ ವಸ್ತುಗಳ ತೆಗೆಯಲಾಗದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಸಾವಿರಾರು ರುಪಾಯಿ ಖರ್ಚು ವ್ಯಾಪಾರಕ್ಕೆ ಹಾಕಿದ್ದ ವಸ್ತುಗಳು ಹಾಳಾಗಿದೆ.

ಸಾಧ್ಯವಾದಷ್ಟು ವಸ್ತುಗಳ ಹೊರಕ್ಕೆ ತೆಗೆಯಲು ವ್ಯಾಪಾರಿಗಳು ಪರದಾಡುತ್ತಿದ್ದಾರೆ. ನೀರು ಕ್ಷಣ ಕ್ಷಣಕ್ಕೂ ಹೆಚ್ಚಳ ಆಗುತ್ತಿರುವ ಹಿನ್ನೆಲೆ ತಕ್ಷಣವೇ ಅಲ್ಲಿಂದ ಹೊರಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆ:

ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೂ ಜನರು ಪರದಾಟ ಪಡುವಂತಾಯಿತು. ಮೇಲ್ಸೇತುವೆ ಕೆಳಭಾಗದಲ್ಲಿ ನಿಂತು ಜನರು ಪಿಂಡ ಪ್ರದಾನ ಮಾಡಿದರು. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆಗೊಂಡಿದೆ. ಸಂಗಮದ ಉದ್ಯಾನವನ, ಸ್ನಾನಘಟ್ಟ, ಪಿಂಡ ಪ್ರಧಾನ ಸ್ಥಳಗಳು ಮುಳುಗಡೆಯಾಗಿದೆ.

ಅತ್ತ ಪಿಂಡ ಪ್ರಧಾನ ಟಿಕೆಟ್ ಕೌಂಟರ್ ಕಚೇರಿಗಳು ಜಲಾವೃತಗೊಂಡಿದೆ. ಮತ್ತೊಂದೆಡೆ ಕೇಶಮುಂಡನ ಕಟ್ಟಡ, ಕಾರು ಪಾರ್ಕಿಂಗ್ ಸಂಪೂರ್ಣ ಜಲಾವೃತವಾಗಿದೆ.

ಭಾಗಮಂಡಲ ದೇವಾಲಯದ ಮುಂಭಾಗದ ಆವರಣಕ್ಕೂ ನೀರು ನುಗುತ್ತಿದೆ.

ದೇವಾಲಯದ ಆವರಣದಲ್ಲಿರುವ ಅಂಗಡಿಗಳು ಈಗಾಗಲೇ ಜಲಾವೃತವಾಗಿದೆ.

ಕಾವೇರಿ ನದಿಯಲ್ಲಿ ಮತ್ತಷ್ಟು ನೀರು ಹರಿವು ಹೆಚ್ಚಳ ಸಾಧ್ಯತೆಯಿಂದಾಗಿ ಕಾವೇರಿ ನದಿ ಪಾತ್ರದ ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಮಡಿಕೇರಿ ನಗರದ ಹಲವೆಡೆ ಬರೆ ಕುಸಿತವಾಗಿದ್ದು ನಗರ ಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ವಾಗಿ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಹೆಚ್ಚಿನ ತೊಂದರೆ ಆಗದಂತೆ ನಗರ ಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸಿಬ್ಬಂದಿಗಳೊಂದಿಗೆ ಕ್ರಮ ಕೈಗೊಂಡರು.

ಕಾಫಿ ತೋಟ ಜಲಾವೃತ:

ಮಂಗಳವಾರ ಸುರಿದ ಭಾರಿ ಮಳೆಗೆ ಮಡಿಕೇರಿ ತಾಲೂಕು ಕಗ್ಗೋಡು ಬಿಳಿಗೇರಿ ಸಂಪರ್ಕ ಸೇತುವೆಯ ಬಳಿಯ ಕಾಫಿ ತೋಟ ಜಲಾವೃತಗೊಂಡಿದೆ.

ಭಾಗಮಂಡಲ ಹೋಬಳಿ ಚೇರಂಬಾಣೆ ಗ್ರಾಮ ಪಂಚಾಯಿತಿಯ ಬೆಂಗೂರು ಗ್ರಾಮದ ದೋಣಿ ಕಾಡು ಎಂಬಲ್ಲಿ ಪ್ರವಾಹ ಉಂಟಾಗಿದ್ದು, ಸ್ಥಳೀಯರು ದೋಣಿ ಮುಖಾಂತರ ಸಂಚಾರ ಮಾಡುತ್ತಿದ್ದಾರೆ. ಪ್ರವಾಹ ಬಂದಿರುವ ದೋಣಿಕಾಡು ಪ್ರದೇಶಕ್ಕೆ ಮಡಿಕೇರಿ ತಹಸೀಲ್ದಾರರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಿದರು. ಸ್ಥಳದಲ್ಲಿ ಭಾಗಮಂಡಲ ಹೋಬಳಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.

ಕಣಿವೆ ತೂಗು ಸೇತುವೆ ತಾತ್ಕಾಲಿಕ ಬಂದ್

ಕುಶಾಲನಗರ ತಾಲೂಕಿನ ಕಣಿವೆ ತೂಗು ಸೇತುವೆಯನ್ನು ತಹಸೀಲ್ದಾರರು ಪರಿಶೀಲಿಸಿದರು. ಮಳೆ ಹೆಚ್ಚಿರುವುದರಿಂದ ಸೇತುವೆಯಲ್ಲಿ ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗುವ ಗೇಟ್ ಗೆ ಬೀಗ ಅಳವಡಿಸಲಾಗಿದೆ ಎಂದು ತಹಸೀಲ್ದಾರರಾದ ಕಿರಣ್ ಗೌರಯ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!