ಜಿಲ್ಲೆಯಲ್ಲಿ ಧಾರಾಕಾರ ಮಳೆ: ಮೂಡಿಗೆರೆ, ಕಳಸ ಶಾಲೆಗಳಿಗೆ ರಜೆ

KannadaprabhaNewsNetwork |  
Published : Jul 07, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮೂಡಿಗೆರೆ ಮತ್ತು ಕಳಸ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮೂಡಿಗೆರೆ ಮತ್ತು ಕಳಸ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.

ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ ಶಾಲೆಗಳು ಮಾತ್ರವಲ್ಲದೇ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು.

ಉಳಿದಂತೆ ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು, ಎನ್‌.ಆರ್‌. ಪುರದಲ್ಲಿ ಮಳೆ ಇದ್ದರೂ ಶಾಲಾ ಕಾಲೇಜುಗಳು ಎಂದಿನಂತೆ ನಡೆದಿವೆ.

ರಸ್ತೆ ಬಿದ್ದ ಮರ, ವಿದ್ಯುತ್‌ ಸಮಸ್ಯೆ

ಮಳೆ ಗಾಳಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮರ ಧರೆಗುರುಳಿದ ವರದಿಯಾಗಿದೆ. ಮರ ಕೊಂಬೆ ಧರೆಗುರುಳುವ ವೇಳೆ ವಿದ್ಯುತ್‌ ತಂತಿ ಸಮೇತ ಬಿದ್ದ ಪರಿಣಾಮ ಜಿಲ್ಲೆಯ ಹಲವು ಗ್ರಾಮದಲ್ಲಿ ವಿದ್ಯುತ್‌ ಸಮಸ್ತೆ ಉಂಟಾಗಿತ್ತು. ಮಳೆ ನಡುವೆಯೂ ಬಿದ್ದ ಮರ ತೆರವು ಹಾಗೂ ವಿದ್ಯುತ್‌ ಕಂಬ ದುರಸ್ತಿ ಕಾಮಗಾರಿ ನಡೆದಿದೆ.

ಅಪಾಯ ಮಟ್ಟ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ, ನದಿ ಪಾತ್ರದ ಜನರಿಗೆ ತೊಂದರೆ ಉಂಟಾಗುವ ಜತೆಗೆ, ಸಂಪರ್ಕ ಕಳೆದುಕೊಳ್ಳುವ ಆತಂಕವಿದೆ.

ಬಣಕಲ್ ಸುತ್ತಮುತ್ತ ಕತ್ತಲು: ಕೊಟ್ಟಿಗೆಹಾರ: ಬಣಕಲ್ ಸುತ್ತಮುತ್ತ ಸೋಮವಾರ ಧಾರಾಕಾರ ಮಳೆಯಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.ತರುವೆಯ ಏಕಲವ್ಯ ಮಾದರಿ ವಸತಿ ಶಾಲೆ ಬಳಿಬೃಹದಾಕಾರದ ಮರವೊಂದು ವಿದ್ಯುತ್ ತಂತಿ ಮೇಲೆ‌ ಮರ‌ ಬಿದ್ದು ವಿದ್ಯುತ್ ಕಂಬಗಳು ಮುರಿದಿವೆ. ಗಾಳಿಮಳೆಯಿಂದ ಮತ್ತಿಕಟ್ಟೆಯಲ್ಲಿ ರಸ್ತೆಗೆ ಮರ ಬಿದ್ದು ಕೆಲಕಾಲ ಸ್ಥಗಿತಗೊಂಡಿದ್ದ ವಾಹನ ಸಂಚಾರಕ್ಕೆ ಮರವನ್ನು ತೆರವುಗೊಳಿಸಿ ಅನುವುಮಾಡಿಕೊಡಲಾಯಿತು. ಗುತ್ತಿ ಗ್ರಾಮದ ಜಗದೀಶ್ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಬಂಕೇನಹಳ್ಳಿ, ಗುಡ್ಡಟ್ಟಿ, ಬೆಟ್ಟಗೆರೆ, ಬಾಳೂರು ಭಾಗದಲ್ಲೂ ಮರ ಬಿದ್ದು ಅವಾಂತರ ಸೃಷ್ಟಿಯಾಗಿ ವಿದ್ಯುತ್ ಇಲ್ಲದೇ ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.

26 ಕಂಬ ಧರೆಗೆ:ಮೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ಮಾರ್ಗ ದುರಸ್ತಿ ಕಾರ್ಯದ ಬಗ್ಗೆ ಪತ್ರಿಕೆಗೆ ಪ್ರತಿಕ್ರಿ ಯಿಸಿರುವ ಮೆಸ್ಕಾಂ ಜೆಇ ಮಂಜುನಾಥ್, ಬಣಕಲ್ ಭಾಗದಲ್ಲಿ 26 ವಿದ್ಯುತ್ ಕಂಬಗಳು ನೆಲಕುರುಳಿದೆ. 25 ಸಿಬ್ಬಂದಿ ಮೂರು ತಂಡ ಗಳಾಗಿ ಕಾರ್ಯ ‌ನಿರ್ವಹಿಸುತ್ತಿದ್ದಾರೆ. ಅತಿಯಾದ ಗಾಳಿ ಮಳೆ ಕಾರ್ಯ ನಿರ್ವಹಣೆಗೆ ತೊಡಕಾಗಿದ್ದು ಮಳೆ ನಡುವೆಯೇ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ಮಾರ್ಗ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.-- ಬಾಕ್ಸ್‌--

ಸೋಮವಾರ ಬೆಳಗ್ಗೆ 7.30ರ ಮಳೆ ವಿವರ

ತಾಲೂಕುಮಳೆ ಪ್ರಮಾಣ (ಮಿ.ಮೀ)

ಕಳಸ48

ಮೂಡಿಗೆರೆ52

ಶೃಂಗೇರಿ66

ಕೊಪ್ಪ46

ನರಸಿಂಹರಾಜಪುರ21

ಚಿಕ್ಕಮಗಳೂರು10

ತರೀಕೆರೆ9

ಅಜ್ಜಂಪುರ4

ಕಡೂರು0

ಸರಾಸರಿ19

-- ಬಾಕ್ಸ್‌---

ಕಡೂರು ತಾಲೂಕಿನಲ್ಲಿ ಮಳೆ ಇಲ್ಲ

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ, ಇದೇ ಜಿಲ್ಲೆಗೆ ಸೇರಿದ ಕಡೂರು ಮತ್ತು ಅಜ್ಜಂಪುರದಲ್ಲಿ ಕನಿಷ್ಠ ಪ್ರಮಾಣ ಮಳೆ ಇಲ್ಲ. ಸೋಮವಾರ ಬೆಳಗ್ಗೆ 7.30ರ ಹವಾಮಾನ ವರದಿ ಪ್ರಕಾರ 1 ಮಿ.ಮೀ ಸಹ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ಅಜ್ಜಂಪುರದಲ್ಲಿ ಕೇವಲ 4 ಮಿ.ಮೀ ಮಳೆ ಯಾಗಿದೆ. ಇನ್ನೂ ಚಿಕ್ಕಮಗಳೂರು ತಾಲೂಕಿನಲ್ಲಿ 10, ತರೀಕೆರೆಯಲ್ಲಿ ಕೇವಲ 9 ಮಿ.ಮೀ ನಷ್ಟು ಮಳೆ ಆಗಿದೆ.

ಫೋಟೋ

ಚಿಕ್ಕಮಗಳೂರಿನ ಬಣಕಲ್ ಸುತ್ತಮುತ್ತ ಸೋಮವಾರ ಧಾರಾಕಾರ ಮಳೆಯಾಗಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೆಸ್ಕಾಂ ಸಿಬ್ಬಂದಿ ಮಳೆಯಲ್ಲಿ ದುರಸ್ತಿ ಮಾಡುತ್ತಿರುವುದು.--- ಬಾಕ್ಸ್...

ಮರ ಬಿದ್ದು ಮಹಿಳೆ ಕೈ ತುಂಡು

ಮೂಡಿಗೆರೆ: ತಾಲೂಕಿನಲ್ಲಿ ಮಳೆ ಆರ್ಭಟದಲ್ಲಿ ಮರ ಬಿದ್ದು ಮಹಿಳೆಯ ಕೈ ತುಂಡಾಗಿರುವ ದಾರುಣ ಘಟನೆ ನಡೆದಿದೆ.

ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಬೆಟ್ಟಗೆರೆ ಗ್ರಾಪಂ ವ್ಯಾಪ್ತಿಯ ಬಡವನದಿಣ್ಣೆ ಗ್ರಾಮದ ಪೂರ್ಣೇಶ್ ಅವರ ಮನೆ ಮೇಲೆ ಮರ ಬಿದ್ದು, ಮನೆ ಹೆಂಚುಗಳೆಲ್ಲಾ ಹಾನಿಯಾಗಿದೆ. ಸೋಮವಾರ ಬೆಳಗ್ಗೆ ಮಲೆಮನೆ ಸಮೀಪದ ತೋಟ ದಲ್ಲಿ ಮರಕಸಿ ಮಾಡುತ್ತಿದ್ದ ಪುಷ್ಪ (45) ಅವರ ಮೇಲೆ ಮರ ಬಿದ್ದು, ಎಡಗೈ ತುಂಡಾಗಿದೆ. ಅವರನ್ನು ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಬಾರಿ ಮಳೆ ಗಾಳಿ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಮಾತ್ರ ತಹಸೀಲ್ದಾರ್ ಎಸ್.ಅಶ್ವಿನಿ ರಜೆ ಘೋಷಿಸಿದ್ದರು. ಮಳೆ ಆರ್ಭಟ ಮುಂದುವರಿದ ಕಾರಣದಿಂದ ಸೋಮವಾರ ಬೆಳಗ್ಗೆ ಎಲ್ಲಾ ಪ್ರೌಢಶಾಲೆಗಳಿಗೂ ರಜೆ ಘೋಷಣೆ ಮಾಡಿದರು. ಸೋಮವಾರ ಮಳೆ ಆರ್ಭಟ ಮುಂದುವರಿದಿತ್ತು. ಮರು ದಿನ ಶಾಲೆಗಳಿಗೆ ದಿಢೀರ್ ರಜೆ ಘೋಷಿಸಿದರೆ ಮಾಹಿತಿ ಕೊರತೆಯಿಂದ ವಿದ್ಯಾರ್ಥಿಗಳು ಮಳೆ ಯಲ್ಲೇ ಶಾಲೆಗೆ ಬರುವ ಸ್ಥಿತಿ ಉಂಟಾಗುತ್ತದೆ. ಹಾಗಾಗಿ ಹಿಂದಿನ ದಿನವೇ ರಜೆ ಘೋಷಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ***** ಪೋಟೊ ೬ಮೂಡಿಗೆರೆ೧ಎ: ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದ ಪೂರ್ಣೇಶ್ ಎಂಬುವರ ಮನೆ ಮೇಲೆ ಮರ ಬಿದ್ದು, ಮನೆ ಹೆಂಚುಗಳು ಹಾನಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ