ನಸುಕಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : May 23, 2026, 01:30 AM IST
22ಕೆಎಂಎನ್ ಡಿ19 | Kannada Prabha

ಸಾರಾಂಶ

ಬಿಸಿಲ ಹೊಡೆತಕ್ಕೆ ತತ್ತರಿಸಿದ್ದ ದಾವಣಗೆರೆ ನಗರ, ಜಿಲ್ಲೆಯ ವಿವಿಧೆಗೆ ಶುಕ್ರವಾರ ನಸುಕಿನ ವೇಳೆ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬೆಳೆಗಳು, ತೋಟದ ಬೆಳೆಗಳು, ಮನೆಗಳು ಹಾನಿಗೀಡಾದ ಬಗ್ಗೆ ವರದಿಯಾಗುತ್ತಿದೆ.

- ಮಾಗಾನಹಳ್ಳಿ ಸುತ್ತಮುತ್ತ ಬತ್ತದ ಬೆಳೆ ಹಾನಿ । ತಗ್ಗುಪ್ರದೇಶ, ಹೊಸ ಬಡಾವಣೆಗಳ ನಿವಾಸಿಗಳ ಮುಂದುವರಿದ ಪರದಾಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಸಿಲ ಹೊಡೆತಕ್ಕೆ ತತ್ತರಿಸಿದ್ದ ದಾವಣಗೆರೆ ನಗರ, ಜಿಲ್ಲೆಯ ವಿವಿಧೆಗೆ ಶುಕ್ರವಾರ ನಸುಕಿನ ವೇಳೆ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಬೆಳೆಗಳು, ತೋಟದ ಬೆಳೆಗಳು, ಮನೆಗಳು ಹಾನಿಗೀಡಾದ ಬಗ್ಗೆ ವರದಿಯಾಗುತ್ತಿದೆ.

ತಾಲೂಕಿನ ಮಾಗಾನಹಳ್ಳಿ, ಅಮೃತ ನಗರ ಭಾಗದಲ್ಲಿ ಮಳೆಯಿಂದಾಗಿ ಸುಮಾರು 60-65 ಎಕರೆ ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಬತ್ತದ ಬೆಳೆ ನೆಲಕ್ಕೆ ಹತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬ ನೋವು, ಸಂಕಟದಲ್ಲಿ ಅನ್ನದಾತರಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆ, ಗಾಳಿ ಆರ್ಭಟಕ್ಕೆ ದಾವಣಗೆರೆ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ, ಹರಿಹರ ಕ್ಷೇತ್ರಗಳಲ್ಲಿ ಬೆಳೆಹಾನಿಯಾದ ಬಗ್ಗೆ, ಮನೆಗಳು ಹಾನಿಗೀಡಾದ ಬಗ್ಗೆ ವರದಿಯಾಗುತ್ತಿವೆ. ಇದರ ಬೆನ್ನಲ್ಲೇ ಶುಕ್ರವಾರ ನಸುಕಿನಲ್ಲಿ ಭಾರೀ ಸಿಡಿಲು, ಮಿಂಚು, ಗುಡುಗಿನ ಆರ್ಭಟದೊಂದಿಗೆ ಸುರಿದ ಮಳೆಯ ರಭಸಕ್ಕೆ ಕೈಗೆ ಬಂದಿದ್ದ ಬತ್ತದ ಬೆಳೆ ನೆಲ ಕಚ್ಚಿದೆ.

ಆರು ತಿಂಗಳ ಕಾಲ ಕಷ್ಟಪಟ್ಟು, ಸಾಲ ಸೋಲ ಮಾಡಿ, ಬೆವರು ಸುರಿಸಿ ಬೆಳೆದಿದ್ದ ಬತ್ತದ ಬೆಳೆ ಕೈಗೆ ಬಂದಿದೆ, ಇನ್ನೇನು ಕಟಾವು ಮಾಡಿ, ಮಾಡಿದ ಸಾಲ ತೀರಿಸಿಕೊಂಡು, ನೆಮ್ಮದಿಯಾಗಿ ಇರೋಣ ಅಂದುಕೊಂಡಿದ್ದ ರೈತರು ಈಗ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಳೆ ಸಂಕಷ್ಟ ತಂದೊಡ್ಡಿದೆ. ಕಟಾವಿಗೆ ಬಂದಿದ್ದ ಬೆಳೆ ಮಳೆ ಹೊಡೆತಕ್ಕೆ ಕಾಳು ಉದುರಿಸಿ, ಎಕರೆಗೆ ಐದಾರು ಚೀಲ ಬತ್ತ ಕೈಗೆ ಬಂದರೆ ಅದೇ ಹೆಚ್ಚು ಎನ್ನುವ ಸ್ಥಿತಿ ಇದೆ. ರಾಜ್ಯ ಸರ್ಕಾರ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿ, ಕೈ ಹಿಡಿಯಲಿ ಎಂದು ರೈತರು ಒತ್ತಾಯಿಸುತ್ತಾರೆ.

ಜಗಳೂರು ರಸ್ತೆಯ ಬಸವನಾಳ್ ಬಳಿ ಮುಖ್ಯರಸ್ತೆಯ ಬದಿಯಲ್ಲಿ ಬೆಳೆದಿದ್ದ ಭಾರೀ ಮರವೊಂದು ಮಳೆಯ ನೀರಿನ ಹರಿವು ಹಾಗೂ ಜೋರು ಗಾಳಿ ಬೀಸಿದ್ದರಿಂದ ಬೇರು ಸಡಿಲಗೊಂಡು ಧರೆಗೆ ಉರುಳಿದೆ. ಅದೃಷ್ಟವಶಾತ್ ಬೆಳ್ಳಂಬೆಳಗ್ಗೆಯೇ ಮರ ಉರುಳಿ ಬಿದ್ದಿದ್ದರಿಂದ ಯಾವುದೇ ಸಾವು-ನೋವು, ಅಪಾಯಗಳು ಸಂಭವಿಸಿಲ್ಲ. ಆದರೆ, ಬಸವನಾಳ್ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತಲ್ಲದೇ, ರೈತರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಮರವನ್ನು ತೆರವುಗೊಳಿಸಿ, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಕೈ ಜೋಡಿಸಿದರು.

ನಾಲ್ಕೈದು ದಿನಗಳ ಮುಂಚಿನವರೆಗೆ ಕಾದ ಕಾವಲಿಯಂತೆ ಝಳ ಆವರಿಸಿದ್ದ ಭೂರಮೆ ತಣಿಯುವಂತೆ ಸತತವಾಗಿ ಮಳೆಯಾಗಿ ವಾತಾವರಣ ತಂಪಾಗುವಂತಾಗಿದೆ. ಶುಕ್ರವಾರ ನಸುಕಿನಲ್ಲಿ ಶುರುವಾದ ಮಳೆಯಿಂದ ಜಿಲ್ಲಾ ಕೇಂದ್ರದ ತಗ್ಗು ಪ್ರದೇಶ, ಹೊಸ ಬಡಾವಣೆಗಳು, ಮೂಲ ಸೌಕರ್ಯಗಳಿಲ್ಲದ ಪ್ರದೇಶಗಳ ಜನರನ್ನು ಕಂಗಾಲುಗೊಳಿಸಿತ್ತು. ರಸ್ತೆ, ಚರಂಡಿ ಇಲ್ಲದಂತಹ ಖಾಸಗಿ ಬಡಾವಣೆ, ಹೊಸ ಬಡಾವಣೆಗಳಲ್ಲಿ ಕೆಸರು ಗುಂಡಿಗಳುಂಟಾಗಿದ್ದು, ಜನರು, ದ್ವಿಚಕ್ರ ವಾಹನ ಚಾಲಕರು, ಸವಾರರು ಪರದಾಡುವಂತಾಯಿತು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಸುರಿದ ಮಳೆಯಿಂದಾಗಿ ಇಲ್ಲಿನ ಸರಸ್ವತಿ ಬಡಾವಣೆ ಬಿ ಬ್ಲಾಕ್, ಜಯ ನಗರ, ಹಳೆ ಚಿಕ್ಕಮ್ಮಣ್ಣಿ ದೇವರಾಜ ಅರಸು ಬಡಾವಣೆ, ಹಳೆ ಬಿಪಿ ರಸ್ತೆಯ ಶಂಕರ್ ಬಡಾವಣೆ, ಹಳೆ ಬೇತೂರು ರಸ್ತೆ, ಭಾರತ ಕಾಲನಿ, ಎಚ್‌ಕೆಆರ್ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶಕ್ಕೆ ರಭಸದಿಂದ ಮಳೆನೀರು ನುಗ್ಗಿ ಬಂದಿದ್ದರಿಂದ ಜನರು ಆತಂಕಕ್ಕೀಡಾಗಿದ್ದರು. ಬೆಳ್ಳಂಬೆಳಗ್ಗೆಯೇ ಮಳೆ, ದಟ್ಟ ಮೋಡಗಳ ವಾತಾವರಣ ಕಂಡ ಜನರ ಬಾಯಿಂದ ಬಂದ ಹಾಡು, ಮೊಬೈಲ್‌ ವಾಟ್ಸಪ್, ಫೇಸ್‌ ಬುಕ್‌ಗಳಲ್ಲಿ ದಾವಣಗೆರೆ ಮಳೆಯ ದೃಶ್ಯಗಳಿಗೆ ಹಿನ್ನೆಲೆಯಾಗಿ ಮುಂಗಾರು ಮಳೆಯೇ ಹಾಡು ರಿಂಗಣಿಸುತ್ತಿತ್ತು.

ತಗ್ಗು ಪ್ರದೇಶದಲ್ಲಿನ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚರಿಸಲು ವಾಹನ ಸವಾರರು ಪರದಾಡಿದರು. ಶುಕ್ರವಾರ ಇಡೀ ದಿನ ದಟ್ಟಮೋಡಗಳು ಆವರಿಸಿದ್ದು, ಮತ್ತೆ ರಾತ್ರಿ ಅಥವಾ ನಸುಕಿನಲ್ಲಿ ಮಳೆಯಾಗುವ ಆತಂಕದಲ್ಲೇ ಜನ ರಾತ್ರಿ ಕಳೆಯುವಂತಾಗಿದೆ. ಅತ್ತ ನ್ಯಾಮತಿ, ಮಲೇಬೆನ್ನೂರು, ಸಂತೇಬೆನ್ನೂರು ಭಾಗದಲ್ಲೂ ಬೆಳಗ್ಗೆ 6 ಗಂಟೆಯಿಂದ ಗುಡುಗು ಸಿಡಿಲು ಸಹಿತ ವರುಣ ಆರ್ಭಟಿಸಿದ್ದಾನೆ.

- - -

(ಬಾಕ್ಸ್-1)

* ಶಂಕರ ಬಡಾವಣೆ ನಿವಾಸಿಗಳು ಅಳಲು ಜೋರು ಮಳೆಯಾದರೆ ತಮ್ಮ ಏರಿಯಾದ ಅನೇಕ ಕಡೆ ಜಲಾವೃತವಾಗುತ್ತದೆ. ಗುಂಡಿಗಳಲ್ಲಿ ಮಳೆ ನೀರು ನಿಂತು, ಕೆಸರಾಗುತ್ತದೆ. ಮನೆಗಳಿಗೂ ನೀರು ನುಗ್ಗುತ್ತದೆ, ಚರಂಡಿ ತುಂಬಿ ಹರಿಯುತ್ತದೆ, ಒಳ ಚರಂಡಿಯಲ್ಲಿ ಮಳೆ ನೀರು ಉಕ್ಕಿ ಬರುತ್ತದೆಯೆಂಬುದಾಗಿ ಅನೇಕರು ಅಳಲು ತೋಡಿಕೊಂಡರು. ಅದೇ ರೀತಿ ಸಮಸ್ಯೆ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಂಕರ ಬಡಾವಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

- - -

(ಬಾಕ್ಸ್‌-2)

* ಬೆಳೆ ಹಾನಿ ಸಂಕಟ ಮಧ್ಯೆ ಮುಂಗಾರು ಕೃಷಿಯ ಖುಷಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಜೀವ ತುಂಬಿದ್ದರೆ, ಮತ್ತೆ ಕೆಲವು ಕಡೆ ಕಟಾವಿಗೆ ಬಂದಿದ್ದ ಬತ್ತದ ಬೆಳೆ ಸಂಪೂರ್ಣ ನಾಶ‍ವಾಗಿದೆ. ಅಡಕೆ ಮರಗಳು, ತೆಂಗಿನ ಮರಗಳು ಧರೆಗುರುಳುತ್ತಿವೆ. ಬೆಳೆಗಳು, ತೋಟದ ಬೆಳೆಗಳು ಹಾನಿಗೀಡಾಗುತ್ತಿವೆ. ಅಪಾರ ಪ್ರಮಾಣದ ತೋಟದ ಬೆಳೆಗಳ ಹಾನಿಗೂ ಮಳೆ, ಗಾಳಿಯು ಕಾರಣವಾಗಿದೆ ಎನ್ನುತ್ತಾರೆ ರೈತರು. ಜಿಲ್ಲೆಯಲ್ಲಿ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಹೊಲಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಒಂದು ಕಡೆ ರೈತರು ಖುಷಿಯಾಗಿದ್ದರೆ, ಮತ್ತೊಂದು ಕಡೆ ಬೆಳೆ ಹಾನಿಗೊಳಗಾದ ರೈತರ ಮುಖದಲ್ಲಿ ನೋವು, ಸಂಕಷ್ಟದ ಗೆರೆ ಮೂಡಿವೆ.

- - -

(-ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತೋತ್ಸವದಲ್ಲಿ ವಿವಿಧ ಕಲಾವಿದರಿಂದ ನಾದ ಝೇಂಕಾರ
ಉತ್ತಮ ಸಮಾಜ ನಿರ್ಮಾಣವೇ ಭೀಮ್‌ ಆರ್ಮಿ ಉದ್ದೇಶ