ಕನ್ನಡಪ್ರಭ ವಾರ್ತೆ ಕಲಬುರಗಿ
ಈಗಾಗಲೇ ಜಿಲ್ಲೆಯಲ್ಲಿ ಹಿದೆಂದಿಗಿಂತಲೂ ಹೆಚ್ಚು 5 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ತೊಗರಿ ಫಸಲು ಕೂಡಾ ನಳನಳಿಸುತ್ತಿರುವಾಗಲೇ ಚಿತ್ತ ಮಳೆ ಜಿಲ್ಲಾದ್ಯಂತ 2 ದಿನದಿಂದ ಸುರಿಯತ್ತಿದೆ.
ಎತ್ತರದ ಪ್ರದೇಶದಲ್ಲಿ ಹೊಲಗದ್ದೆ ಇರುವವರಿಗೆ ಈ ಮಳೆಯಿಂದ ಚಿಂತೆಯಿಲ್ಲ, ಆದರೆ, ಕೆಳ ಪ್ರದೇಶದಲ್ಲಿ ತೊಗರಿ ಹೊಲಗಳಿರುವ ರೈತರು ಅದೆಲ್ಲಿ ತೊಗರಿಯಲ್ಲಿ ನೀರು ನಿಂತು ತೊಂದರೆ ಎದುರಾಗುವುದೋ ಎಂದು ಚಿಂತೆಯಲ್ಲಿ ಮುಳುಗಿದ್ದಾರೆ.ಏತನ್ಮಧ್ಯೆ ಕಳೆದ 15 ದಿನದಿಂದ ಮಳೆರಾಯ ಬಿಡುವು ನೀಡಿದ್ದರಿಂದ ಜಿಲ್ಲೆಯಲ್ಲಿ ರೈತರು ಜೋಳ, ಕಡಲೆ ಬಿತ್ತನೆಗೆ ಮುಂದಾಗಿದ್ದರು. ಇದೀಗ ಚಿತ್ತ ಮಳೆ ಸುರಿಯುತ್ತಿರೋದರಿಂದ ಬಿತ್ತನೆಗೆ ಅಡಚಣೆಯಾಗಿದೆ. ಕೆಲವರು ತಗ್ಗು ಪ್ರದೇಶದ ಹೊಲಗಳಿದ್ದ ರೈತರು ಚಿತ್ತ ಮಳೆ ಕೊನೆಯ ಚರಣದಲ್ಲಿ ಬಿತ್ತೋಣವೆಂದು ಮಳೆ ನಿಲ್ಲುವ ದಾರಿ ಕಾಯುತ್ತಿದ್ದಾರೆ.
ಕಲಬುರಗಿ ಮಹಾ ನಗರದಲ್ಲಂತೂ ನಿನ್ನೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರೋದರಿಂದ ಮಳೆ ನೀರು ತಗ್ಗುಗಳಲ್ಲಿ ತುಂಬಿ ಭಾರಿ ತೊಂದರೆ ಒಡ್ಡಿವೆ. ಇದಲ್ಲದೆ ಹಳೆ ಜೇವರ್ಗಿ ರಸ್ತೆಯಲ್ಲಿಯೂ ಮಳೆ ನೀರು ಮಡುಗಟ್ಟಿ ನಂತು ವಾಹನ ಸವಾರರಿಗೆ ಸವಾಲೊಡ್ಡಿವೆ. ಇದಲ್ಲದೆ ಆರ್‌ಟಿ ನಗರದ ಸರ್ವಿಸ್ ರಸ್ತೆಯಲ್ಲಿ ಮಲೆ ನೀರು ಮಡುಗಟ್ಟಿ ನಿಂತಿದ್ದು ತೊಂದರೆ ಎದುರಾಗಿದೆ. ಈ ರಸ್ತೆ ಬಳಸಿ ಸಾಗುವ ಬಡಾವಣೆಯ ನಾಗರಿಕರು ಕೆಸರಲ್ಲಿ ಹೋಗೋದು ಹೇಗೆಂದು ಕಂಗಾಲಾಗಿದ್ದಾರೆ.ಎರಡು ದಿನದಿಂದ ಜಿಲ್ಲಾದ್ಯಂತ ಮಳೆ:
ಮಹಾಗಾಂವ್ ಕ್ರಾಸ್‌ನಲ್ಲಿ 16 ಮಿ.ಮೀ., ಅಫಜಲ್ಪುರ, ಆತನೂರ್, ಗೊಬ್ಬೂರ್, ಕರಜಗಿಯಲ್ಲಿ ಸರಾಸರಿ 22 ರಿಂದ 40 ಮಿ.ಮೀ., ಕಲಬುರಗಿ ನಗರದಲ್ಲಿ 45 ಮಿ.ಮೀ., ಫರತಾಬಾದ್, ಪಟ್ಟಣ ಸಾವಳಗಿಯಲ್ಲಿ ಸರಾಸರಿ 30 ಮಿ.ಮೀ., ಸೇಡಂ, ಆಡಕಿ, ಮುಧೋಳ, ಇಲ್ಲೆಲ್ಲಾ ಸರಾಸರಿ 25 ರಿಂದ 33 ಮಿ.ಮೀ. ಮಳೆ ಸುರಿದ ವರದಿಗಳಿವೆ.