ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಮಾದಾಪುರ, ಕುಂಬೂರು ಗ್ರಾಮಗಳಲ್ಲಿ ಮನೆ ಮೇಲೆ ಮರ ಉರುಳಿ ಭಾಗಶಃ ಹಾನಿಯಾಗಿರುವ ಕುರಿತು ವರದಿಯಾಗಿದೆ. ನಿಡ್ತ ಗ್ರಾಮದಲ್ಲಿ ಮರವೊಂದು ಉರುಳಿ ಕೆಲಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು. ನಂತರ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಆಡಳಿತ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಕೋವರ್‌ಕೊಲ್ಲಿಯಿಂದ ಐಗೂರು, ಹೊಸತೋಟ, ಕುಂಬೂರು, ಮಾದಾಪುರದವರೆಗೆ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಕ್ಷರಶಃ ಕತ್ತಲೆ ಆವರಿಸಿದೆ. ಸೆಸ್ಕ್ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.ತಲ್ತರೆಶೆಟ್ಟಳ್ಳಿಯ ಬೋಪಯ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವ ಕುರಿತು ವರದಿಯಾಗಿದೆ. ನಗರೂರು ಗ್ರಾಮದ ಲಿಲ್ಲಿ ಮೆನೆಜಿಸ್ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ತಾಲೂಕು ಕಚೇರಿ ಸಿಬ್ಬಂದಿಗಳು ತೆರಳಿ, ವಿವರವನ್ನು ಪಡೆದಿದ್ದಾರೆ.
ಮಳೆ ವಿವರ:
ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿ 114 ಮಿಮೀ ಮಳೆಯಾಗಿದೆ. ಶನಿವಾರಸಂತೆ ಹೋಬಳಿಯಲ್ಲಿ 100 ಮಿ.ಮೀ, ಶಾಂತಳ್ಳಿ 154 ಮಿ.ಮೀ, ಕೊಡ್ಲಿಪೇಟೆ ಹೋಬಳಿಯಲ್ಲಿ 80.60 ಮಿ.ಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.