ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಗೆ ಶಾಸಕ ಮಹೇಶ ಮನವಿ

KannadaprabhaNewsNetwork |  
Published : May 27, 2025, 11:51 PM IST
27ಎಚ್‌ಯುಬಿ24 ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಗೋವಿಂದರಾವ್ ಅವರಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ವಿವಿಧ ಅಭಿವೃದ್ಧಿ ಅಂಶಗಳ ಮನವಿ ಸಲ್ಲಿಸಿದ್ದಾರೆ. | Kannada Prabha

ಸಾರಾಂಶ

ಬಿಡಿಎ ಮಾದರಿಯಲ್ಲಿ ಹುಡಾವನ್ನು ಕೂಡ ಮೇಲ್ದರ್ಜೆಗೆ ಏರಿಸಿ ಸೌಕರ್ಯಗಳನ್ನು ಕಲ್ಪಿಸಬೇಕು. ಬೆಳಗಾವಿ- ಧಾರವಾಡ ಹಾಗೂ ತುಮಕೂರು- ದಾವಣಗೆರೆ ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು.

ಹುಬ್ಬಳ್ಳಿ: ಧಾರವಾಡಕ್ಕೆ ಭೇಟಿ ನೀಡಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಗೋವಿಂದರಾವ್ ಅವರಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ವಿವಿಧ ಅಭಿವೃದ್ಧಿ ಅಂಶಗಳ ಮನವಿ ಸಲ್ಲಿಸಿದ್ದಾರೆ.

ಕಲ್ಯಾಣ ಕರ್ನಾಟಕ ಮಾದರಿಯಂತೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ₹2 ಸಾವಿರ ಕೋಟಿ ಮೀಸಲಿರಿಸಬೇಕು. ಧಾರ್ಮಿಕ ಹಾಗೂ ಪಾರಂಪರಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಘೋಷಣೆ, ಬೆಂಗಳೂರು ನಗರಕ್ಕೆ ಉಸ್ತುವಾರಿ ಸಚಿವರು ಇರುವಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೂ ಒಬ್ಬರು ಉಸ್ತುವಾರಿ ಸಚಿವರ ನೇಮಕ, ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಪಡಿಸಿ ಉದ್ಯೋಗ ಸೃಷ್ಟಿಸಲು ಕ್ರಮ, ಹುಬ್ಬಳ್ಳಿ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ (ಐಟಿ, ಬಿಟಿ ಘಟಕಗಳ ಸ್ಥಾಪನೆ), ಹುಬ್ಬಳ್ಳಿಯಲ್ಲಿ ಸುಸಜ್ಜಿತ ಪ್ರಾದೇಶಿಕ ಕ್ಯಾನ್ಸರ್ ಸೆಂಟರ್ ಸ್ಥಾಪನೆ, ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಹುಬ್ಬಳ್ಳಿಯಲ್ಲೇ ಉಳಿಸಿ- ಬೆಳೆಸಲು ಸೂಕ್ತ ಅನುದಾನ ಒದಗಿಸಲು ಕ್ರಮ, ಐತಿಹಾಸಿಕ ಘನತೆ ಹೆಚ್ಚಿಸುವ ಸ್ಥಳಗಳ ಅಭಿವೃದ್ಧಿ, ಕರ್ನಾಟಕ ವಿವಿ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಒತ್ತು, ಎಫ್‌ಎಂಸಿಜಿ ಕ್ಲಸ್ಟರ್‌ಗೆ ಕಡಿಮೆ ದರದಲ್ಲಿ ಜಾಗ ಒದಗಿಸುವುದು, ಹುಬ್ಬಳ್ಳಿ ಎಪಿಎಂಸಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ಅಲ್ಲದೆ, ಬಿಡಿಎ ಮಾದರಿಯಲ್ಲಿ ಹುಡಾವನ್ನು ಕೂಡ ಮೇಲ್ದರ್ಜೆಗೆ ಏರಿಸಿ ಸೌಕರ್ಯಗಳನ್ನು ಕಲ್ಪಿಸಬೇಕು. ಬೆಳಗಾವಿ- ಧಾರವಾಡ ಹಾಗೂ ತುಮಕೂರು- ದಾವಣಗೆರೆ ನೇರ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು. ಘೋಷಣೆಯಾಗಿರುವ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳನ್ನು ಕಾರ್ಯರೂಪಕ್ಕೆ ತರಬೇಕು. ಬೆಂಗಳೂರು ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿಯೂ ಎಂಎಸ್ಎಂಇ ಸಲುವಾಗಿ ಶಾಶ್ವತ ಪ್ರದರ್ಶನ ಕೇಂದ್ರ ಸ್ಥಾಪನೆ, ಬೆಳಗಾವಿ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕೆಲ ಕಚೇರಿ ಸ್ಥಳಾಂತರ, ರೈತರ ಬದುಕು ಕಿತ್ತುಕೊಂಡಿರುವ ಬೆಣ್ಣಿಹಳ್ಳ- ತುಪ್ಪರಿಹಳ್ಳ ಸಮಸ್ಯೆಗಳಿಗೆ ಪರಿಹಾರ, ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ₹312 ಕೋಟಿ ಯೋಜನೆ ಸಿದ್ಧಗೊಳಿಸಿ ಬಿಜೆಪಿ ಸರ್ಕಾರ ಚಾಲನೆ ನೀಡಿದ್ದ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳುವಂತಾಗಬೇಕು. ಬೆಣ್ಣಿಹಳ್ಳಕ್ಕಾಗಿ ಸಿದ್ಧಪಡಿಸಿರುವ ₹1300 ಕೋಟಿ ಯೋಜನೆ ಅನುಮೋದನೆ ಕೊಡಿಸಿ ಚಾಲನೆ ನೀಡುವುದು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24x7 ಕುಡಿಯುವ ನೀರಿನ ಯೋಜನೆ ಶೀಘ್ರ ಪೂರ್ಣಗೊಳಿಸುವುದು. ಪಾಲಿಕೆ ವ್ಯಾಪ್ತಿಯಲ್ಲಿ ಶೀಘ್ರ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ