ಮಳೆ ಕೊರತೆ ಹಿನ್ನೆಲೆ ತತ್ತರಿಸಿದ್ದ ಜನರು ಈಗ ನಿರಾಳರಾಗಿದ್ದು ಮುಂಗಾರು ಅಂತ್ಯದ ವೇಳೆ ಮಳೆ ಚುರುಕುಗೊಂಡು ಜೋರು ಮಳೆಯಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುತೇಕ ಕಡೆ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕನ್ನಡ ಪ್ರಭ ವಾರ್ತೆ ಹನೂರು
ಮಳೆ ಕೊರತೆ ಹಿನ್ನೆಲೆ ತತ್ತರಿಸಿದ್ದ ಜನರು ಈಗ ನಿರಾಳರಾಗಿದ್ದು ಮುಂಗಾರು ಅಂತ್ಯದ ವೇಳೆ ಮಳೆ ಚುರುಕುಗೊಂಡು ಜೋರು ಮಳೆಯಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುತೇಕ ಕಡೆ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತಡರಾತ್ರಿ ಸುರಿದ ಜೋರು ಮಳೆಗೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೊಳಗಾಗಿದೆ. ಈ ಕುರಿತು ಸ್ಥಳೀಯ ಯುವಕ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮಳೆ ನೀರು ಮನೆಗಳಿಗೆ ನುಗ್ಗಿದ್ದು ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಎಲ್ಲಾ ಆಹಾರ ಪದಾರ್ಥ- ದಿನಸಿ ವಸ್ತುಗಳು ನೀರುಪಾಲಾಗಿದ್ದು ಜನರ ಕಷ್ಟಕ್ಕೆ ನೆರವಾಗಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಗೆ ಮನೆ ಗೋಡೆ ಕುಸಿತ-ವೃದ್ಧೆ ಪಾರು:
ವೈಶಂಪಾಳ್ಯ ಗ್ರಾಮದಲ್ಲಿ ರೈತ ರಾಮಸ್ವಾಮಿ ಎಂಬವರಿಗೆ ಸೇರಿದ ಮನೆ ಮಳೆ ಆರ್ಭಟಕ್ಕೆ ಕುಸಿದಿದ್ದು ವೃದ್ಧೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಹಳ್ಳದ ಸಮೀಪವೇ ಇವರ ಮನೆಯಿದ್ದು ಗೋಡೆ ಕುಸಿತದ ಬಳಿಕ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಕೂಡ ಕೊಚ್ಚಿಹೋಗಿದೆ. ಈ ಕುರಿತು ರೈತ ರಾಮಸ್ವಾಮಿ ಮಾತನಾಡಿ, ಈ ರೀತಿ ಮಳೆಯಾಗಿದ್ದು 50-60 ವರ್ಷಗಳ ಹಿಂದೆ ಅದಾದ ಬಳಿಕ ಈ ಪರಿ ಜೋರು ಮಳೆಯಾಗಿರಲಿಲ್ಲ. ತಾಯಿ ಸ್ವಲದರಲ್ಲೇ ಪಾರಾದರು. ಮನೆಯಲ್ಲಿದ್ದ ಬೀರುವಿನಲ್ಲಿ 40 ಗ್ರಾಂ ಚಿನ್ನ 70,000 ರು.ನಗದು ಸೇರಿದಂತೆ ಬಟ್ಟೆ, ಆಹಾರ ಪದಾರ್ಥ ಎಲ್ಲವೂ ಕೊಚ್ಚಿ ಹೋಗಿದೆ ಎಂದು ಅಳಲು ತೋಡಿಕೊಂಡರು.
ಧರೆಗೆ ಉರುಳಿದ ಬೃಹತ್ ಮರ:
ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಕೆಇಬಿ ಕಚೇರಿಯ ಮುಂಭಾಗದಲ್ಲಿದ ಬೃಹತ್ ಮರ ಧರೆಗುರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟು ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ತಡೆಗೋಡೆ ಕುಸಿತ ಬಚಾವಾದ ಆಟೋ ಚಾಲಕ:
ಹನೂರು ಪಟ್ಟಣದಿಂದ ಅಜಿಪುರ ಮಾರ್ಗದಲ್ಲಿ ಸಿಗುವ ಅರ್ಕನಹಳ್ಳಿ ರಾತ್ರಿ ಸುರಿದ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದ ರಭಸಕ್ಕೆ ಸೇತುವೆಯ ಒಂದು ಭಾಗದ ತಡೆಗೋಡೆ ಖುಷಿಗೆ ಬಿದ್ದಿದ್ದು ಗೂಡ್ಸ್ ಆಟೋ ವಾಹನ ಸವಾರರೊಬ್ಬರು ಇದೇ ಮಾರ್ಗದಲ್ಲಿ ಬಂದಿರುವುದರಿಂದ ಹಳ್ಳದ ನೀರಿನಲ್ಲಿ ತೆರಳಲು ಆಗದೆ ವಾಹನ ತಡೆಗೋಡೆ ಕುಸಿದಿರುವ ಭಾಗಕ್ಕೆ ವಾಲಿದ ತಕ್ಷಣ ಆಟೋ ಚಾಲಕ ಬಚಾವ್ ಘಟನೆ ಜರುಗಿದೆ ಅಂತ ರಾಜ್ಯ ರಸ್ತೆ ಹೀಗಾಗಿರುವುದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆ ಗಮನವರಿಸಿ ಕೂಡಲೇ ಕೊಡೆ ಖುಷಿ ಬೀರುವುದರಿಂದ ದುರಸ್ತಿ ಪಡಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ. .
ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ, ವಾಹನ ಸವಾರರ ಪರದಾಟ:
ಹನೂರು ಪಟ್ಟಣದಿಂದ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಚಂಗವಾಡಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು ಹೀಗಾಗಿ ಮಳೆಗೆ ಬರಹಳ್ಳ ತುಂಬಿ ಹರಿದ ಪರಿಣಾಮ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ ವಾಹನ ಸವಾರರು ಹೋಗಿಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು
ರಾತ್ರಿ 8ರಿಂದದ ಮಧ್ಯರಾತ್ರಿ 11, 12 ಗಂಟೆಯವರೆಗೆ ನಿರಂತರವಾಗಿ ಸುರಿದ ಪರಿಣಾಮ ಅಪಾರ ಪ್ರಮಾಣವಾದ ನೀರು ಹಳ್ಳಗಳ ಮೂಲಕ ಹರಿದು ಹೋಗುತ್ತಿದೆ ಜೊತೆಗೆ ರೈತರ ಜಮೀನುಗಳಲ್ಲಿಯೂ ಕೆರೆಕಟ್ಟೆಗಳು ತೆರೆದ ಬಾವಿಗಳು ನೀರಿನ ಅಂತರ್ಜಲ ವೃದ್ಧಿಗೊಳ್ಳಲು ಅನುಕೂಲವಾಗಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.