ಅಬ್ಬರಿಸಿದ ಮಳೆ, ತುಂಬಿ ಹರಿದ ಹಳ್ಳ

KannadaprabhaNewsNetwork |  
Published : Jul 18, 2025, 12:49 AM IST
ಪೋಟೊ17ಕೆಎಸಟಿ1: ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಬಿದ್ದಿರುವ ಮನೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದರು. 17ಕೆಎಸಟಿ1ಎ: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಹಳ್ಳದಲ್ಲಿ ನೀರು ಹರಿಯುತ್ತಿರುವದು. ಮೀನುಗಾರರು ಬಲೆಯನ್ನು ಬೀಸುತ್ತಿರುವ ದೃಶ್ಯ.17ಕೆಎಸಟಿ1ಬಿ: ಕುಷ್ಟಗಿ ತಾಲೂಕಿನ ಹೆಸರೂರ ಸಮೀಪದ ಜಮೀನೊಂದರಲ್ಲಿ ನಿಂತಿರುವ ನೀರು. | Kannada Prabha

ಸಾರಾಂಶ

ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ಚರಂಡಿ ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆ ಮೇಲೆ ಹರಿಯಿತು. ಚರಂಡಿ ತ್ಯಾಜ್ಯವೆಲ್ಲ ರಸ್ತೆ ಮೇಲೆ ಹರಿದ ಪರಿಣಾಮ ದುರ್ನಾತ ಬೀರಿತು. ಬಿತ್ತನೆ ಮಾಡಿದ ಬಳಿಕ ಮಳೆ ಮಾಯವಾದ ಪರಿಣಾಮ ಬಿತ್ತಿದ ಬೆಳೆ ಒಣಗುವುದನ್ನು ನೋಡಿದ ರೈತರು ಹರಗಲು ಶುರುಮಾಡಿದ್ದರು.

ಕುಷ್ಟಗಿ:

ಪಟ್ಟಣ, ತಾಲೂಕಿನ ದೋಟಿಹಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಹಳ್ಳ-ಕೊಳ್ಳ ತುಂಬಿ ಹರಿದಿದೆ. ತಿಂಗಳ ಬಳಿಕ ಮಳೆ ಸುರಿದ ಪರಿಣಾಮ ಬಿತ್ತಿದ ಬೆಳೆಗೆ ವರದಾನವಾಗಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಬುಧವಾರ ರಾತ್ರಿ 8 ಗಂಟೆಗೆ ಶುರುವಾದ ಮಳೆ ಎರಡು ಗಂಟೆಗೂ ಅಧಿಕ ಕಾಲ ಗುಡುಗು ಮತ್ತು ಸಿಡಿಲಿನ ಅರ್ಭಟದೊಂದಿಗೆ ಭರ್ಜರಿ ಸುರಿಯಿತು. ಮಳೆಯಿಂದ ವಿದ್ಯುತ್‌ ಕಡಿತಗೊಳಿಸಿದ ಪರಿಣಾಮ ತಾಲೂಕಿನ ಬಹುತೇಕ ಹಳ್ಳಿಯ ಜನರು ಕತ್ತಲೆನಲ್ಲಿಯೇ ರಾತ್ರಿ ಕಳೆದರು.

ಭರ್ತಿಯಾದ ಚರಂಡಿ:

ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ಚರಂಡಿ ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆ ಮೇಲೆ ಹರಿಯಿತು. ಚರಂಡಿ ತ್ಯಾಜ್ಯವೆಲ್ಲ ರಸ್ತೆ ಮೇಲೆ ಹರಿದ ಪರಿಣಾಮ ದುರ್ನಾತ ಬೀರಿತು. ಬಿತ್ತನೆ ಮಾಡಿದ ಬಳಿಕ ಮಳೆ ಮಾಯವಾದ ಪರಿಣಾಮ ಬಿತ್ತಿದ ಬೆಳೆ ಒಣಗುವುದನ್ನು ನೋಡಿದ ರೈತರು ಹರಗಲು ಶುರುಮಾಡಿದ್ದರು. ಆದರೆ, ಬುಧವಾರ ಸುರಿದ ಮಳೆಯಿಂದ ಬೆಳೆಗಳು ಜೀವ ಹಿಡಿದುಕೊಂಡಿದ್ದ ಬೆಳೆ ಚೇತರಿಕೆ ಕಾಣಬಹುದು ಎಂದು ತೋಪಲಕಟ್ಟಿಯ ರೈತ ದ್ಯಾಮಪ್ಪ ಹೇಳಿದರು.

ತುಂಬಿ ಹರಿದ ಹಳ್ಳ:

ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ದೋಟಿಹಾಳ, ಬಿಜಕಲ್, ಮುದೇನೂರು, ಟಕ್ಕಳಕಿ, ಮದಲಗಟ್ಟಿ, ಬಳೂಟಗಿ, ರ್‍ಯಾವಣಕಿ, ಜಾಲಿಹಾಳ ಸೇರಿದಂತೆ ಅನೇಕ ಸಣ್ಣ ಪುಟ್ಟ ಹಳ್ಳ, ಕೆರೆ, ಕೃಷಿಹೊಂಡ ತುಂಬಿ ಹರಿದವು. ಮೀನುಗಾರರು ಮೀನು ಹಿಡಿಯಲು ಬಲೆ ಹಾಕುತ್ತಿರುವುದು ಬಿಜಕಲ್ ಗ್ರಾಮದ ಹಳ್ಳದಲ್ಲಿ ಕಂಡು ಬಂತು.

ಕುಸಿದ 2 ಮನೆ:

ತಳವಗೇರಾದಲ್ಲಿ 1, ಯರಗೇರಾದಲ್ಲಿ 1 ಮಣ್ಣಿನ ಮನೆ ಮಳೆಯಿಂದ ಕುಸಿದಿದ್ದು ಗ್ರಾಮಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕುಷ್ಟಗಿ ಹೋಬಳಿ 49.0 ಮೀಮೀ, ಹನಮನಾಳ ಹೋಬಳಿ 4.7 ಮೀಮೀ, ತಾವರಗೇರಾ 59.5 ಮೀಮೀ, ಹನುಮಸಾಗರ 15.4 ಮೀಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ