ಭಟ್ಕಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಹಲವೆಡೆ ಹಾನಿ

KannadaprabhaNewsNetwork |  
Published : Jun 16, 2025, 03:45 AM ISTUpdated : Jun 16, 2025, 03:46 AM IST
ಪೊಟೋ ಪೈಲ್ : 15ಬಿಕೆಲ್1,2,3,4,5 | Kannada Prabha

ಸಾರಾಂಶ

ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದ ನಂತರ ಬಿರು ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ.

ಭಟ್ಕಳ: ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದ ನಂತರ ಬಿರು ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಒಂದೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಗಾಳಿಗೆ ಹಲವು ಕಡೆ ಹಾನಿಯಾದ ಘಟನೆ ನಡೆದಿದೆ.

ತಾಲೂಕಿನಲ್ಲಿ ಭಾನುವಾರ ಬೆಳಿಗ್ಗೆವರೆಗೆ 43 ಮಿ.ಮೀ. ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಲ್ಲಿ 550ಕ್ಕೂ ಅಧಿಕ ಮಿ.ಮೀ. ಮಳೆಯಾಗಿದೆ. ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಗಾಳಿಯೂ ಬೀಸುತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ವ್ಯಾಪಕ ಮಳೆಗೆ ಎಲ್ಲ ಕಡೆ ನೀರು ನಿಂತು ಜನರಿಗೆ ತೊಂದರೆ ಉಂಟಾಯಿತು. ಭಾರಿ ಮಳೆ ಗಾಳಿಗೆ ಹಲವು ಕಡೆ ಮರ, ವಿದ್ಯುತ್‌ ಕಂಬ ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.

ಪಟ್ಟಣದ ಚೌಥನಿಯ ಕೀರ್ತಿನಗರದ ಜಟಕೇಶ್ವರ ದೇವಸ್ಥಾನದ ಮೇಲೆ ಬೃಹತ್ ಮರ ಬಿದ್ದು ದೇವಸ್ಥಾನದ ಚಾವಣಿ ಸಂಪೂರ್ಣ ಜಖಂಗೊಂಡಿದೆ.

ಪಟ್ಟಣದ ಜಂಬೂರಮಠದ ನಿವಾಸಿ ರಾಮಾ ನಾಯ್ಕ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯ ಒಳಗಡೆ ಕುಟಂಬ ಸದಸ್ಯರಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೌಥನಿಯಿಂದ ಮುಂಡಳ್ಳಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಮರವೊಂದು ವಿದ್ಯುತ್‌ ತಂತಿ ಮೇಲೆ ಮುರಿದು ಬಿದ್ದು, ವಿದ್ಯುತ್‌ ಕಂಬ ತುಂಡಾಗಿ ರಸ್ತೆಗೆ ಬಿದ್ದಿದ್ದು, ಕೆಲವು ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದ ಬಸ್ತಿ ರೋಡ್‌ ನಲ್ಲಿ ಕೂಡ ಇದೇ ರೀತಿ ವಿದ್ಯುತ್‌ ಕಂಬ ತುಂಡಾಗಿ ರಸ್ತೆಗೆ ಬಿದ್ದಿದೆ.

ತಾಲೂಕಿನಲ್ಲಿ ಮಳೆ ಗಾಳಿ ಆರ್ಭಟ ಮುಂದುವರೆದಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದಲ್ಲಿ ಭಾರೀ ಗಾಳಿಗೆ ಹಲವು ಅಂಗಡಿಗಳ ಮುಂಬದಿಯ ಮಾಡಿಗೆ ಹಾಕಿದ್ದ ಶೀಟ್ ಮತ್ತು ಅಂಗಡಿ ಮುಂಬದಿಗೆ ಮಾರಾಟಕ್ಕೆ ಇಟ್ಟ ಸಾಮಗ್ರಿ ಹಾರಿ ಹೋಗಿದೆ. ಪಟ್ಟಣದ ಗದ್ದುಗೆ ಸಮೀಪದ ಇಲೆಕ್ಟ್ರಾನಿಕ್ ಅಂಗಡಿಯ ಮುಂಬದಿಯ ಗಾಜು ಕಳಚಿ ಬಿದ್ದು ಪುಡಿಪುಡಿಯಾಗಿದೆ. ಕೆಲವು ಕಡೆ ನಿಲ್ಲಿಸಿಟ್ಟ ಬೈಕ್ ಕೂಡ ಬಿದ್ದು ಹಾನಿಯಾಗಿದೆ. ಗ್ರಾಮಾಂತರ ಭಾಗದಲ್ಲಿ ಅಡಕೆ ಮುಂತಾದ ಮರಗಳು ಭಾರೀ ಗಾಳಿಗೆ ನೆಲಕ್ಕುರುಳಿದೆ. ಗಾಳಿ ಬಂದ ಸಂದರ್ಭದಲ್ಲಿ ವಿದ್ಯುತ್ ಸ್ಥಗಿತಗೊಳಿಸುತ್ತಿರುವುದರಿಂದ ಕೆಲವು ಕಡೆ ಅನಾಹುತ ತಪ್ಪಿದೆ. ವ್ಯಾಪಕ ಮಳೆಗೆ ಪಟ್ಟಣದ ಸೇರಿದಂತೆ ಹಲವು ಕಡೆ ಮಳೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆ ಉಂಟಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ