ಮಲೆನಾಡಾದ್ಯಂತ ಮಳೆ ಅಬ್ಬರ: ಜನ ಜೀವನ ಅಸ್ತವ್ಯಸ್ತ

KannadaprabhaNewsNetwork | Published : Jul 16, 2024 12:33 AM

ಸಾರಾಂಶ

ಬಾಳೆಹೊನ್ನೂರು- ಮೇಲ್ಪಾಲ್ ರಸ್ತೆಯಲ್ಲಿರುವ ಅರಳಿಕೊಪ್ಪ, ಕೊಪ್ಪ ತಾಲೂಕಿನ ಹಗಲಗಂಡಿ, ಜಯಪುರದ ಹೆಗ್ಗೂರು, ಮೂಡಿಗೆರೆ ತಾಲೂಕಿನ ದೇವರಮನೆ- ಕೋಗಿಲೆ ರಸ್ತೆಯಲ್ಲಿ ಮರಗಳು ರಸ್ತೆಗಳಿಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಮಲೆನಾಡಿನಲ್ಲಿ ಸೋಮವಾರ ದಿನವಿಡೀ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರಿಳಿದ್ದರಿಂದ ರಸ್ತೆ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಬಾಳೆಹೊನ್ನೂರು- ಮೇಲ್ಪಾಲ್ ರಸ್ತೆಯಲ್ಲಿರುವ ಅರಳಿಕೊಪ್ಪ, ಕೊಪ್ಪ ತಾಲೂಕಿನ ಹಗಲಗಂಡಿ, ಜಯಪುರದ ಹೆಗ್ಗೂರು, ಮೂಡಿಗೆರೆ ತಾಲೂಕಿನ ದೇವರಮನೆ- ಕೋಗಿಲೆ ರಸ್ತೆಯಲ್ಲಿ ಮರಗಳು ರಸ್ತೆಗಳಿಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಕೊಪ್ಪ ತಾಲೂಕಿನ ತಲಮಕ್ಕಿ, ಸಣ್ಣಕೆರೆ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ತರೀಕೆರೆ ತಾಲೂಕಿನ ಕರಕುಚ್ಚಿ, ಉಡೇವಾ, ಬೈರನಾಯಕನಹಳ್ಳಿ ಸೇರಿ ಹಲವೆಡೆ ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಭಾಗದಲ್ಲಿ ಎರಡು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಸಣ್ಣ ಪುಟ್ಟ ಅವಘಡಗಳು ನಡೆದಿವೆ. ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಅಡಕೆ ಬೆಳೆಗೆ ಕೊಳೆ ಔಷಧಿ ಸಿಂಪಡಿಸಲು ಮಳೆ ಅಡ್ಡಿಯಾಗಿದೆ.

ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಬಲವಾಗಿ ಗಾಳಿ ಬೀಸುತ್ತಿದ್ದು, ನಿರಂತರ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಭದ್ರಾ ಜಲಾಶಯದಲ್ಲಿ 16,041 ಕ್ಯೂಸೆಕ್‌ ಒಳ ಹರಿವು ಇತ್ತು. ಹಾಗೆಯೇ ತುಂಗಾ ಹಾಗೂ ಹೇಮಾವತಿ ಜಲಾಶಯಗಳಲ್ಲೂ ಒಳ ಹರಿವು ಏರಿಕೆಯಾಗಿತ್ತು. ನದಿ ಆಸುಪಾಸಿನಲ್ಲಿರುವ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನದಿ ಸೇರುವ ಹಳ್ಳಗಳು ತುಂಬಿ ಹರಿಯುತ್ತಿವೆ.

ಚಿಕ್ಕಮಗಳೂರು ಸೇರಿ ಮಲೆನಾಡಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಸೋಮವಾರ ರಾತ್ರಿ ನಂತರವೂ ನಿರಂತರವಾಗಿ ಸುರಿಯುತ್ತಿತ್ತು. ದ್ವಿಚಕ್ರ ಸೇರಿ ಇತರೆ ವಾಹನಗಳ ಸಂಚಾರಕ್ಕೂ ಕೆಲವೆಡೆ ಅಡ್ಡಿಯಾಗಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಯೇ ಮಕ್ಕಳು ಶಾಲೆಗಳಿಗೆ ತೆರಳಿದರು, ಚಿಕ್ಕ ಮಕ್ಕಳನ್ನು ಶಾಲೆಗೆ ಬಿಟ್ಟು ಕರೆದುಕೊಂಡು ಬರುವ ಪೋಷಕರಿಗೆ ಮಳೆಯಿಂದಾಗಿ ತುಂಬಾ ತ್ರಾಸಾಗಿತ್ತು.

ತರೀಕೆರೆ ತಾಲೂಕಿನಲ್ಲಿ ಮಳೆ ಜೋರಾಗಿದ್ದು, ಆದರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ತುಂತುರು ಮಳೆಯಾಗಿದ್ದು, ಮಳೆ ಅವಲಂಬಿತ ಕೃಷಿ ಬೆಳೆಗೆ ಅನುಕೂಲವಾಗುತ್ತಿದೆ.

ಕೆರೆಕಟ್ಟೆಯಲ್ಲಿ 136.8 ಮಿ.ಮೀ. ಗರಿಷ್ಠ ಮಳೆ:

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ದಾಖಲಾಗಿರುವ ಮಳೆ ಪ್ರಮಾಣದಲ್ಲಿ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಅತಿ ಹೆಚ್ಚು ಅಂದರೆ,

136.8 ಮಿ.ಮೀ. ಮಳೆಯಾಗಿದ್ದರೆ, ಕಡೂರು ಪಟ್ಟಣದಲ್ಲಿ ಕನಿಷ್ಠ 5.3 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ವಿವಿಧ ತಾಲೂಕಿನ ಹಲವೆಡೆ ಬಿದ್ದಿರುವ ಮಳೆ ವಿವರ ಮಿ.ಮೀಗಳಲ್ಲಿ ಇಂತಿದ್ದು, ಚಿಕ್ಕಮಗಳೂರು 15, ವಸ್ತಾರೆ 32.7, ಆಲ್ದೂರು 37, ಜೋಳದಾಳ್ 30, ಅತ್ತಿಗುಂಡಿ 53.6, ಸಂಗಮೇಶ್ವರಪೇಟೆ 24, ಕೆ.ಆರ್.ಪೇಟೆ 20, ಬ್ಯಾರುವಳ್ಳಿ 34, ಮಳಲೂರು 21,1, ದಾಸರಹಳ್ಳಿ 11.2, ಮೂಡಿಗೆರೆ 32,4, ಕೊಟ್ಟಿಗೆಹಾರ 56, ಗೋಣಿಬೀಡು 45, ಜಾವಳಿ 60.7, ಕಳಸ 76.2, ಎನ್‌.ಆರ್‌.ಪುರ 35.2 ಬಾಳೆಹೊನ್ನೂರು 45, ಮೇಗರಮಕ್ಕಿ 40, ಶೃಂಗೇರಿ 72.4, ಕಿಗ್ಗ 106.4, ಕೊಪ್ಪ 56, ಹರಿಹರಪುರ 65, ಜಯಪುರ 47.8, ಬಸರಿಕಟ್ಟೆ 74, ಕಮ್ಮರಡಿ 73.6, ತರೀಕೆರೆ 24, ಲಕ್ಕವಳ್ಳಿ 27.6, ರಂಗೇನಹಳ್ಳಿ 24.6, ಉಡೇವಾ 16.4, ತಣಿಗೆಬೈಲು 23.6, ತ್ಯಾಗದಬಾಗಿ 25, ಹುಣಸಘಟ್ಟ 20.4, ಬೀರೂರು 13, ಸಖರಾಯಪಟ್ಟಣ 12.4, ಸಿಂಗಟಗೆರೆ 17.4, ಪಂಚನಹಳ್ಳಿ 5.8, ಅಜ್ಜಂಪುರ 21, ಶಿವನಿ 12.2, ಬುಕ್ಕಾಂಬುದಿಯಲ್ಲಿ 24.2 ಮಿ.ಮೀ. ಮಳೆಯಾಗಿದೆ.ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆ

ಕೊಟ್ಟಿಗೆಹಾರ, ಬಣಕಲ್, ಕೊಟ್ಟಿಗೆಹಾರ, ಬಾಳೂರು ಸುತ್ತಮುತ್ತ ಸೋಮವಾರ ಬೆಳಗ್ಗೆ ಧಾರಾಕಾರ ಮಳೆ ಸುರಿಯಿತು. ಸೋಮವಾರ ಸಂತೆ ದಿನವಾದ್ದರಿಂದ ಸಂತೆಗೆ ಬರುವ ಜನ ತೀವ್ರ ಮಳೆಯಿಂದ ಹೈರಾಣಾದರು. ತೀವ್ರ ಮಳೆಗೆ ತೋಟ ಕೂಲಿ ಕಾರ್ಮಿಕರು ಕೂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿಯುವಂತಾಯಿತು. ಚಾರ್ಮಾಡಿ ಘಾಟಿಯಲ್ಲೂ ಕೂಡ ನಿರಂತರ ಧಾರಾಕಾರ ಮಳೆ ಸುರಿದು ಮಂಜು ಮುಸುಕಿನ ವಾತಾವರಣ ಕಂಡು ಬಂತು. ಮಂಜು ಮುಸುಕಿನ ವಾತಾವರಣದಿಂದ ವಾಹನ ಸವಾರರು ವಾಹನ ಚಲಾಯಿಸಲು ಪರದಾಡಿದರು.

ಬಣಕಲ್ ಸಮೀಪದ ಕೋಗಿಲೆ ರಸ್ತೆಯಲ್ಲಿ ಮರ ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಕೋಗಿಲೆ ಗ್ರಾಮಸ್ಥರು ಮರವನ್ನು ತೆರವುಗೊಳಿಸಿದರು. ಬಣಕಲ್ ಸಮೀಪದ ಗುಡ್ಡಹಟ್ಟಿ ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು ಕಂಬ ತುಂಡಾಗಿ ಹಾನಿಯಾಗಿದೆ. ಬಣಕಲ್ ರಾಷ್ಟ್ರೀಯ ಹೆದ್ದಾರಿ ಹಳೆ ಅಂಚೆ ಕಚೇರಿ ಬಳಿಯಲ್ಲಿ ಚರಂಡಿ ಮುಚ್ಚಿ ಹೋಗಿರುವುದರಿಂದ ಧಾರಾಕಾರ ಸುರಿದ ಮಳೆಗೆ ನೀರು ಹೆದ್ದಾರಿ ಮೇಲೆ ಹರಿಯಿತು. ವಾಹನ ಸವಾರರು ರಸ್ತೆ ಮೇಲೆ ವಾಹನ ಚಲಾಯಿಸಲು ಪರದಾಡಿದರು. ಕೆಲವು ದಿನಗಳ ಹಿಂದೆಯೂ ಇದೇ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆಯಲ್ಲಿ ನೀರು ಮೇಲಿನ ಒಳ ರಸ್ತೆಯಿಂದ ಕೆಳ ಹೆದ್ದಾರಿಗೆ ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ.

Share this article