ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ರೋಹಿಣಿ ಮಳೆಯಿಂದಾಗಿ ಪೂರ್ವ ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಸಂತಸ ಮೂಡಿದೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಮಿಂಚಿನೊಂದಿಗೆ ಮಳೆಯಾದರೆ, ಕೆಲವೆಡೆ ಜಿಟಿಜಿಟಿ ಮಳೆ ಸುರಿದಿದೆ.ಸಂಪಿಗೆ, ಯಲದಬಾಗಿ, ತಳವಾರನಹಳ್ಳಿ, ದ್ಯಾಮಸಂದ್ರ, ಮಾಸ್ತಿಗೊಂಡನಹಳ್ಳಿ ಸೇರಿ ಸಂಪಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ೫ ಸೆಂಮೀ. ಮಳೆಯಾಗಿದೆ. ಪಟ್ಟಣದ ಸುತ್ತಮುತ್ತಲಿನ ಹಾವಾಳ, ತಾವರೇಕೆರೆ, ಮುನಿಯೂರು, ಬಾಣಸಂದ್ರ, ಬೊಮ್ಮೇನಹಳ್ಳಿ ಎ.ಹೊಸಹಳ್ಳಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.
ತಾಲೂಕಿನಾದ್ಯಂತ ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೋಟದ ಸಾಲು, ಅಡಿಕೆ ಸಾಲು, ಬಾಳೆ ಮತ್ತು ಹೊಲಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದೆ. ಕೆಲವೆಡೆ ಚೆಕ್‌ಡ್ಯಾಮ್‌ಗಳು, ಕೃಷಿ ಹೊಂಡಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿದಂತಾಗಿದೆ.
ತಾಲೂಕಿನ ದಂಡಿನಶಿವರ ಹೋಬಳಿಯ ಹಡವನಹಳ್ಳಿ ಜನತಾ ಹೌಸ್ ನ ನಾಗರಾಜು ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.