ಮಳೆ ಅಬ್ಬರ: ಜಿಲ್ಲೆ ಹಲವೆಡೆ ಅವಾಂತರ ಸೃಷ್ಟಿ

KannadaprabhaNewsNetwork |  
Published : May 27, 2025, 12:12 AM IST
ಬೆಳಗಾವಿ- ಗೋವಾ ಹೆದ್ದಾರಿ ಬಂದ್‌ ಆಗಿದೆ | Kannada Prabha

ಸಾರಾಂಶ

ಬೆಳಗಾವಿ ನಗರದಲ್ಲಿ ಸೋಮವಾರ ತುಸು ಮಳೆ ತಗ್ಗಿದ್ದರೂ ಮೋಡ ಕವಿದ ವಾತಾವರಣ ಮುಂದುವರೆದಿದೆ. ಜಿಟಿ-ಜಿಟಿ ಮಳೆ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರದ ಘಟ್ಟ, ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ ಕಳೆದ 24 ಗಂಟೆಗಳಿಂದ ಹೆಚ್ಚಾಗಿದೆ. ಹೀಗಾಗಿ ಕೃಷ್ಣಾ ಸೇರಿದಂತೆ ಜಿಲ್ಲೆಯ ನದಿಗಳ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಪರಿಣಾಮ ಜಿಲ್ಲೆಯ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಗೋಕಾಕದಲ್ಲಿ ಮನೆಗೋಡೆ ಕುಸಿದು ಬಿದ್ದಿದ್ದರಿಂದ 3 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಳಗಾವಿ- ಗೋವಾ ಹೆದ್ದಾರಿ ಮೇಲೆ ಸಂಚಾರ ಸ್ಥಗಿತಗೊಂಡಿದೆ. ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ನದಿಗಿರುವ 3 ಕೆಳಹಂತದ ಸೇತುವೆ ಜಲಾವೃತವಾಗಿವೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕೃಷ್ಣಾ ನದಿ ನೀರಿನ ಪ್ರಮಾಣ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ.

ಕೃಷ್ಣಾ ನದಿಗೆ 25 ಸಾವಿರ ಕ್ಯುಸೆಕ್‌ಗಿಂತಲೂ ಹೆಚ್ಚಿನ ಒಳ ಹರಿವು ಇದ್ದು ಹಿಪ್ಪರಗಿ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗಿದೆ. ಸದ್ಯಕ್ಕೆ ಯಾವುದೇ ಕೆಳ ಹಂತದ ಸೇತುವೆ ಮುಳುಗಡೆಯಾಗಿಲ್ಲ. ನೀರು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ನಿರಂತರ ಮಳೆಯಿಂದ ಕೊಲ್ಲಾಪುರದ ಪಂಚಗಂಗಾ ನದಿಯ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗಿ ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹಲವು ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ. ನಿಪ್ಪಾಣಿ ತಾಲೂಕಿನ ಭಾರವಾಡ- ಕುನ್ನೂರು, ಸಿದ್ನಾಳ- ಕುನ್ನೂರು, ಅಕ್ಕೋಳ- ಸಿದ್ನಾಳ ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿವೆ. ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿರುವುದರಿಂದ ಘಟಪ್ರಭಾ ನದಿ ಮತ್ತು ಹಿರಣ್ಯಕೇಶಿ ನದಿಯಲ್ಲಿ ನೀರು ಹರಿಯುತ್ತಿದೆ.

ಬೆಳಗಾವಿ- ಗೋವಾ ಹೆದ್ದಾರಿ ಬಂದ್‌:

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯಲ್ಲಿ ಒಳ‌ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಬೆಳಗಾವಿ-ಗೋವಾ ಸಂಪರ್ಕಿಸುವ ಹೆದ್ದಾರಿ ಬಂದ್ ಆಗಿದೆ. ಖಾನಾಪುರ ತಾಲೂಕಿನ ಕಣಕುಂಬಿ ಮಲಪ್ರಭಾ ನದಿ ಉಗಮ ಸ್ಥಾನ. ಇದೇ ಮಾರ್ಗದಲ್ಲಿ ಬರುವ ಕಸಮಳಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತದೆ. ಏಕಾಏಕಿ ನೀರು ಹೆಚ್ಚಳ ಆಗಿದ್ದರಿಂದ ಮಣ್ಣಿನ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ.

ಬೆಳಗಾವಿ- ಜಾಂಬೋಟಿ, ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದೆ. ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ನದಿಯಲ್ಲಿ ಮಣ್ಣಿನ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಲಾಗಿತ್ತು. ನೀರಿನ ಹರಿವು ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ರಸ್ತೆ ಕೊಚ್ಚಿ ಹೋಗಿದೆ. ನಿರ್ಮಾಣ ಹಂತದ ಸೇತುವೆ ಕೂಡ ಭಾಗಶಃ ಮುಳುಗಡೆಯಾಗಿದೆ. ಮಳೆಗಾಲ ಮುಗಿಯುವವರೆಗೂ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಬೆಳಗಾವಿ, ಖಾನಾಪುರ, ರಾಮನಗರ ಮಾರ್ಗವಾಗಿ ಸವಾರರು ಗೋವಾಗೆ ತೆರಳುತ್ತಿದ್ದಾರೆ.

ಬೆಳಗಾವಿಯಲ್ಲಿ ತಗ್ಗಿದ ಮಳೆ:

ಬೆಳಗಾವಿ ನಗರದಲ್ಲಿ ಸೋಮವಾರ ತುಸು ಮಳೆ ತಗ್ಗಿದ್ದರೂ ಮೋಡ ಕವಿದ ವಾತಾವರಣ ಮುಂದುವರೆದಿದೆ. ಜಿಟಿ-ಜಿಟಿ ಮಳೆ ಮುಂದುವರೆದಿದೆ. ಕಳೆದ ಎರಡ್ಮೂರು ದಿನಗಳಿಂದ ಮಳೆ ಅಬ್ಬರ ಜೋರಾಗಿತ್ತು. ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಮಳೆ ಜೊತೆಗೆ ಶೀತ ಗಾಳಿ ಬೀಸುತ್ತಿದೆ. ಇದರಿಂದಾಗಿ ತಂಪು ವಾತಾವರಣ ನಿರ್ಮಾಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ