- ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
- ಯಾದಗಿರಿ ಬ್ರಿಡ್ಜ್ ಕಂ ಬ್ಯಾರೇಜಿನಿಂದ 3.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ- ಭೀಮಾತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ: ಹೊಲಗದ್ದೆಗಳ ಜಲಾವೃತ, ಬೆಳೆಹಾನಿ
----ಕನ್ನಡಪ್ರಭ ವಾರ್ತೆ ಯಾದಗಿರಿ
ಮಹಾರಾಷ್ಟ್ರ ಸೇರಿದಂತೆ ಹಲವೆಡೆ ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಭೀಮಾನದಿ ಅರ್ಭಟಿಸುತ್ತಿದೆ, ಭೀಮಾತೀರದಲ್ಲಿ ಪ್ರವಾಹ ಭೀತಿ ಮೂಡಿಸಿದೆ. ಮಹಾರಾಷ್ಟ್ರ ಸೇರಿದಂತೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸತತ ಭಾರಿ ಮಳೆಯಿಂದಾಗಿಬಹುತೇಕ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಭೀಮೆಯೊಡಲು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ನದಿತೀರದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ಈ ಜೊತೆಗೆ, ಸತತ ಮಳೆ ಹಾಗೂ ಪ್ರವಾಹದಿಂದಾಗಿ ರೈತಾಪಿ ವರ್ಗ ಮತ್ತೇ ಕುಸಿದು ಬಿದ್ದಂತಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಬಳಿಯ ಬ್ರಿಡ್ಜ್ ಕಂ ಬ್ಯಾರೇಜಿನಿಂದ ನೀರು ಬಿಡುಗಡೆಯಾಗಿ, ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನದಿತೀರದ ಗ್ರಾಮಗಳಲ್ಲಿನ ಹೊಲಗದ್ದೆಗಳೆಲ್ಲ ಜಲಾವೃತಗೊಂಡು, ಒಮ್ಮೆ ಒಣ ಬರ, ಈಗ ಹಸಿ ಬರದಿಂದಾಗಿ ಬೆಳೆಹಾನಿ ಅನುಭವಿಸಿದ ರೈತವರ್ಗವನ್ನು ಕಂಗಾಲಾಗಿಸಿದೆ.ಮಂಗಳವಾರ ಒಳಹರಿವು ಹೆಚ್ಚಿದ್ದರಿಂದ, ಯಾದಗಿರಿ ಸಮೀಪದ ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜಿನ 24 ಗೇಟುಗಳನ್ನು ತೆರೆದು 3.50ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ಭೀಮಾನದಿ ಅಪಾಯಮಟ್ಟ ತಲುಪಿದಂತಾಗಿದೆ. ಭೀಮಾನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತ, ಹತ್ತಿ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಶ್ರೀಕಂಗಳೇಶ್ವರ ಹಾಗೂ ಶ್ರೀವೀರಾಂಜನೇಯ ದೇವಾಲಯಗಳು ಜಲಾವೃತಗೊಂಡಿವೆ. ನಾಯ್ಕಲ್ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಜಲಾವೃತಗೊಂಡಿದೆ, ತೆನೆ ಕಟ್ಟುವ ಹಂತಕ್ಕೆ ಬಂದಿದ್ದ ಭತ್ತದ ಬೆಳೆ ಹಾಳಾಗುವ ಭೀತಿ ಎದುರಾಗಿದೆ. ಹಿನ್ನೀರು ನುಗ್ಗಿ ಹೊಲಗದ್ದೆಗಳು ಕೆರೆಯಂಗಳದಂತಾಗಿವೆ. ಬೆಳೆ ಕಳೆದುಕೊಂಡು ಕಂಗಲಾದ ಅನ್ನದಾತರು ಕಣ್ಣೀರು ಹಾಕುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು, ಬೀರನಾಳ, ಶಿವನೂರು, ಕುಮನೂರು ಹಾಗೂ ಅರ್ಜುಣಗಿ ಸೇರಿದಂತೆ ಮೊದಲಾದ ಕಡೆ ಬೆಳೆ ಹಾನಿಯಾಗಿದೆ. ಮಲ್ಹಾರ-ಲಿಂಗೇರಿ ಗ್ರಾಮಗಳ ಮಧ್ಯೆದ ಸೇತುವೆ ಜಲಾವೃತಗೊಂಡಿದ್ದರಿಂದ, ಸಂಚಾರ ಸಂಪರ್ಕ ಕಡಿತಗೊಂಡಿದೆ. ಜೋಳದಡಗಿ ಬ್ರಿಡ್ಜ್ ಮೇಲೆ ಅಂಟಿಕೊಂಡು ಹರಿಯುವ ಭೀಮಾನದಿ ನೀರು ಹರಿಯುತ್ತಿದೆ. ಹೀಗೆಯೇ ಹರಿವು ಹೆಚ್ಚಾದರೆ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಗುರುಸುಣಗಿ ಬ್ಯಾರೇಜಿನ ಗೇಟುಗಳು ತುಕ್ಕು ಹಿಡಿದಿದ್ದರಿಂದ, ಅದ ತೆಗೆಯಲಿಕ್ಕಾಗದ್ದರಿಂದ, ಹಿನ್ನೀರು ನುಗ್ಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ನುಗ್ಗಿದ್ದರಿಂದ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-23ವೈಡಿಆರ್8 : ನಾಯ್ಕಲ್ ಗ್ರಾಮದಲ್ಲಿ ಹೊಲಗದ್ದೆಗಳಿಗೆ ನೀರು ನುಗ್ಗಿ, ಕೆರೆಯಂಗಳದಂತಾಗಿವೆ.
23ವೈಡಿಆರ್9 : ಭೀಮಾತೀರದ ಗ್ರಾಮಗಳಿಗೆ ಶಾಸಕ ತುನ್ನೂರು ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿದರು.23ವೈಡಿಆರ್10 : ಗುರುಸುಣಗಿ ಬ್ಯಾರೇಜಿನಿಂದ ಭೀಮಾನದಿಗೆ 3.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಿದಾಗಿನ ನೋಟ.
23ವೈಡಿಆರ್11 : ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ಭೀಮಾನದಿ ಹಿನ್ನಿರು ನುಗ್ಗಿ ಬೆಳೆಹಾನಿ.