ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಕೆಲ ಸಂಘಟನೆ ಕಾರ್ಯಕರ್ತರು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ನಾಲ್ಕು ಬೃಹತ್ ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ವಾಹನಗಳನ್ನು ತಡೆದು ಒಂದು ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಂಘಟನೆಗಳ ಕಾರ್ಯಕರ್ತರು ಜೊತೆಯಾಗಿ ಗೋಮಾಂಸ ಸಾಗಿಸುತ್ತಿದ್ದ ಬೃಹತ್ ಲಾರಿಗಳನ್ನು ತಡೆದು ಅವುಗಳನ್ನು ಪರಿಶೀಲನೆ ಮಾಡಿ ಲಾರಿಯಲ್ಲಿರುವ ಚಾಲಕ ಮತ್ತು ನಿರ್ವಾಹಕನನ್ನು ತೀವ್ರ ತರಾಟೆ ತೆಗೆದುಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಕುಡಚಿ ಪಟ್ಟಣದಿಂದ ಗೋಮಾಂಸ ತುಂಬಿಕೊಂಡು 4 ಲಾರಿಗಳು ಐನಾಪುರ ಮಾರ್ಗವಾಗಿ ಹೈದರಾಬಾದ್ ಕಡೆಗೆ ತೆರಳುತ್ತಿದ್ದವು. ಈ ನಾಲ್ಕು ಲಾರಿಗಳಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಆಧರಿಸಿ ಕಾರ್ಯಕರ್ತರು ಒಂದು ಲಾರಿಯನ್ನು ತಡೆದು ಪರಿಶೀಲಿಸಿದಾಗ ಗೋಮಾಂಸ ಸಾಗಾಟ ಬಯಲಾಗಿದೆ. ಲಾರಿಯಲ್ಲಿ ಗೋಮಾಂಸವನ್ನು ಸಾಗಾಟ ಮಾಡಲಾಗುತ್ತಿರುವುದನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಕೆಲವು ಸಂಘಟನೆಯ ಕಾರ್ಯಕರ್ತರು ಲಾರಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಂತರ ಸ್ಥಳಕ್ಕೆ ಕಾಗವಾಡ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಲಾರಿ ಬೆಂಕಿಗೆ ಆಹುತಿಯಾಗಿತ್ತು. ಇದೆ ವೇಳೆ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು. ಅಷ್ಟರಲ್ಲಿ ಅಗ್ನಿಶಾಮಕದಳ ವಾಹನ ಬಂದು ಲಾರಿಗೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ. ಲಾರಿಗೆ ಬೆಂಕಿ ಹಚ್ಚಿರುವ ಪ್ರಕರಣ ಹಾಗೂ ಜಾತಿ ನಿಂದನೆ ಸಂಬಂಧಿಸಿದಂತೆ ಐನಾಪೂರ ಪಟ್ಟಣದ ಆವೇಶ ಶಿವಪುತ್ರ ಜಿರಗಾಳೆ, ಸುಹಾಸ ಶಿವಾಜಿ ಲೊಂಡೆ, ಅನೀಲ ಬಸಪ್ಪ ಸಾವಳೆ, ಸದಾಶಿವ ಮಲ್ಲಪ್ಪ ಕುರುಂದವಾಡೆ ವಿರುದ್ಧ ದೂರು ದಾಖಲಾಗಿದೆ. ಇನ್ನು ಗೋಮಾಂಸ ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ವಿಕಾಸ ದಾದಾ ವಾರೆ, ಸುಧೀರ ನಾಬಿರಾಜ ಗಸ್ತಿ ಹಾಗೂ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸಾಹೇಬಲಾಲಾ, ಹಾಯತಚಾಂದ ಮುತವಾಲೆ ಎಂಬವುರ ವಿರುದ್ಧ ಪ್ರಕರಣ ದಾಖಲಾಗಿದೆ.ಬಾರಿ ಪ್ರಮಾಣದ ಗೋಮಾಂಸ ಕಂಡು ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ, ಪೊಲೀಸರು ಗೋಮಾಂಸ ಸಮೇತ ಲಾರಿ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಪ್ರಕರಣ ದಾಖಲು:ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಕಾಗವಾಡ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.ಗೋಹತ್ಯೆ ಕಾಯ್ದೆ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಮೂರು ಜನರನ್ನು ಬಂಧಿಸಲಾಗಿದೆ. ಜೊತೆಗೆ ಎರಡನೇ ಪ್ರಕರಣದಲ್ಲಿ ಬೆಂಕಿ ಹಚ್ಚುವಿಕೆ, ದರೋಡೆ ಮತ್ತು ದೌರ್ಜನ್ಯ ಕಾಯ್ದೆಯಡಿ ದಾಖಲಾಗಿದೆ. ಲಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಇದುವರೆಗೆ 5 ಜನರನ್ನು ಬಂಧಿಸಲಾಗಿದ್ದು, ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.ನಮ್ಮ ಪೊಲೀಸರಿಗೆ 9.50ಕ್ಕೆ ಲಾರಿಯಲ್ಲಿ ಗೋಮಾಂಸ ಸಾಗಾಟದ ಬಗ್ಗೆ ಮಾಹಿತಿ ಬರುತ್ತದೆ. ಪಿಎಸ್ಐ ಅಲ್ಲಿಗೆ ತಲುಪಿದಾಗ ಅಲ್ಲಿ ಸುಮಾರು ಜನ ಸೇರಿದ್ದರು. ಕ್ರಮ ಕೈಗೊಳ್ಳುವ ಭರವಸೆ ನೀಡಿ ಲಾರಿ ಚಾಲಕ, ಕ್ಲೀನರ್‌ನನ್ನು ವಶಕ್ಕೆ ಪಡೆಯುತ್ತಾರೆ. ಬಳಿಕ ಕಿಡಿಗೇಡಿಗಳು ಗೋಮಾಂಸ ಟ್ರಕ್ ಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಕಾನೂನು ಕೈಗೆ ತೆಗೆದುಕೊಂಡಿದ್ದು ಅಕ್ಷಮ್ಯ ಅಪರಾಧ. ಈ ಕುರಿತು ಎರಡು ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ. ಕುಡಚಿಯ ಬೇಪಾರಿ ಎನ್ನುವವರು ಗೋಮಾಂಸವನ್ನು ಲಾರಿಯಲ್ಲಿ ತುಂಬಿದ್ದರು. ಜಾತಿ ನಿಂದನೆ, ಗಲಭೆ, ಸುಲಿಗೆ ಕೇಸ್ ದಾಖಲಿಸಲಾಗಿದೆ. ಗೋಮಾಂಸ ಸಾಗಾಟ ಪ್ರಕರಣದಲ್ಲಿ ಮೂರು ಜನರನ್ನು ಬಂಧಿಸಿದ್ದೇವೆ. ಗಲಬೆ ಸಂಬಂಧ 4 ಜನರನ್ನು ಬಂಧಿಸಿದ್ದೇವೆ. ವಿಡಿಯೋದಲ್ಲಿ ಕಂಡು ಬಂದ ನಾಲ್ವರ ಮೇಲೆ ಕೇಸ್ ದಾಖಲಿಸಲಾಗಿದೆ. ಯಾವುದೇ ಅಕ್ರಮ ನಡೆಯುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ನೀವೆ ಕಾನೂನು ಕೈಗೆತ್ತಿಕೊಂಡು ಬೆಂಕಿ ಹಚ್ಚುವುದು ಅಕ್ಷಮ್ಯ. ಲಾರಿಯಲ್ಲಿ 3 ಟನ್ ಗೋಮಾಂಸ ಇರುವ ಬಗ್ಗೆ ಮಾಹಿತಿ ಇದೆ. ಗೋಮಾಂಸ ತುಂಡುಗಳನ್ನು ಲ್ಯಾಬ್‌ಗೆ ಕಳುಹಿಸಲಾಗುವುದು. ಐನಾಪುರದಲ್ಲಿ ಸದ್ಯ ಪರಿಸ್ಥಿತಿ ಹತೋಟಿಯಲ್ಲಿ ಇದೆ.- ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ.