ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ

KannadaprabhaNewsNetwork |  
Published : Sep 24, 2025, 01:04 AM IST
ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ | Kannada Prabha

ಸಾರಾಂಶ

ಇಲ್ಲಿಯ ಬೆಳಗಾವಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಗಜಾನನ ಕಾಗಣೀಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿಯ ಬೆಳಗಾವಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಗಜಾನನ ಕಾಗಣೀಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ಮಂಗಳವಾರ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಡಿಆರ್‌ಸಿಎಸ್ ಕಚೇರಿಯ ಹಿರಿಯ ನಿರೀಕ್ಷಕ ಗೋವಿಂದಗೌಡ ಪಾಟೀಲ ಪ್ರಕಟಿಸಿದರು.ಸಹಕಾರಿಯ ಬಹು ಚರ್ಚಿತ ತುರುಸಿನ ಚುನಾವಣೆ ಎಂದೇ ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗಿದ್ದ ಈ ಚುನಾವಣೆಯು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದಲ್ಲಿ ಸೆ.8 ರಂದು ನಡೆಯಬೇಕಿದ್ದ ಈ ಚುನಾವಣೆಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆಯಿತು. ಈ ಮೂಲಕ ಸಹಕಾರಿ ವಲಯದಲ್ಲಿ ಹೊಸ ಸಂಚಲನಕ್ಕೆ ಈ ಚುನಾವಣೆಯು ಕಾರಣವಾಯಿತು.ಸೆ.23 ರಂದು ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ನಿಗದಿಯಾಗಿದ್ದರಿಂದ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿಯವರ ನೇತೃತ್ವದಲ್ಲಿ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಚಿವರ ಸೂಚನೆಯಂತೆ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಕ್ಕೆ ಬರಲಾಯಿತು.ಸಂಘದ ಅಭಿವೃದ್ಧಿಗೆ ಆದ್ಯತೆ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ರೈತರ ಆಶಯದಂತೆ ಸಂಘಕ್ಕೆ ಜಿಲ್ಲೆಯ ಸಚಿವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಹಕಾರ ರಂಗದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣ ಮಾಡಿದರೇ ಸಂಘಗಳು ಉಳಿಯುವುದಿಲ್ಲ. ಸಹಕಾರ ಸಂಘಗಳು ಪ್ರಗತಿಪಥದತ್ತ ಸಾಗಬೇಕಾದರೇ ಎಲ್ಲರೂ ಸೇರಿ ಪಕ್ಷಾತೀತವಾಗಿ ಪರಸ್ಪರ ಸಹಕಾರ ಮನೋಭಾವನೆಯಿಂದ ನಡೆಯಬೇಕು. ಅಂದಾಗ ಮಾತ್ರ ಸಂಘಗಳು ಬೆಳೆಯಲು ಸಾಧ್ಯವಾಗುತ್ತವೆ. ಜಿಲ್ಲೆಯ ಸಚಿವರು, ಶಾಸಕರು, ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಪಕ್ಷಪಾತ, ಜಾತಿ ಬೇಧ ಮಾಡದೇ ಸಹಕಾರ ತತ್ವದಲ್ಲಿ ಕೆಲಸವನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವಂತೆ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿಯವರು ಮಾತನಾಡಿ, ಬೆಳಗಾವಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಪ್ರಗತಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಪಾತ್ರ ಅಮೂಲ್ಯವಾಗಿದೆ. ಜಿಲ್ಲೆಯ ಹಾಗೂ ಸಹಕಾರ ಸಂಘದ ಭವಿಷ್ಯದ ದೃಷ್ಟಿಯಿಂದ ಅವಿರೋಧ ಆಯ್ಕೆ ನಡೆಸುವ ಮೂಲಕ ಸಹಕಾರ ಮನೋಭಾವನೆಗಳಿಗೆ ಸಾಕ್ಷಿಯಾಗಿದ್ದಾರೆ. ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸಹ ಸಹಕಾರ ರಂಗದಲ್ಲಿರುವ ಸಂಸ್ಥೆಗಳನ್ನು ಉಳಿಸಿ, ಬೆಳೆಸುವ ಮಹತ್ಕಾರ್ಯಗಳನ್ನು ಮಾಡುತ್ತ ಸಹಕಾರಿಗಳ ಆಪದ್ಭಾಂದವರಂತೆ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಕಲ್ಲಪ್ಪ ಪಾಟೀಲ, ಬಸನಗೌಡ ಪಾಟೀಲ, ಭೀಮಪ್ಪ ಮಳಗಲಿ, ಮಹಾಂತೇಶ ಅಲಾಬದಿ, ಮಹಾಂತೇಶ ಉಳ್ಳೆಗಡ್ಡಿ, ರಮೇಶ ಕಾಳೋಜಿ, ಸುರೇಶ ಸಾವಂತ್, ಲಕ್ಷ್ಮೀ ಸೋನಾಜಿ, ಸಾವಿತ್ರಿ ಪಾಟೀಲ, ಆಸಿಫ್ ಮುಲ್ಲಾ, ಪ್ರದೀಪ ದೇಸಾಯಿ, ಚೇತನ ಕಾಂಬಳೆ, ಸುಕ್ಕಪ್ಪ ಪಕಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ