ಮೇ 28 ರವರೆಗೆ ರಜೆ ಘೋಷಣೆ, ಹಲವೆಡೆ ಮುಂದುವರಿದ ವರುಣನ ಆರ್ಭಟ,
ಕಾಫಿಯ ನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಮುಂಜಾಗ್ರತೆಯಾಗಿ ಜಿಲ್ಲೆಯ ಮಲೆನಾಡಿನ 6 ತಾಲೂಕುಗಳಲ್ಲಿನ ಅಂಗನವಾಡಿಗಳಿಗೆ ಮೇ 28ರವರೆಗೆ ಅನ್ವಯ ವಾಗುವಂತೆ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಭಾರೀ ಗಾಳಿಗೆ ಹಲವೆಡೆ ಮರಗಳು ಬಿದ್ದು ಕೆಲವು ಮನೆಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ.ಮಲೆನಾಡಿನಲ್ಲಿ ಹುಟ್ಟಿ ಹರಿಯುವ ತುಂಗಾ, ಭದ್ರಾ ಹಾಗಾ ಹೇಮಾವತಿ ನದಿಗಳ ನೀರಿನ ಮಟ್ಟ ದಿನೇ ದಿನೇ ಏರಿಕೆ ಯಾಗುತ್ತಿದೆ. ಹಳ್ಳಗಳು, ಉಪ ನದಿಗಳು ಸಹ ಭರ್ತಿಯಾಗಿ ಹರಿಯುತ್ತಿವೆ. ದಟ್ಟವಾದ ಮೋಡ, ಮಂಜು ಕವಿದ ವಾತಾವರಣ, ನಿರಂತರವಾಗಿ ಒಂದೇ ಸಮನೆ ಮಳೆ ಬರುತ್ತಿರುವುದರಿಂದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ.
ಚಿಕ್ಕಮಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿ ಮನೆಯಿಂದ ಹೊರಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮಳೆಯಿಂದಾಗಿ ತೆರೆದ ಚರಂಡಿ ಗಳು ಭರ್ತಿಯಾಗಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಒಳ ಚರಂಡಿಯ ಮ್ಯಾನ್ ಹೋಲ್‌ಗಳು ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ಮಲೆನಾಡಿನಲ್ಲಿ ವರುಣನ ಆರ್ಭಟ ಜೋರಾಗಿದ್ದರೆ, ಅತ್ತ ಬಯಲುಸೀಮೆಯ ತರೀಕೆರೆ, ಕಡೂರು ಹಾಗೂ ಅಜ್ಜಂಪುರದಲ್ಲೂ ಸಾಧಾರಾಣ ಮಳೆಯಾಗುತ್ತಿದೆ. ಇದರಿಂದಾಗಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಲಾಗಿರುವ ಬೆಳೆಗೆ ಅನುಕೂಲ ವಾಗಿದೆ.ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದ್ದು, ಮೂಡಿಗೆರೆ ತಾಲೂಕಿನಲ್ಲಿ ತೀವ್ರ ಪರಿಣಾಮ ಬೀರಿದೆ. ತರುವೆ ಗ್ರಾಮದಲ್ಲಿ ಸಂಭವಿಸಿದ ಭಾರೀ ಗಾಳಿ-ಮಳೆಗೆ ಲಕ್ಷ್ಮಿ ಎಂಬುವರಿಗೆ ಸೇರಿದ ಮನೆ ಗೋಡೆ ಭಾಗಶಃ ಕುಸಿದಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ 23 ಮನೆಗಳಿಗೆ ಹಾನಿ ಸಂಭವಿಸಿದ್ದರೆ, ಮಳೆಯಿಂದ ಓರ್ವ ಮೃತಪಟ್ಟಿದ್ದಾರೆ.
--- 26 ಕೆಸಿಕೆಎಂ 4ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಲಕ್ಷ್ಮೀ ಅವರಿಗೆ ಸೇರಿರುವ ಮನೆ ಮಳೆಯಿಂದ ಬಿದ್ದಿರುವುದು.