ಗದಗ: ನಗರದ ತೋಂಟದಾರ್ಯ ಮಠದ ಜಾತ್ರೆಯ ವಿಷಯದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ. ತೋಂಟದಾರ್ಯ ಮಠವು ವ್ಯಾವಹಾರಿಕವಾಗಿದೆ ಎಂದು ಆರೋಪಿಸಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ, ದಲಿತ ಮಿತ್ರ ಮೇಳ, ಆಟೋ ಸೇನಾ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಕರೆ ನೀಡಲಾಗಿದ್ದ ಗದಗ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್‌ಗೆ ಅವಕಾಶವಿಲ್ಲ ಎಂದು ತಿಳಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ, ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿತ್ತು. ನಿಷೇಧಾಜ್ಞೆ ನಡುವೆಯೂ ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಲು ಮುಂದಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ಅವರನ್ನು ಬಂಧಿಸಿದರು.
ಪ್ರತಿಭಟನೆ ವೇಳೆ ತೋಂಟದಾರ್ಯ ಮಠದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಪ್ರತಿಭಟನಾಕಾರರು, ಇದಕ್ಕೂ ಮೊದಲು ಜೈ ಶ್ರೀರಾಮ, ಜೈ ಶ್ರೀರಾಮ ಎನ್ನುತ್ತಾ ಮಠದ ವರೆಗೂ ಆಗಮಿಸಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಇನ್ನುಳಿದ ಪ್ರತಿಭಟನಾಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾದರು.ರಾಜು ಖಾನಪ್ಪನವರ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಡಿಆರ್ ವ್ಯಾನ್‌ನಲ್ಲಿ ಅವರನ್ನು ಬೇರೆಡೆ ಕರೆದುಕೊಂಡು ಹೋಗಲು ಪ್ರಾರಂಭಿಸುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅವಳಿ ನಗರದ ವ್ಯಾಪಾರಸ್ಥರಲ್ಲಿ ಈ ಕುರಿತು ಭಾನುವಾರ ಸಂಜೆಯ ವರೆಗೂ ಗೊಂದಲವಿತ್ತು, ಆದರೆ ಭಾನುವಾರ ಸಂಜೆ ಎಸ್‌ಪಿ ಸುದ್ದಿಗೋಷ್ಠಿಯಲ್ಲಿ ಬಂದ್ ಅವಕಾಶ ಇಲ್ಲ ಎನ್ನುತ್ತಿದ್ದಂತೆ ಸೋಮವಾರ ಅವಳಿ ನಗರದಲ್ಲಿ ವ್ಯಾಪಾರ ವಹಿವಾಟು, ವಾಹನ ಸಂಚಾರ ಎಲ್ಲವೂ ಸಹಜವಾಗಿಯೇ ನಡೆಯಿತು.
ಭಯದ ವಾತಾವರಣ: ರಸ್ತೆಯನ್ನು ಬಂದ್ ಮಾಡಿ 40 ದಿನಗಳ ಕಾಲ ಜಾತ್ರೆ ನಡೆಸುವ ಹಿನ್ನೆಲೆಯಲ್ಲಿ ತೋಂಟದಾರ್ಯ ಮಠದ ರಥಬೀದಿ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ರಥಬೀದಿ ಹಾಗೂ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದ ಹಿನ್ನೆಲೆಯಲ್ಲಿ ಜನರಲ್ಲಿ ಹಾಗೂ ಜಾತ್ರೆಯಲ್ಲಿ ಅಂಗಡಿಗಳನ್ನು ಹಾಕಿರುವ ವ್ಯಾಪಾರಸ್ಥರಲ್ಲಿ ದುಗುಡ ಮನೆ ಮಾಡಿತ್ತು. ಆ ರಸ್ತೆಯ ಮೂಲಕ ಸಂಚರಿಸುವ ಪ್ರತಿಯೊಬ್ಬರಲ್ಲಿಯೂ ಆತಂಕ ಕಂಡುಬಂತು.ಸಂಘಟನೆಗಳು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿತ್ತು. ಬಂದ್‌ಗೆ ಅವಕಾಶ ಇಲ್ಲ ಎಂದು ಹೇಳಿದ ನಂತರವೂ ಕೆಲವರು ಪ್ರತಿಭಟನೆಗೆ ಯತ್ನಿಸಿದರು. ಶಾಂತಿಭಂಗ ಆಗಬಾರದು ಎಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿತ್ತು. ಶಾಂತಿಭಂಗ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು.