ಜಿಲ್ಲಾ ಪೊಲೀಸ್ ಇಲಾಖೆ ಕ್ರಮ । ಕಲ್ಲತ್ತಗಿರಿ ಫಾಲ್ಸ್, ಸೀತಾಳಯ್ಯನಗಿರಿ ಜಲಪಾತಗಳಲ್ಲಿ ಪ್ರವಾಸಿಗರ ಮೇಲೆ ನಿಗಾ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಗಿರಿ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬಂದಿದ್ದರಿಂದ ಜಲಪಾತಗಳು ಅವಧಿಗೂ ಮುನ್ನ ಮೈದುಂಬಿ ಧುಮುಖುತ್ತಿವೆ. ಈ ಸೊಬಗನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಅವಘಡ ಸಂಭವಿಸಬಾರದೆಂದು ಜಿಲ್ಲಾ ಪೊಲೀಸ್ ಇಲಾಖೆ ಮಂಗಳವಾರದಿಂದಲೇ ಹೈ ಅಲರ್ಟ್ ಆಗಿದೆ.ಚಿಕ್ಕಮಗಳೂರು - ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯ ಉದ್ದಕ್ಕೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಝರಿಗಳು ಸಿಗುತ್ತವೆ. ಅವೆಲ್ಲವೂ ಮೈದುಂಬಿ ಹರಿಯುತ್ತಿವೆ. ಕಲ್ಲತ್ತಗಿರಿ ಫಾಲ್ಸ್, ಅಬ್ಬೆ ಫಾಲ್ಸ್‌ಗಳಲ್ಲೂ ನೀರು ಹರಿಯುತ್ತಿವೆ. ಗಿರಿ ಪ್ರದೇಶದಲ್ಲಿ ಆಗಾಗ ಮೋಡ, ದಟ್ಟವಾದ ಮಂಜು, ಮಳೆಯ ಸೊಬಗನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಚಾರ್ಮಾಡಿ ಘಾಟ್ ರಸ್ತೆಯ ಉದ್ದಕ್ಕೂ ಪ್ರವಾಸಿಗರು ಕಾರನ್ನು ನಿಲ್ಲಿಸಿ ಅಲ್ಲಲ್ಲಿ ನಿಂತಿರುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯೂ ಕೂಡ ಇರುತ್ತದೆ. ಹಾಗಾಗಿ ಮಂಗಳವಾರ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿ ನಿಂತಿದ್ದ ಪ್ರವಾಸಿಗರ ವಾಹನಗಳನ್ನು ತೆರವುಗೊಳಿಸಿದರು. ಕೆಲವೆಡೆ ಸೂಚನಾ ಫಲಕಗಳನ್ನು ಅಳವಡಿಸಿದರು.
ಗಿರಿ ಪ್ರದೇಶದ ದಾರಿಯಲ್ಲಿ ಬಿದ್ದಿರುವ ಸಣ್ಣ ಪುಟ್ಟ ಮರಗಳನ್ನು ಸಹ ಪೊಲೀಸರು ತೆರವುಗೊಳಿಸಿದರು. ಒಟ್ಟಾರೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ.
ಚಾರ್ಮಾಡಿ ಘಾಟಿಯ ಅಪಾಯಕಾರಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದ್ದು ಇದರಿಂದ ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಬಿದ್ದಿದೆ.
ಕೆಲವು ಸ್ಥಳಗಳಲ್ಲಿ ಬ್ಯಾರಿಕೇಡ್ ಇರಿಸಿ ಪ್ರವಾಸಿಗರು ಜಲಪಾತ, ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ವ್ಯವಸ್ಥೆ ಮಾಡಲಾಗಿದೆ. ಬಂಡೆ ಹತ್ತುವುದು ಜಲಪಾತಗಳ ಬುಡ ಭಾಗಕ್ಕೆ ತೆರಳುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಚಾರ್ಮಾಡಿ ಘಾಟಿಯ ಅಪಾಯಕಾರಿ ಜಲಪಾತ ಪ್ರದೇಶದಲ್ಲಿ ವಿಡಿಯೋ ತೆಗೆಯುತ್ತಿದ್ದ ನಾಲ್ವರ ವಿರುದ್ಧ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ಬಣಕಲ್ ಪಿಎಸ್ ಐ ಪ್ರತಾಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಧಿಕೃತ ಪ್ರವೇಶ ಹಾಗೂ ಸಾರ್ವಜನಿಕ ಭದ್ರತಾ ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿದೆ.