ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ

KannadaprabhaNewsNetwork |  
Published : Aug 26, 2026, 02:00 AM IST
ನೆರೆ | Kannada Prabha

ಸಾರಾಂಶ

ಕೊಡಗು, ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರಿಸುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕೇರುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡಗು, ಕರಾವಳಿ, ಮಲೆನಾಡಲ್ಲಿ ಮಳೆ ಅಬ್ಬರಿಸುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕೇರುತ್ತಿದೆ.

ಕೊಡಗಿನ ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ಸಂಜೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆಯಾಗಿದೆ. ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಭಾಗಮಂಡಲ-ನಾಪೋಕ್ಲು, ಭಾಗಮಂಡಲ-ಮಡಿಕೇರಿ ರಸ್ತೆ ಜಲಾವೃತವಾಗಿದೆ. ನಾಪೋಕ್ಲು ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಭಾಗಮಂಡಲದ ಆಟೋ ನಿಲ್ದಾಣ ಜಲಾವೃತಗೊಂಡಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆ ಹಿಂಭಾಗದ ಜಲಾಶಯ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರ, ಪಶ್ಚಿಮ ಘಟ್ಟದ ತಪ್ಪಲು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ಪ್ರವಾಹ ಉಕ್ಕೇರುತ್ತಿದೆ. ಸ್ನಾನಘಟ್ಟ, ದೇವರ ಜಳಕದ ಕಟ್ಟೆ, ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು, ಕಿಂಡಿ ಅಣೆಕಟ್ಟು ಜಲಾವೃತಗೊಂಡಿವೆ. ಇಲ್ಲಿನ ಪರಿಸರದಲ್ಲಿ ತೋಟಗಳಿಗೆ ನದಿ ನೀರು ನುಗ್ಗಿದೆ.

ಕುಮಾರಧಾರಾ ತುಂಬಿ ಹರಿದು ಸ್ನಾನಘಟ್ಟ ಮುಳುಗಡೆಯಾದ ಕಾರಣ, ನದಿಗೆ ಇಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಭಕ್ತರ ಪುಣ್ಯಸ್ನಾನಕ್ಕಾಗಿ ನದಿದಡದಲ್ಲಿ ಶವರ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ವತಿಯಿಂದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಸ್ನಾನಘಟ್ಟದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಕ್ತರು ತೆರಳದಂತೆ ನಿರ್ಬಂಧಿಸಲಾಗಿದೆ.

ಮಳೆಯಿಂದಾಗಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿಸಿಲೆ ಘಾಟಿ ವ್ಯಾಪ್ತಿಯಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದು, ಸುಮಾರು ಮೂರು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ಬಿದ್ದ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯ–ವನಗೂರು–ಶನಿವಾರಸಂತೆ–ಸಕಲೇಶಪುರ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಭಕ್ತರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿದ್ದವು. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಭಾರೀ ಮಳೆಯ ನಡುವೆಯೇ ಪರದಾಡುವಂತಾಯಿತು. ಬಳಿಕ, ಮರ ತೆರವುಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​
ಅಪಾಯದಂಚಲ್ಲಿ ಕಿಗ್ಗಾ ಸಿರಿಮನೆ ನಳಿನಿ ನದಿ ಸೇತುವೆ