)
ಭಾನುವಾರವೂ ಭಾರೀ ಮಳೆ ಸಾಧ್ಯತೆ । ಭದ್ರ ಡ್ಯಾಂಗೆ 12,983 ಕ್ಯೂಸೆಕ್ಸ್ ಒಳಹರಿವು
ಕಳೆದ ಎರಡು ದಿನಗಳಿಂದ ಕಾಫಿನಾಡು ಚಿಕ್ಕಮಗಳೂರಿನ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗ, ಭದ್ರ ನದಿಗಳಲ್ಲಿ ಒಳ ಹರಿವು ಹೆಚ್ಚಾಗುವುದರೊಂದಿಗೆ ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ.
ಮಳೆಯಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಸಹ ವರದಿಯಾಗಿದೆ.ಶುಕ್ರವಾರ ಸುರಿದ ಮಳೆ ಭದ್ರ ಡ್ಯಾಂಗೆ ಒಳ ಹರಿವಿನ ಪ್ರಮಾಣ ದ್ವಿಗುಣಗೊಂಡಿದೆ. ಶನಿವಾರ ಬೆಳಗ್ಗೆ 6 ಗಂಟೆ ವೇಳೆಗೆ 12,983 ಕ್ಯೂಸೆಕ್ಸ್ ಒಳಹರಿವು ಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎನ್.ಆರ್.ಪುರ ವ್ಯಾಪ್ತಿಯ ಬಾಳೆಹೊನ್ನೂರು ಹೋಬಳಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ನೀಡಲಾಗಿತ್ತು. ಈಗಾಗಲೇ ನಿಗದಿಯಾಗಿರುವ ಸಾರ್ವಜನಿಕ ಪರೀಕ್ಷೆಗಳು, ಬೋರ್ಡ್ ಪರೀಕ್ಷೆಗಳು ಹಾಗೂ ಅಗತ್ಯ ಸರ್ಕಾರಿ ಕರ್ತವ್ಯಗಳು ಎಂದಿನಂತೆ ನಡೆಯಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಚಿಕ್ಕಮಗಳೂರು ಜಿಲ್ಲೆಗೆ ಶನಿವಾರದಿಂದ ಭಾನುವಾರಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್. ಭಾನುವಾರದಿಂದ ಸೋಮವಾರಕ್ಕೆ ಆರೆಂಜ್ ಅಲರ್ಟ್ ಹಾಗೂ ಸೋಮವಾರದಿಂದ ಮಂಗಳವಾರ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಇನ್ನೂ ಎರಡ್ಮೂರು ದಿನ ಜಿಲ್ಲೆಯಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಉತ್ತಮ ಮಳೆ ಕಂಡು ಬಂದರೆ, ಕಡೂರು ಮತ್ತು ಅಜ್ಜಂಪುರ ಭಾಗದಲ್ಲಿ ಮಳೆ ಕೊರತೆ ಮುಂದುವರೆದಿದೆ. ಕನಿಷ್ಠ ಪ್ರಮಾಣ ಮಳೆಯೂ ಈ ತಾಲೂಕಿನಲ್ಲಿ ಆಗಿಲ್ಲ.
ತಾಲೂಕು ವಾರು ಮಳೆ ಪ್ರಮಾಣ (ಸೆಂ.ಮೀ)
ಶೃಂಗೇರಿ19.7
ಕಳಸ9.9
ಎನ್.ಆರ್.ಪುರ5.3ಮೂಡಿಗೆರೆ4.9
ಚಿಕ್ಕಮಗಳೂರು2.0ತರೀಕೆರೆ1.9
ಅಜ್ಜಂಪುರ0.5ಕಡೂರು0.3
ಸರಾಸರಿ4.2