ರಾಜಧಾನಿಯಲ್ಲಿ ಭಾರಿ ಮಳೆ: 20 ಮರಗಳು ಧರೆಗೆ

KannadaprabhaNewsNetwork |  
Published : Aug 11, 2025, 12:30 AM ISTUpdated : Aug 11, 2025, 09:21 AM IST
ಹೆಬ್ಬಾಳ ಮುಖ್ಯ ರಸ್ತೆ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಮಹದೇವಪುರದ ಹೂಡಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ, ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆ, ಹೆಬ್ಬಾಳದ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಮಹದೇವಪುರದ ಹೂಡಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ, ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆ, ಹೆಬ್ಬಾಳದ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಕಳೆದ ಎರಡ್ಮೂರು ದಿನದಿಂದ ನಗರದಲ್ಲಿ ಮಳೆ ಚುರುಕುಗೊಂಡಿದ್ದು, ಶನಿವಾರ ರಾತ್ರಿಯಿಂದ ಸಣ್ಣ ಪ್ರಮಾಣ ಮಳೆ ಆರಂಭಗೊಂಡಿತ್ತು. ಭಾನುವಾರ ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು. ನಗರದ ಕೆಲವು ಭಾಗದಲ್ಲಿ ಭಾರೀ ಮಳೆ ಸುರಿಯಿತು.

ಮಹದೇವಪುರದ ಹೂಡಿ ವಾರ್ಡ್‌ನ ವಾರಣಾಸಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಿಬಿಎಂಪಿಯ ಮಳೆ ನೀರುಗಾಲುವೆಯಲ್ಲಿ ಹೂಳು ತುಂಬಿಕೊಂಡ ಹಿನ್ನೆಲೆಯಲ್ಲಿ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಂಕ್ಷನ್‌, ಫ್ಲೈಓವರ್‌ನಲ್ಲಿ ನೀರು:

ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆ, ಹೆಬ್ಬಾಳದ ಕೆಂಪಾಪುರದ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ರಾಮಮೂರ್ತಿ ನಗರ ಸಿಗ್ನಲ್ ಬಳಿ, ಕೆಆರ್ ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ಹೋಗುವ ಓಎಂಆರ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಸುಗಮ ಸಂಚಾರಕ್ಕೆ ಪರದಾಡಿದರು.

ಉಳಿದಂತೆ ಥಣಿಸಂದ್ರ ಮತ್ತು ನಾಗವಾರ ಜಂಕ್ಷನ್ ಮಾರ್ಗ, ಸಿಟಿ ಮಾರ್ಕೆಟ್ ವೃತ್ತ ದಿಂದ ಎಸ್‌ಜೆಪಿ ವೃತ್ತ, ಬಾಗಲೂರು ಕ್ರಾಸ್ ಯಿಂದ ಐಎಎಫ್ ಜಂಕ್ಷನ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳದಿಂದ ಬೆಂಗಳೂರು ಕಡೆಗೆ, ದೇವಿನಗರದಿಂದ ಕುವೆಂಪು ವೃತ್ತದ ಮಾರ್ಗ, ಕುವೆಂಪು ವೃತ್ತದಿಂದ ದೇವಿನಗರ ಮಾರ್ಗ, ವಡ್ಡರಪಾಳ್ಯದಿಂದ ಹೆಣ್ಣೂರು ಮಾರ್ಗದಲ್ಲಿ ಮಳೆ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ಉಕ್ಕಿದ ಒಳಚರಂಡಿ:

ನಗರದ ಮಹಾಕವಿ ಕುವೆಂಪು ರಸ್ತೆ, ಮಾಗಡಿ ರಸ್ತೆ, ರಾಜಕುಮಾರ್‌ ರಸ್ತೆ ಸೇರಿದಂತೆ ನಗರದ ಮೊದಲಾದ ರಸ್ತೆಗಳಲ್ಲಿ ಮಳೆ ನೀರು ಜಲಮಂಡಳಿಯ ಒಳಚರಂಡಿ ಸೇರಿ ಮ್ಯಾನ್‌ ಹೋಲ್‌ಗಳು ಉಕ್ಕಿ ರಸ್ತೆ ಮೇಲೆ ಹರಿಯುವ ದೃಶ್ಯಗಳು ಕಂಡು ಬಂದವು. ಕೆಲವು ಕಡೆ ಮ್ಯಾನ್‌ ಹೋಲ್‌ನಲ್ಲಿ ನೀರಿನ ಹರಿವು ಹೆಚ್ಚಾಗಿ ಕುಸಿಯುವ ಭೀತಿ ಎದುರಾಗಿತ್ತು.

ಕಾರು ಜಖಂ, 20 ಮರಗಳು ಧರೆಗೆ:

ಭಾನುವಾರ ಸುರಿದ ಮಳೆಗೆ ಶಂಕರ ನಗರದಲ್ಲಿ ಕಾರಿನ ಮೇಲೆ ಮರ ಬಿದ್ದು, ಒಂದು ಕಾರು ಜಖಂಗೊಂಡಿದೆ. ಉಳಿದಂತೆ ನಗರದಲ್ಲಿ ಸುಮಾರು 20ಕ್ಕೂ ಅಧಿಕ ಮರ ಹಾಗೂ 40ಕ್ಕೂ ಅಧಿಕ ಮರ ರೆಂಬೆಕೊಂಬೆಗಳು ಧರೆಗೆ ಬಿದ್ದ ವರದಿಯಾಗಿದೆ. ಬಿಬಿಎಂಪಿಯ ಅರಣ್ಯ ವಿಭಾಗದ ತಂಡಗಳು ಬಿದ್ದ ಮರ ಮತ್ತು ರೆಂಬೆಕೊಂಬೆಗಳನ್ನು ತೆರವು ಮಾಡುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ?

ನಗರದ ವಿ ನಾಗೇನಹಳ್ಳಿಯಲ್ಲಿ ಅತಿ ಹೆಚ್ಚು 4.1 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಹಂಪಿನಗರದಲ್ಲಿ 3, ಹೊರಮಾವು, ಜಕ್ಕೂರಿನಲ್ಲಿ ತಲಾ 2.7, ಕೋರಮಂಗಲ, ಪೂರ್ವ ಮನೋರಾಯನಪಾಳ್ಯದಲ್ಲಿ ತಲಾ 2.4, ಸಿಂಗಸಂದ್ರ 2.3, ರಾಮಮೂರ್ತಿನಗರ 2.2, ದೊರೆಸಾನಿಪಾಳ್ಯ 2.1, ಬಾಣಸವಾಡಿ 2, ಶೆಟ್ಟಿಹಳ್ಳಿ, ಬಿಳೇಕಹಳ್ಳಿಯಲ್ಲಿ ತಲಾ 1.9, ಬೊಮ್ಮನಹಳ್ಳಿ ಹಾಗೂ ಮಾರುತಿ ಮಂದಿರದಲ್ಲಿ ತಲಾ 1.8, ಎಚ್‌ಎಸ್‌ಆರ್‌, ಕಾಡುಗುಡಿ, ಗರುಡಾಚಾರಪಾಳ್ಯ ಹಾಗೂ ಬಸವನಪುರದಲ್ಲಿ ತಲಾ 1.7, ಬಿಟಿಎಂ, ನಾಯಂಡನಹಳ್ಳಿ, ವಿದ್ಯಾಪೀಠದಲ್ಲಿ ತಲಾ 1.6 ಮಳೆಯಾಗಿದೆ. ಸೋಮವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ