ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಆಯುಕ್ತ ಮೇಜರ್ ಪಿ.ಮಣಿವಣ್ಣನ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅವರು ಜಂಟಿಯಾಗಿ ಹೆಬ್ಬಾಳ, ಬ್ಯಾಪ್ಟಿಸ್ಟ್ ಆಸ್ಪತ್ರೆ ಮತ್ತು ಮೇಖ್ರಿ ವೃತ್ತದ ಮಾರ್ಗಗಳಲ್ಲಿ ನಡೆಯಲಿರುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಪ್ರಸ್ತುತ ರಸ್ತೆಯಲ್ಲಿ ಎರಡೂ ಬದಿ ತಲಾ 3 ಲೇನ್‌ಗಳಿವೆ. ಕಾಮಗಾರಿಗಾಗಿ ಸುಮಾರು 4.5 ಮೀಟರ್ ಅಗಲದ ಜಾಗವನ್ನು (ಕೇವಲ ಒಂದು ಲೇನ್) ಮಾತ್ರ ಬ್ಯಾರಿಕೇಡ್ ಹಾಕಿ ಬಳಸಿಕೊಳ್ಳಲಾಗುವುದು. ಉಳಿದ 2 ಲೇನ್‌ಗಳು ಹಾಗೂ ಸರ್ವಿಸ್ ರಸ್ತೆಗಳಲ್ಲಿ ವಾಹನಗಳ ಸಂಚಾರ ಎಂದಿನಂತೆ ಇರಲಿದೆ. 18 ತಿಂಗಳ ಕಾಲಮಿತಿ ನಿಗದಿ ಆಗಿರುವುದು ಕಾರಿಡಾರ್ ನಿರ್ಮಾಣಕ್ಕೆ ಮಾತ್ರವೇ ಹೊರತು, ರಸ್ತೆ ಮುಚ್ಚುವುದಕ್ಕಲ್ಲ. ಇದರ ಬಗ್ಗೆ ಊಹಾಪೋಹವನ್ನು ನಂಬಬೇಕಿಲ್ಲ ಎಂದು ಹೇಳಿದರು.ಸಂಚಾರ ನಿರ್ವಹಣೆಯ ಭಾಗವಾಗಿ ಕಾರುಗಳು, ದ್ವಿಚಕ್ರ ವಾಹನಗಳು, ಶಾಲಾ ವಾಹನಗಳು ಹಾಗೂ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಎಂದಿನಂತೆ ಅವಕಾಶ ನೀಡಲಾಗಿದೆ. ಆದರೆ, ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಸರಕು ಸಾಗಣೆ (ಭಾರಿ) ವಾಹನಗಳ ಪ್ರವೇಶಕ್ಕೆ ಸಂಚಾರ ಪೊಲೀಸರ ಮಾರ್ಗಸೂಚಿಯನ್ವಯ ನಿರ್ಬಂಧ ವಿಧಿಸಲಾಗುತ್ತದೆ.
ಹೆಬ್ಬಾಳ ಮತ್ತು ಮೇಖ್ರಿ ವೃತ್ತ ನಡುವಿನ ದಟ್ಟಣೆಗೆ ಶಾಶ್ವತ ಮುಕ್ತಿ ನೀಡಲು ಈ ಎಲಿವೇಟೆಡ್ ಕಾರಿಡಾರ್ ರೂಪಿಸಲಾಗಿದೆ. ಯುಎಎಸ್ (ಕೃಷಿ ವಿವಿ) ಸಿಬ್ಬಂದಿ ವಸತಿ ಗೃಹದಿಂದ ಮೇಖ್ರಿ ವೃತ್ತದವರೆಗೆ 4 ಪಥಗಳ ಎಲಿವೇಟೆಡ್ ಕಾರಿಡಾರ್ (1.74 ಕಿ.ಮೀ) ನಿರ್ಮಾಣ ಯೋಜನೆ ಇದಾಗಿದೆ. ಅಂದಾಜು 445.7 ಕೋಟಿ ವೆಚ್ಚದ ಕಾಮಗಾರಿಗೆ 18 ತಿಂಗಳುಗಳ ಗುರಿ ನೀಡಲಾಗಿದೆ. 49 ಪಿಲ್ಲರ್‌ಗಳು, ಮೇಖ್ರಿ ವೃತ್ತದಲ್ಲಿ ಎಲಿವೇಟೆಡ್ ರೋಟರಿ ಜಂಕ್ಷನ್ ಹಾಗೂ ಸಿ.ವಿ. ರಾಮನ್ ರಸ್ತೆ (ಯಶವಂತಪುರ ಕಡೆಗೆ) ಮತ್ತು ಜಯಮಹಲ್ ರಸ್ತೆಗೆ ಸಂಪರ್ಕಿಸುವ ಪ್ರತ್ಯೇಕ ಡೌನ್-ರ್‍ಯಾಂಪ್‌ಗಳು ಇರಲಿವೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು
ಹೆಬ್ಬಾಳ ಕಡೆಯಿಂದ: ಹಳೇ ಹೈಗ್ರೌಂಡ್ಸ್–ಕಲ್ಪನಾ ಜಂಕ್ಷನ್ –ಹಳೇ ಉದಯ ಟಿವಿ ಜಂಕ್ಷನ–ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ –ಟ್ಯಾನರಿ ರಸ್ತೆ–ನಾಗವಾರ ಮಾರ್ಗ.ಯಶವಂತಪುರ ಕಡೆಯಿಂದ: ಮತ್ತಿಕೆರೆ ರಸ್ತೆ–ಬಿಇಎಲ್ ವೃತ್ತದಿಂದ ಬಲಕ್ಕೆ ತಿರುಗಿ ಹೊರವರ್ತುಲ ರಸ್ತೆ ಸಂಪರ್ಕಿಸಬಹುದು.
ವಿಮಾನ ನಿಲ್ದಾಣ ಮಾರ್ಗ (ಆಯ್ಕೆ 1): ಹೆಬ್ಬಾಳ ಬಳಿ ಎಡಕ್ಕೆ ತಿರುಗಿ, ನಾಗವಾರ ಜಂಕ್ಷನ್–ಬ್ಯಾಂಬೂ ಬಜಾರ್–ಕ್ವೀನ್ಸ್ ರಸ್ತೆ ಮಾರ್ಗ. ವಿಮಾನ ನಿಲ್ದಾಣ ಮಾರ್ಗ (ಆಯ್ಕೆ 2): ಹೆಬ್ಬಾಳ ಬಳಿ ಬಲಕ್ಕೆ ತಿರುಗಿ, ಹೊರವರ್ತುಲ ರಸ್ತೆ –ಕುವೆಂಪು ವೃತ್ತ –ಗೊರಗುಂಟೆಪಾಳ್ಯ–ಡಾ. ರಾಜ್‌ಕುಮಾರ್ ರಸ್ತೆ. ಯಶವಂತಪುರ ಕಡೆಯಿಂದ: ಬಿಎಚ್‌ಇಎಲ್ ಜಂಕ್ಷನ್ –ಮಾರಮ್ಮ ವೃತ್ತ – ಮಾರ್ಗೋಸಾ ರಸ್ತೆ.
ಸಿಟಿ ಕಡೆಗೆ: ಮೇಲ್ಸೇತುವೆಯಿಂದ ಇಳಿದು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ಮೂಲಕ ಸಿಬಿಐ ಜಂಕ್ಷನ್ ತಲುಪಿ ಬಳ್ಳಾರಿ ಮುಖ್ಯ ರಸ್ತೆ ಸೇರುವುದು. ಆರ್.ಟಿ. ನಗರ, ಗಂಗಾನಗರ, ಜಯಮಹಲ್: ಬ್ಯಾಪ್ಟಿಸ್ಟ್ ಸರ್ವಿಸ್ ರಸ್ತೆ–ಆನಂದ ನಗರ ಕ್ರಾಸ್ –ಸಿಬಿಐ ಜಂಕ್ಷನ್ ಮಾರ್ಗ. ಪರ್ಯಾಯ ಮಾರ್ಗಗಳಾದ ನ್ಯೂ ಬಿಇಎಲ್ ರಸ್ತೆ ಮತ್ತು ಆರ್.ಟಿ. ನಗರ ಠಾಣೆ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಬಿಡಿಎ ಮತ್ತು ಜಿಬಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ.