ಕೊಪ್ಪಳ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಪಕ್ಕದಲ್ಲಿಯೇ ನಾವಿದ್ದೇವೆ. ನಮಗೆ ಕೇಳದ್ದು, ದೂರದಲ್ಲಿ ಇದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕೇಳಿದ್ದಾದರೂ ಹೇಗೆ? ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಪ್ರಶ್ನಿಸಿದ್ದಾರೆ.
ಪಕ್ಕದಲ್ಲಿಯೇ ಇದ್ದವರಿಗೆ ಕೇಳದಿರುವುದು ದೂರದಲ್ಲಿದ್ದವರಿಗೆ ಕೇಳಿದ್ದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು. ಇದು ಪೂರ್ಯನಿಯೋಜಿತ ಕೃತ್ಯವಾಗಿದೆ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಅಷ್ಟಕ್ಕೂ ಸಿ.ಟಿ. ರವಿ ಅವರನ್ನು ನಾನು 30 ವರ್ಷಗಳಿಂದ ನೋಡುತ್ತ ಬಂದಿದ್ದೇನೆ. ಎದುರಿಗೆ ಬಂದಾಗ ನಮಸ್ಕಾರ ಸರ್ ಎಂದರೆ, ನಮಸ್ಕಾರ ಅಮ್ಮಾ ಎನ್ನುವ ಅವರ ಬಾಯಿ ಜಾರುವ ಪ್ರಶ್ನೆಯೇ ಇಲ್ಲ. ಸುಳ್ಳು ಸುದ್ದಿ ಹರಡಿರುವ ಹೆಬ್ಬಾಳ್ಕರ್ ಅವರು ಇದಕ್ಕ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.ಅಷ್ಟಕ್ಕೂ ಅವರು ದೂರು ನೀಡಿದ್ದಾರೆ. ಅದರ ಪ್ರಕಾರ ಕಾನೂನು ರೀತಿಯಲ್ಲಿ ಕ್ರಮವಾಗಲಿ. ಆದರೆ, ಸುವರ್ಣ ಸೌಧದದಲ್ಲಿಯೇ ಹಲ್ಲೆ ಮಾಡಲು ಯತ್ನಿಸಿದ್ದು ಹೇಗೆ? ಅಲ್ಲಿಗೆ ಗೂಂಡಾಗಳಂತೆ ಇರುವವರನ್ನು ಒಳಗೆ ಬಿಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡಿದರು.
ಎಬಿವಿಪಿಯಿಂದ ಬಂದಿರುವ ಸಿ.ಟಿ. ರವಿ ಅವರು ಸುಸಂಸ್ಕೃತ ವ್ಯಕ್ತಿಯಾಗಿದ್ದಾರೆ. ಅಂಥವರ ಮೇಲೆ ಈ ರೀತಿ ಸುಳ್ಳು ಆರೋಪ ಮಾಡಿದ್ದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.