ನಾಗಪೂಜೆಯಲ್ಲಿ ಭಾಗವಹಿಸಿ ರಿಲ್ಯಾಕ್ಸ್ ಆದ ಹೆಗ್ಡೆಶಿವಮೊಗ್ಗ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ ಕೋಟ

KannadaprabhaNewsNetwork |  
Published : Apr 28, 2024, 01:21 AM IST
ಜೆಪಿ27 | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಮೊದಲ ಹಂತದ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ರಿಲಾಕ್ಸ್‌ ಮೂಡ್‌ನಲ್ಲಿದ್ದಾರೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆಪಿ ಹೆಗ್ಡೆ ನಾಗ ಪೂಜೆಯಲ್ಲಿ ಭಾಗವಹಿಸಿದರೆ, ಬಿಜೆಪಿ ಅಭ್ಯರ್ಥಿ ಕೋಟ ಶಿವಮೊಗ್ಗ ಪ್ರಚಾರಕ್ಕೆ ತೆರಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ಮೂರು ವಾರಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಘಟ್ಟ ಹತ್ತಿ ಇಳಿದು ಓಡಾಟ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಶನಿವಾರ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದರು.

ಮುಂಜಾನೆಯಿಂದಲೇ ಸಾಕಷ್ಟು ಮಂದಿ ಕಾರ್ಯಕರ್ತರು, ಆಪ್ತರು ಮನೆಗೆ ಬಂದು ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದರು. ಅವರೊಂದಿಗೆ ಒಂದಷ್ಟು ಲೆಕ್ಕಾಚಾರಗಳು, ಮತದಾನ ಪ್ರಮಾಣಗಳ ಬಗ್ಗೆ ಹೆಗ್ಡೆ ಸಮಾಲೋಚನೆ ನಡೆಸಿದರು.

ಮಧ್ಯಾಹ್ನ ಮನೆಯ ಬಳಿ ಬಲ್ಕೂರು ಎಂಬಲ್ಲಿರುವ ಕುಟುಂಬದ ನಾಗಬನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದು, ಪತ್ನಿ ಮಕ್ಕಳೊಂದಿಗೆ ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಯೇ ಊಟ ಮಾಡಿ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಂಡರು. ಸಂಜೆಯಾಗುತ್ತಿದ್ದಂತೆ ಮತ್ತೆ ಆಪ್ತರು ಬಂದು ಮತ್ತೆ ರಾಜಕೀಯ ಮಾತು, ಲೆಕ್ಕಾಚಾರಗಳು ನಡೆದವು.

ಗೆಲ್ಲುವ ಪೂರ್ಣ ಭರವಸೆಯನ್ನು ವ್ಯಕ್ತಪಡಿಸಿರುವ ಹೆಗ್ಡೆ, ಚಿಕ್ಕಮಗಳೂರು ಭಾಗದಲ್ಲಿ ತಮಗೆ ಮುನ್ನಡೆಯ ಮತಗಳು ಸಿಕ್ಕಿದ್ದು, ಉಡುಪಿ ಭಾಗದಲ್ಲಿಯೂ ಹೆಚ್ಚು ಮತಗಳು ಸಿಕ್ಕಿವೆ. ಜನರಲ್ಲಿ ಬದಲಾವಣೆಯ ಮಾತು ಕೇಳಿಬಂದಿವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಜನರು ಮತ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಶಿವಮೊಗ್ಗ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ ಕೋಟತಮ್ಮ ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರ, ಚುನಾವಣೆಯನ್ನು ಮುಗಿಸಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಸೂಚನೆಯಂತೆ ಶನಿವಾರವೇ ಬೈಂದೂರಿಗೆ ತೆರಳಿ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಪ್ರಚಾರ ಆರಂಭಿಸಿದ್ದಾರೆ.ಶನಿವಾರ ಎಂದಿನಂತೆ ಬೆಳಗ್ಗೆ ಉಡುಪಿಯಲ್ಲಿರುವ ಪಕ್ಷದ ಕಚೇರಿಗೆ ತೆರಳುವ ಮುನ್ನ ಮನೆ ಬಳಿಯ ಚಿಕ್ಕ ಹೊಟೇಲಿಗೆ ತೆರಳಿ ಚಹಾ ಕುಡಿದರು. ಈ ಸಂದರ್ಭ ಸಿಕ್ಕಿದ ಪರಿಚಯದ ಹಿರಿಯೊಬ್ಬರ ಮಾತುಗಳನ್ನು ಕೇಳಿ ನಗೆಚಟಾಕಿ ಹಾರಿಸಿದರು.ಅಲ್ಲಿಂದ ಉಡುಪಿಗೆ ಬಂದು ಸುದ್ದಿಗಾರರನ್ನು ಭೇಟಿಯಾಗಿ ಒಂದಷ್ಟು ರಾಜಕೀಯದ ಹೇಳಿಕೆಗಳನ್ನು ನೀಡಿದರು. ನಂತರ ಕಡಿಯಾಳಿಯಲ್ಲಿರುವ ಪಕ್ಷದ ಕಚೇರಿಗೆ ತೆರಳಿ, ಪಕ್ಷದ ಪ್ರಮುಖರೊಂದಿಗೆ ಮತದಾನದ ವಿವರಗಳನ್ನು ಪಡೆದರು, ನಂತರ ಬೈಂದೂರಿಗೆ ಹೊರಟರು.ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ದಾಖಲೆ ಮಟ್ಟದ ಮತದಾನ ನಡೆದಿದೆ. ನಮ್ಮ ಬೂತ್ ಮಟ್ಟದ ಕಾರ್ಯಕರ್ತರು ದೇಶದ ಚುನಾವಣೆ ಎಂದು ಕೆಲಸ ಮಾಡಿದ್ದಾರೆ. ಜೊತೆಗೆ ಜೆಡಿಎಸ್ ಒಟ್ಟಾಗಿ ಒಂದಾಗಿ ಶ್ರಮಿಸಿದೆ. ನಮ್ಮ ಕಾರ್ಯಕರ್ತರು ಕೊಟ್ಟಿರುವ ಮಾಹಿತಿ ಆಧಾರದಲ್ಲಿ ನಮಗೆ ಗೆಲುವು ನಿಶ್ಚಿತ, ಅಂತರ ಎಷ್ಟು ಎಂದು ನಿಖರವಾಗಿ ಹೇಳುವುದು ಕಷ್ಟ ಎಂದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ