ಸಂಗೀತ ಕ್ಷೇತ್ರಕ್ಕೆ ಹೆಗಡೆ ಕೊಡುಗೆ ಅಪಾರ

KannadaprabhaNewsNetwork |  
Published : Aug 21, 2026, 03:30 AM IST
ಕಾರ್ಯಕ್ರಮದಲ್ಲಿ ಜಿ.ಎಸ್. ಹೆಗಡೆ ಅವರನ್ನು ಗಣ್ಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಸಪ್ತಕ ಹುಟ್ಟು ಹಾಕಿ, ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮ ಸಂಘಟಿಸುತ್ತಿರುವ ಜಿ.ಎಸ್. ಹೆಗಡೆ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಕೊಡುಗೆ ಅಪಾರವಾದುದು ಎಂದು ಪದ್ಮಶ್ರೀ ಪುರಸ್ಕೃತ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

ಧಾರವಾಡ:

ಬೆಂಗಳೂರಿನಲ್ಲಿ ಸಪ್ತಕ ಹುಟ್ಟು ಹಾಕಿ, ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮ ಸಂಘಟಿಸುತ್ತಿರುವ ಜಿ.ಎಸ್. ಹೆಗಡೆ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಕೊಡುಗೆ ಅಪಾರವಾದುದು ಎಂದು ಪದ್ಮಶ್ರೀ ಪುರಸ್ಕೃತ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

ಬೆಂಗಳೂರಿನ ಶ್ರೀರಾಮ ಕಲಾವೇದಿಕೆಯು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಜಿ.ಎಸ್. ಹೆಗಡೆ ಅವರ ಸನ್ಮಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಖ್ಯಾತ ತಬಲಾ ವಾದಕ ಪಂ. ರಘುನಾಥ ನಾಕೋಡ ಮಾತನಾಡಿ, ಹೆಗಡೆ ಅವರು ಬಾಲ, ಯುವ, ಪ್ರಬುದ್ಧ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಲ್ಲದೇ ಹಿರಿಯ ಕಲಾವಿದರಿಗೆ ಮಾಡುವ ಸನ್ಮಾನದಂಥ ಕಾರ್ಯಗಳು ಅತ್ಯಂತ ಪ್ರಶಂಸನೀಯವಾದುದು ಎಂದರು.

ಸನ್ಮಾನ ಸ್ವೀಕರಿಸಿದ ಜಿ.ಎಸ್. ಹೆಗಡೆ, ನೀವು ಹೇಗೆ ಕಾರ್ಯಕ್ರಮ ಮಾಡುತ್ತೀರಿ ಹೆಗಡೆ ಅವರೆ ಎಂದು ಕೇಳಿದರೆ ಸ್ವತಃ ನನ್ನಲ್ಲಿ ಅದಕ್ಕೆ ಉತ್ತರವಿಲ್ಲ. ಅದ್ಹೇಗೊ ನಡೀತದೆ. ನಾನು ನಿಮಿತ್ತ ಮಾತ್ರ. ಈ ಸಂಧ್ಯಾಕಾಲದಲ್ಲಿ ಧಾರವಾಡದಂಥ ಗಂಡುಮೆಟ್ಟಿನ ಸ್ಥಳದಲ್ಲಿ ಸನ್ಮಾನಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು. ಶ್ರೀರಾಮ ಕಲಾವೇದಿಕೆ ರೂವಾರಿ ಪಂ. ರವೀಂದ್ರ ಯಾವಗಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಂ. ವೆಂಕಟೇಶಕುಮಾರ ಹಾಗೂ ಪಂ. ರಘುನಾಥ ನಾಕೋಡ ಅವರನ್ನು ಸನ್ಮಾನಿಸಲಾಯಿತು. ಶ್ರಾವಣ ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಧಾರವಾಡ ಘರಾಣೆಯ ಯುವ ಪ್ರತಿಭೆ ಮೊಹಸಿನ್ ಖಾನರ ಸಿತಾರ ತಂತುಗಳ ನಿನಾದ ಹರಿದುಬಂತು. ಅವರು ಆಲಾಪ್, ಜೋಡ್, ಝಾಲಾಗಳೊಂದಿಗೆ ಮನಮೋಹಕ ಕಲಾಶ್ರೀ ರಾಗವನ್ನು ಸಾದರಪಡಿಸಿದರು. ಇವರಿಗೆ ಯುವ ಲಯವಾದಕ ಕಿರಣ ಯಾವಗಲ್ ತಬಲಾ ಸಾಥ್ ನೀಡಿದರು. ಸಭಾ ಕಾರ್ಯಕ್ರಮದ ನಂತರ ಮುಂಬೈನ ಧನಂಜಯ ಹೆಗಡೆ ಅವರಿಂದ ಗಾನಸುಧೆ ಮೂಡಿಬಂತು. ಇವರಿಗೆ ಹಾರ್ಮೋನಿಯಂದಲ್ಲಿ ಗುರುಪ್ರಸಾದ ಹೆಗಡೆ, ತಬಲಾದಲ್ಲಿ ಶ್ರೀಧರ ಮಾಂಡ್ರೆ ತಬಲಾ ಸಾಥ್ ಸಂಗತ್ ಮಾಡಿದರು. ಯಶ್ ಹಾಗೂ ಶಿವಾನಿ ಕವಠೇಕರ ತಂಬೂರಿ ಸಾಥ್ ನೀಡಿದರು.ರವೀಂದ್ರ ದೇಸಾಯಿ ಅವರು ಪ್ರಾಸ್ತಾವಿಕ ಮಾತನಾಡಿದರು. ಶರತ ದೇಶಪಾಂಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಂ. ಸೋಮನಾಥ ಮರಡೂರ, ಪಂ. ಬಿ.ಎಸ್. ಮಠ, ವಿದುಷಿ ಅಕ್ಕಮಹಾದೇವಿ ಮಠ, ಉ. ಫಯಾಜ್‌ಖಾನ್, ಪಂ. ಶಾಂತಾರಾಮ ಹೆಗಡೆ, ಉ. ಶಫೀಕ್ ಖಾನ್, ಪಂ. ಜಯತೀರ್ಥ ಮೇವುಂಡಿ, ವಿದುಷಿ ರೇಣುಕಾ ನಾಕೋಡ, ರಾಧಾ ದೇಸಾಯಿ, ಡಾ. ಶಶಿಧರ ನರೇಂದ್ರ, ರವೀಂದ್ರ ಕವಠೇಕರ, ವೀರಣ್ಣ ಪತ್ತಾರ, ಪ್ರಕಾಶ ಬಾಳಿಕಾಯಿ, ವೀಣಾ ಮಠ, ಶುಭಾಂಗಿ ಜಾಧವ, ಬಸವರಾಜ ವಂದಲಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ, ಕ್ರಿಮಿನಾಶಕದಿಂದ ಕಿಡ್ನಿ, ಹೃದಯಕ್ಕೆ ಅಪಾಯ!
ಸುರಕ್ಷಿತವಾಗಿ ಪಡಿತರ ಸಾಗಾಟ ಆಗಲಿ: ಪಾಟೀಲ