ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಹೆಗ್ಗುಳ ಗ್ರಾಮದ ಗ್ರಾಮಸ್ಥರು ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯವನ್ನು ಬುಧವಾರ ನಡೆಸಿದರು.ಕಳೆದ ಹಲವಾರು ವರ್ಷಗಳಿಂದ ಊರಿನ ಗದ್ದೆಯಲ್ಲಿ ಸಾಮೂಹಿಕ ಬತ್ತದ ನಾಟಿ ಮಾಡಿಕೊಂಡು ಬರುತ್ತಿದ್ದೇವೆ. ಮೊದಲ ದಿನ ಮನೆಗೆ ಒಬ್ಬರಂತೆ ಗದ್ದೆಗೆ ಆಗಮಿಸಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. 3.25 ಏಕರೆ ಗದ್ದೆಯಲ್ಲಿ ಬಂದ ಲಾಭವನ್ನು ಗ್ರಾಮದ ದೇವರ ಹರಿಸೇವೆ, ಅರ್ಚಕರ ಸಂಬಳ ಸೇರಿದಂತೆ ವರ್ಷದ ಖರ್ಚನ್ನು ಭರಿಸಲಾಗುವುದು ಎಂದು ಗ್ರಾಮದ ಅಧ್ಯಕ್ಷ ಎಚ್.ಕೆ. ತಮ್ಮೇಗೌಡ ತಿಳಿಸಿದರು. ಎಲ್ಲರೂ ಸಮಯಕ್ಕೆ ಆಗಮಿಸಿ, ಸಾಮೂಹಿಕ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಗ್ರಾಮಸ್ಥರು, ಒಟ್ಟಾಗಿ ಸೇರಿ ಊಟವನ್ನು ಮಾಡುವ ವ್ಯವಸ್ಥೆ ಮಾಡುವುದರೊಂದಿಗೆ ಗ್ರಾಮದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ಎಚ್.ಡಿ. ಬಸವರಾಜು ಮಾತನಾಡಿ, ಕಳೆದ 25 ವರ್ಷಗಳಿಂದ ಗ್ರಾಮಸ್ಥರು ಸೇರಿ ಗದ್ದೆಯಲ್ಲಿ ನಾಟಿ ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲ ಕೆಲಸವನ್ನು ನಾವೇ ಮಾಡಿ ಅದಕ್ಕೆ ತಗಲುವ ಖರ್ಚನ್ನು ಗ್ರಾಮಸ್ಥರೇ ಭರಿಸಲಾಗುತ್ತದೆ. ದೇವಾಲಯಕ್ಕೆ ಬೇರೆ ಆದಾಯದ ಮೂಲ ಇಲ್ಲದಿರುವುದರಿಂದ ನಾವುಗಳು ಒಂದಾಗಿ ಕೆಲಸ ಮಾಡಿ, ದೇವಾಲಯದ ವೆಚ್ಚಕ್ಕೆ, ಈ ಗದ್ದೆಯಲ್ಲಿ ಸಿಗುವ ಬತ್ತವನ್ನು ಮಾರಿದ ಸಂದರ್ಭ ಸುಮಾರು 1.50 ಲಕ್ಷ ರು. ಹಣ ಬರುತ್ತದೆ. ಆ ಹಣವನ್ನು ಬಳಸಿ, ದೇವಾಲಯದ ಅಭಿವೃದ್ಧಿ ಮತ್ತು ಖರ್ಚಿಗೆ ಬಳಸುತ್ತೇವೆ ಎಂದು ತಿಳಿಸಿದರು.ನಾಟಿ ಮಾಡುವ ಸಂದರ್ಭ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಡಿ. ಚೇತನ, ಖಜಾಂಚಿ ಉಮೇಶ್, ಪದಾಧಿಕಾರಿ ಎಚ್.ಎಚ್. ನವೀನ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.