ಖಾಸಗಿಯವರು ಮುಂದೆ ಬಂದರೆ ಹೆಲಿ ಟೂರಿಸಂ ಜಾರಿ

KannadaprabhaNewsNetwork |  
Published : Oct 31, 2024, 01:06 AM IST
30ಜಿಡಿಜಿ15 | Kannada Prabha

ಸಾರಾಂಶ

ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಉತ್ಸಾಹದಾಯಕವಾಗಿ, ಸಮಾಜದ ಎಲ್ಲ ವರ್ಗದ ಬಡ, ಮಧ್ಯಮ, ಮೇಲ್ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆ ಗಮನದಲ್ಲಿರಿಸಿಕೊಂಡು ಹೊಸ ನೀತಿ ರಚನೆ

ಗದಗ: ರಾಜ್ಯದಲ್ಲಿ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅದರ ಭಾಗವಾಗಿ ಹೆಲಿ ಟೂರಿಜಂನ್ನು ಜಾರಿಗೆ ತರುವ ಚಿಂತನೆ ಇದೆ. ಖಾಸಗಿಯವರು ಮುಂದೆ ಬಂದಲ್ಲಿ ಅವಕಾಶ ಕಲ್ಪಿಸುವ ಚಿಂತನೆ ಇದೆ ಎಂದು ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ರಾಜ್ಯದಲ್ಲಿ 36ರಿಂದ 40 ಕೋಟಿ ಜನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ಸಂಖ್ಯೆಯನ್ನು 48 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 10 ರಿಂದ 12 ಲಕ್ಷ ವಿದೇಶಿಗರು ನಮ್ಮ ರಾಜ್ಯ ಬರುತ್ತಾರೆ. ಈ ಪ್ರಮಾಣವನ್ನು 20 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಈ ಮೂಲಕ ರಾಜ್ಯದ ಪ್ರವಾಸೋದ್ಯಮ ಉನ್ನತೀಕರಿಸುವ ಕೆಲಸ ಸರ್ಕಾರ ಮಾಡಲಿದೆ. ನಮ್ಮ ಗುರಿ ಮುಟ್ಟುವಲ್ಲಿ ಜನರ ಸಹಕಾರ, ಸ್ನೇಹದ ಮನೋಭಾವ ಅವಶ್ಯಕತೆ ಇದೆ. ಅತಿಥಿಗಳನ್ನು ಗೌರವಿಸುವ ಗುಣ ಸ್ಥಳೀಯರು ಬೆಳೆಸಿಕೊಂಡಾಗ ಪ್ರವಾಸೋದ್ಯಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.

ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಉತ್ಸಾಹದಾಯಕವಾಗಿ, ಸಮಾಜದ ಎಲ್ಲ ವರ್ಗದ ಬಡ, ಮಧ್ಯಮ, ಮೇಲ್ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆ ಗಮನದಲ್ಲಿರಿಸಿಕೊಂಡು ಹೊಸ ನೀತಿ ರಚನೆ ಮಾಡಲಾಗಿದೆ. ಈಗಾಗಲೇ ಈ ನೀತಿಗೆ ಸಿದ್ದರಾಮಯ್ಯ ನಾಯಕತ್ವದ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶಾಲೆಯ ಶೈಕ್ಷಣಿಕ ಪ್ರವಾಸ, ರೈತರ ಪ್ರವಾಸ, ಆಧ್ಯಾತ್ಮಿಕ ಯಾತ್ರಾರ್ಥಿಗಳ ಪ್ರವಾಸ, ಪಾರಂಪರಿಕೆ, ಸಾಹಸ ಹಾಗೂ ವಿರಾಮ, ವಿನೋದ, ಜ್ಞಾನಾರ್ಜನೆ, ಸಂತೋಷ, ಮನಃಶಾಂತಿ, ವಿಶ್ರಾಂತಿಗಳಿಗೆ ಒತ್ತು ನೀಡಿ ಸಮಗ್ರ ನೀತಿ ರೂಪಿಸಲಾಗಿದೆ ಎಂದರು.

ಒಟ್ಟಾರೆ ಕರ್ನಾಟಕವನ್ನು ಪ್ರವಾಸಿ ತಾಣವಾಗಿಸಲು ಹೊಸ ನೀತಿ ಜಾರಿಗೆ ತರಲಾಗಿದೆ. ಸಾಂಸ್ಕೃತಿಕ, ಪರಿಸರ, ಶೈಕ್ಷಣಿಕ, ಚಲನಚಿತ್ರ, ಒಳನಾಡಿನ ಜಲ, ವೈದ್ಯಕೀಯ, ಗಣಿಗಾರಿಕೆ, ಗ್ರಾಮೀಣ, ಆಧ್ಯಾತ್ಮಿಕ, ಸ್ವಾಸ್ಥ್ಯ ಪ್ರವಾಸೋಧ್ಯಮ ಸೇರಿದಂತೆ ಒಟ್ಟು 25 ವಿಷಯಾಧಾರಿತ ಕ್ಷೇತ್ರಗಳನ್ನು ಯಶಸ್ವಿ ಮಾಡಲು 44 ವಿವಿಧ ರೀತಿಯ ಪ್ರವಾಸೋದ್ಯಮ ನೀತಿ ರೂಪಿಸಲಾಗಿದೆ. ಅದರಲ್ಲಿಯೂ ಬೀಚ್ ಹಾಗೂ ಸಮುದ್ರ ಆಧಾರಿತ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.

ಹಿರಿಯ ಮುಖಂಡ ಗುರಣ್ಣ ಬಳಗಾನೂರ, ನಗರಾಭಿವ್ರದ್ದಿ ಪ್ರಾದಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಿ.ಬಿ. ಅಸೂಟಿ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಕೆಡಿಪಿ ಸಮಿತಿ ಸದಸ್ಯ ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ ಮುಂತಾದವರು ಹಾಜರಿದ್ದರು.

ಸ್ವಾತಂತ್ರ್ಯ ಸಂಗ್ರಾಮ-ಶತಮಾನೋತ್ಸವ ನಡೆಸಲು ತೀರ್ಮಾನ: 1924ನಲ್ಲಿ ಬೆಳಗಾವಿಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾಗುತ್ತಾರೆ. ಅದು 39ನೇ ಅಧಿವೇಶನವಾಗಿತ್ತು. ಮಹಾತ್ಮ ಗಾಂಧಿ ನಾಯಕತ್ವ ವಹಿಸಿದ ಮೇಲೆ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವಾಗಿ ಬದಲಾವಣೆ ಆಯಿತು. ಈ ಮಹತ್ವದ ಅಧಿವೇಶನ ಮೆಲಕು ಹಾಕಲು ಶತಮಾನೋತ್ಸವ ನಡೆಸಲು ತೀರ್ಮಾನಿಸಲಾಗಿದ್ದು, 2024, ಅಕ್ಟೋಬರ್‌ನಿಂದ 2025ರ ಅ. 2 ವರೆಗೆ ವರ್ಷಪೂರ್ತಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮ ಯಶಸ್ಸಿಗೆ 30 ಜನರ ಸಮಿತಿ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರನ್ನು ಆಹ್ವಾನಿಸಿ, ಅವರಿಗೆ ಸಿಎಂ ಪತ್ರ ಬರೆದಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ ಸಿಎಂ ಪತ್ರ ಪ್ರದರ್ಶನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ