ಜೂ.1ರಿಂದ ಹೆಲ್ಮೆಟ್ ಕಡ್ಡಾಯ: ಜಾಗೃತಿ ಅಭಿಯಾನಕ್ಕೆ ವೇಗ

KannadaprabhaNewsNetwork |  
Published : May 15, 2026, 02:00 AM IST
ಬಳ್ಳಾರಿಯಲ್ಲಿ ಗುರುವಾರ ಜರುಗಿದ ಹೆಲ್ಮೆಟ್ ಜಾಗೃತಿ ಅಭಿಯಾನದ ಬೈಕ್ ರ‍್ಯಾಲಿಯಲ್ಲಿ ಡಿಸಿ ನಾಗೇಂದ್ರ ಪ್ರಸಾದ್, ಎಸ್ಪಿ ಸುಮನ್ ಪನ್ನೇಕರ್, ಜಿ.ಪಂ.ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ಜೂ.1ರಿಂದ ಹೆಲ್ಮೆಟ್ ಧರಿಸದೇ ಓಡಾಡುವವರಿಗೆ ಭಾರೀ ಪ್ರಮಾಣದ ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ: ಹೆಚ್ಚುತ್ತಿರುವ ರಸ್ತೆ ಅಪಘಾತ ತಪ್ಪಿಸಲು, ಜನಜೀವ ಸುರಕ್ಷತೆಗಾಗಿ ಜೂ.1ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ನಿರ್ಧರಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಈ ಸಂಬಂಧ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಜಾಗೃತಿ ಅಭಿಯಾನ ಆರಂಭಿಸಿದೆ.

ಟ್ರಾಫಿಕ್ ಪೊಲೀಸರು ಶಾಲಾ-ಕಾಲೇಜುಗಳಿಗೆ ತೆರಳಿ ಹೆಲ್ಮೆಟ್ ಬಳಕೆಯಿಂದಾಗುವ ಅನುಕೂಲಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದು, ಜೂ.1ರಿಂದ ಹೆಲ್ಮೆಟ್ ಧರಿಸದೇ ಓಡಾಡುವವರಿಗೆ ಭಾರೀ ಪ್ರಮಾಣದ ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಹೆಲ್ಮೆಟ್ ಜಾಗೃತಿ ಅಭಿಯಾನ ಅಂಗವಾಗಿ ನಗರದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರ ಪೊಲೀಸ್ ಠಾಣೆ ಸಹಯೋಗದಲ್ಲಿ ಹೆಲ್ಮೆಟ್ ಜಾಗೃತಿ, ಹೆಲ್ಮೆಟ್ ವಿತರಣೆ, ಬೈಕ್ ರ‍್ಯಾಲಿ ನಡೆಯಿತು. ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಬಳ್ಳಾರಿಯ ಜನರು ಈಗಾಗಲೇ ಸಕಾಲ ಸೇವೆ, ಜನಗಣತಿ ಕಾರ್ಯಗಳಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನ ಪಡೆದು ಇಚ್ಛಾಶಕ್ತಿ ಸಾಬೀತುಪಡಿಸಿದ್ದಾರೆ. ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಮೂಲಕ ಜಿಲ್ಲೆಯ ಹೆಸರನ್ನು ಎತ್ತಿಹಿಡಿಯಬೇಕು ಎಂದರು.

3 ವರ್ಷದಲ್ಲಿ 462 ಜನ ಅಪಘಾತದಲ್ಲಿ ಸಾವು:

ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಬಳ್ಳಾರಿ ಜಿಲ್ಲೆಯೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ (2023ರಿಂದ 2026ರ ಏಪ್ರಿಲ್ ವರೆಗೆ) ಬೈಕ್ ಅಪಘಾತಗಳಿಂದಾಗಿ 462 ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸರಾಸರಿ ಪ್ರತಿ ಎರಡು ದಿನಕ್ಕೆ ಒಂದು ಸಾವು ಬೈಕ್ ಅಪಘಾತದಿಂದ ಸಂಭವಿಸುತ್ತಿದೆ. ಅಂದರೆ ವರ್ಷಕ್ಕೆ ಸುಮಾರು 150ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ಇಂದಿನ ಕಾಲದಲ್ಲಿ ಜನರು ತಾವು ಬಳಸುವ ಬೆಲೆಬಾಳುವ ಮೊಬೈಲ್ ಫೋನ್‌ಗಳಿಗೆ ನೀಡುವಷ್ಟು ಸುರಕ್ಷತೆಯನ್ನು ತಮ್ಮ ಜೀವಕ್ಕೆ ನೀಡುತ್ತಿಲ್ಲ ಎಂಬುದು ವಿಷಾದನೀಯ ಎಂದರು.

ಇದಕ್ಕೂ ಮುನ್ನ ಗಣ್ಯರು ಹೆಲ್ಮೆಟ್ ಧರಿಸಿ- ಜೀವ ಉಳಿಸಿ ಎನ್ನುವ ಭಿತ್ತಿಪತ್ರ ಅನಾವರಣಗೊಳಿಸಿದರು. ಬಳಿಕ ಪೌರಕಾರ್ಮಿಕರಿಗೆ, ಸಾರ್ವಜನಿಕರು ಒಳಗೊಂಡಂತೆ 100 ಹೆಲ್ಮೆಟ್ ವಿತರಿಸಲಾಯಿತು.

ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಡಿಎಆರ್ ಡಿಎಸ್ಪಿ ತಿಪ್ಪೇಸ್ವಾಮಿ, ಬಳ್ಳಾರಿ ನಗರ ಡಿಎಸ್ಪಿ ಗೋವಿಂದರಾಜು, ಸಂಚಾರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರುದ್ರಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ ಇದ್ದರು.

ಗಮನ ಸೆಳೆದ ಬೈಕ್ ರ‍್ಯಾಲಿ: ಹೆಲ್ಮೆಟ್ ಜಾಗೃತಿ ಅಂಗವಾಗಿ ನಗರದಲ್ಲಿ ಆಕರ್ಷಕ ಬೈಕ್ ರ‍್ಯಾಲಿ ನಡೆಯಿತು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಜಾಗೃತಿ ಅಂಗವಾಗಿ ಸ್ವತಃ ತಾವೇ ಬೈಕ್ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ