ಕುಮಟಾ: ತಾಲೂಕಿನ ವ್ಯಾಪ್ತಿಯಲ್ಲಿ ಘಟಿಸುತ್ತಿರುವ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಿ ವಾಹನ ಸವಾರರ ಹಾಗೂ ಅಮಾಯಕ ಜನರ ಪ್ರಾಣಕ್ಕೆ ಅಪಾಯ ತಗ್ಗಿಸಬೇಕು ಎಂದು ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ಸೂಚನೆ ನೀಡಿದರು.
ಇನ್ನು ಮುಂದೆ ಕುಮಟಾ ತಾಲೂಕಿನ ವ್ಯಾಪ್ತಿಯ ಪೆಟ್ರೋಲ್ ಬಂಕ್‌ಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ನೀಡಬೇಡಿ, ಬಂಕ್‌ಗಳಲ್ಲಿ ಬ್ಯಾನರ್ ಹಾಕಿ ಎಂದು ಉಪವಿಭಾಗಾಧಿಕಾರಿ ಸೂಚಿಸಿದರು.
ಪ್ರತಿಕ್ರಿಯಿಸಿದ ಪೆಟ್ರೋಲ್ ಬಂಕ್ ಮಾಲೀಕರು, ಇದರಿಂದ ಬಂಕ್ ನೌಕರರೊಂದಿಗೆ ಸಾರ್ವಜನಿಕರು ಘರ್ಷಣೆಗೆ ಇಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕು ಹಾಗೂ ಬಂಕ್ ನೌಕರರಿಗೆ ರಕ್ಷಣೆ ನೀಡಬೇಕು ಎಂದರು.ಎಲ್ಲ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು. ಅಧಿಕಾರಿಗಳು ಕಾಲೇಜುಗಳಲ್ಲಿ ವಿಶೇಷ ಶಿಬಿರವನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ತಿಳಿಸಿ ಎಂದರು. ಸಂಚಾರಕ್ಕೆ ಅಡಚಣೆ ಉಂಟುಮಾಡುವ ರಸ್ತೆಯಂಚಿನ ಗೂಡಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಲಾಯಿತು.
ಪುರಸಭೆ ಹಾಗೂ ಗ್ರಾಪಂ ವ್ಯಾಪ್ತಿಯ ಪ್ರವೇಶ ಹಾಗೂ ನಿರ್ಗಮನದಲ್ಲಿ ಸ್ವಾಗತ ಫಲಕ, ಸಂಚಾರಿ ನಿಯಮ ಪಾಲನೆ ಫಲಕ ಅಳವಡಿಸಲು ಸೂಚಿಸಲಾಯಿತು. ಪಟ್ಟಣದ ಹಲವು ವೃತ್ತಗಳಲ್ಲಿ ಅಳವಡಿಸಿದ ದೊಡ್ಡ ಬ್ಯಾನರ್ ತೆರವುಗೊಳಿಸುವುದು ಹಾಗೂ ಯಾವುದೇ ವೃತ್ತಕ್ಕೆ ಬ್ಯಾನರ್ ಅಳವಡಿಸಲು ಅನುಮತಿ ನೀಡಬಾರದು ಎಂದು ಸಭೆಯಲ್ಲಿ ಸೂಚಿಸಲಾಯಿತು.ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಲ್ಲಿ ಯಾವುದೇ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಅಂತಹ ವ್ಯಕ್ತಿಗಳ ಹಾಗೂ ವಾಹನದ (ನಂಬರ್ ಪ್ಲೇಟ್ ಸರಿಯಾಗಿ ಕಾಣುವಂತೆ) ಪೋಟೋ ತೆಗೆದು ಪೊಲೀಸ್ ಇಲಾಖೆಯ ನಂಬರ್‌ಗೆ ಕಳುಹಿಸಬಹುದಾಗಿದೆ. ಜಿಪಿಎಸ್ ಫೋಟೋ ಕಳುಹಿಸಿದರೆ ಘಟನೆಯ ಸ್ಥಳ ಹಾಗೂ ಸಮಯ ಗುರುತಿಸಬಹುದು ಎಂದು ಪೊಲೀಸರಿಗೆ ಉಪವಿಭಾಗಾಧಿಕಾರಿ ಸೂಚಿಸಿದರು.
ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ, ಬಿಇಒ ಉದಯ ನಾಯ್ಕ, ಪ್ರಾಚಾರ್ಯ ಎನ್.ಡಿ. ನಾಯ್ಕ, ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಎಇಇ ರಾಘವೇಂದ್ರ ಇತರರು ಇದ್ದರು.