ವ್ಯಸನಿಗಳನ್ನು ಮುಖ್ಯವಾಹಿನಿಗೆ ತರಲು ಸಹಕರಿಸಿ

KannadaprabhaNewsNetwork |  
Published : Jun 27, 2025, 12:48 AM IST
ಪೋಟೋ: 26ಎಸ್‌ಎಂಜಿಕೆಪಿ01ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಏನೇ ಕಷ್ಟ ಬಂದರೂ ನಾನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದಿಲ್ಲ. ಹಾಗೂ ಒಳಗಾದವರನ್ನು ದೂರ ಇಡದೇ ಮುಖ್ಯ ವಾಹಿನಿಗೆ ತರುತ್ತೇನೆಂಬ ಉದ್ದೇಶದಿಂದ ಯುವಜನತೆ ಒಗ್ಗೂಡಿ ಸೈನಿಕರಂತೆ ಮಾದಕ ವಸ್ತುಗಳ ವ್ಯಸನದ ವಿರುದ್ಧ ಹೋರಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ ನೀಡಿದರು.

ಶಿವಮೊಗ್ಗ: ಏನೇ ಕಷ್ಟ ಬಂದರೂ ನಾನು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುವುದಿಲ್ಲ. ಹಾಗೂ ಒಳಗಾದವರನ್ನು ದೂರ ಇಡದೇ ಮುಖ್ಯ ವಾಹಿನಿಗೆ ತರುತ್ತೇನೆಂಬ ಉದ್ದೇಶದಿಂದ ಯುವಜನತೆ ಒಗ್ಗೂಡಿ ಸೈನಿಕರಂತೆ ಮಾದಕ ವಸ್ತುಗಳ ವ್ಯಸನದ ವಿರುದ್ಧ ಹೋರಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ ನೀಡಿದರು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗುರುವಾರ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಮತ್ತು ನಿಷೇಧ ಕುರಿತು ಅನೇಕ ಕಾಯ್ದೆ ಕಾನೂನುಗಳು ಇದ್ದು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಆದರೆ ಯುವಜನತೆ ನಾವು ಮಾದಕ ವಸ್ತುಗಳಿಗೆ ದಾಸರಾಗುವುದಿಲ್ಲವೆಂಬ ಉದ್ದೇಶದಿಂದ ಒಗ್ಗೂಡಬೇಕಿದೆ ಎಂದರು.

ವೈಯಕ್ತಿಕ, ಕೌಟುಂಬಿಕ, ಮಾನಸಿಕ, ಕೆಲವೊಮ್ಮೆ ಫ್ಯಾಷನ್ ಹೀಗೆ ಇತರೆ ಕಾರಣಗಳಿಂದ ಯುವಜನರಲ್ಲಿ ಮಾದಕ ವಸ್ತುಗಳ ಬಳಕೆ ಶುರುವಾಗಿ ಚಟವಾಗಿ, ಖಾಯಿಲೆಯಾಗುತ್ತದೆ. ಆದರೆ ನಾವು ವ್ಯಸನಿಗಳನ್ನು ಸಮಾಜದಿಂದ ದೂರ ಇಡಬಾರದು. ಬದಲಾಗಿ ಅವರನ್ನು ಮುಖ್ಯವಾಹಿನಿಗೆ ತರಲು ಸಹಾಯ ಮಾಡಬೇಕು. ಬೆಂಬಲಿಸಬೇಕು. ಆಪ್ತಸಮಾಲೋಚನೆಗೆ ಒಳಪಡಿಸಬೇಕು. ವ್ಯಸನದಿಂದ ಹೊರತರಲು ಡಿ-ಅಡಿಕ್ಷನ್ ಕೇಂದ್ರಗಳನ್ನು ಆರಂಭಿಸಬೇಕು. ಆಗ ಇವರನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲೆ ಅತಿ ಹೆಚ್ಚು ಮಾದಕ ವಸ್ತುಗಳನ್ನು ಜಿಲ್ಲೆಯಲ್ಲಿ ಸೀಜ್ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಮುಖ್ಯವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜೀವನ ಒಂದಲ್ಲ, ಎರಡಲ್ಲ ಹಲವಾರು ಅವಕಾಶಗಳನ್ನು ನೀಡುತ್ತದೆ. ಆದರೆ ಚಟಕ್ಕೆ ಒಳಗಾದರೆ ಅವಕಾಶ ವಂಚಿತರಾದಂತೆ ಆಗುತ್ತದೆ. ಆದ್ದರಿಂದ ಯುವಜನತೆ ಕಾರ್ಯಪಡೆಯಾಗಿ ಸೈನಿಕರಂತೆ ಮಾದಕ ವಸ್ತುಗಳ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ವಿಷಯಗಳನ್ನು ಗ್ರಹಿಸಿ ಅನುಪಾಲನೆ ಮಾಡಬೇಕು. ಕೆಟ್ಟದ್ದರ ಕುರಿತು ಮಾಹಿತಿ ಇರಬೇಕು. ಆದರೆ ಇತ್ತೀಚೆಗೆ ಇದು ಉಲ್ಟಾ ಆಗುತ್ತಿದೆ. ಇದು ಆಗಬಾರದು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಮಾದಕ ವಸ್ತು ಸೇವನೆ ಮಾಡಲು ಉತ್ತೇಜಿಸುವ ಹಾಗೂ ಒತ್ತಡ ಪಡಿಸುವುದಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಮಾದಕ ವ್ಯಸನ ವಸ್ತುಗಳ ಬಳಕೆ, ಸಾಗಾಣೆ ಮಾಡುತ್ತಿರುವುದು ಗೊತ್ತಿದ್ದೂ ಸುಮ್ಮನಿದ್ದರೆ ಆ ಕ್ರಿಯೆಗೆ ಕುಮ್ಮಕ್ಕು ನೀಡಿದಂತೆ, ಇದು ಸಾಬೀತಾದಲ್ಲಿ ಅಂತಹವರಿಗೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸಬಹುದು. ಯಾವುದೇ ವ್ಯಸನಿಗಳನ್ನು ದೂರ ಇಡದೇ ಅವರಿಗೆ, ಆಪ್ತ ಸಮಾಲೋಚನೆ, ಡಿ ಅಡಿಕ್ಷನ್ ಇತರೆ ಮೂಲಕ ಸಹಕಾರ ನೀಡಿ ಮುಖ್ಯ ವಾಹಿನಿಗೆ ತರಲು ಕೈಜೋಡಿಸಬೇಕು. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡಲು 112ಕ್ಕೆ ಕರೆ ಮಾಡಬೇಕು ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮಾದಕ ವಸ್ತುಗಳ ವ್ಯಸನವು ಅವರ ದೇಹದ ಎಲ್ಲ ಅಂಗಾಂಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಮುಖ್ಯವಾಗಿ ಅವರ ಕುಟುಂಬ ತುಂಬಾ ಕಷ್ಟಕ್ಕೀಡಾಗುತ್ತದೆ. ಒಂದಲ್ಲ ಒಂದು ಮಾದಕವಸ್ತುವಿನ ಬಳಕೆಯ ಪರಿಣಾಮದಿಂದಲೇ ಅಪರಾಧಗಳು ನಡೆಯುತ್ತಿವೆ. ಒಳ್ಳೆಯವರ ಮೌನ ಒಳ್ಳೆಯದಲ್ಲ. ಮಾದಕ ವಸ್ತು ಅಕ್ರಮ ಸಾಗಾಣಿಕೆ, ಬಳಕೆ ನೋಡಿಯೂ ಸುಮ್ಮನೆ ಇರಬಾರದು. ನಮ್ಮೆಲ್ಲರ ಜವಾಬ್ದಾರಿ ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದ ಅವರು ಎಲ್ಲ ಜನ ಮುಖ್ಯವಾಗಿ ಯುವಜನತೆ ದೈಹಿಕ ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ಪ್ರತಿದಿನ ಕನಿಷ್ಠ 1 ಗಂಟೆ ಕಾಲ ಮಾನಸಿಕ, ದೈಹಿಕ ಚಟುವಟಿಕೆಗೆ ಮೀಸಲಿಡಬೇಕು ಎಂದು ತಿಳಿಸಿದರು.

ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಬಕಾರಿ ಡಿಸಿ ಸುನೀತಾ, ಎಎಸ್‌ಪಿ ಕಾರ್ಯಪ್ಪ, ಸಹಾಯಕ ಡ್ರಗ್ ಕಂಟೋಲರ್ ವಿಶಾಲಾಕ್ಷಿ, ಅಧಿಕಾರಿ, ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ
ಸನಾತನ ಪರೀಕ್ಷೆಗೊಳಗಾದ್ರೂ ಅಳಿಸಲಸಾಧ್ಯ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್