ಕಳಪೆ ಮೆಣಸಿನಕಾಯಿ ಬೀಜದಿಂದ ಮೋಸ ಹೋದ ರೈತರ ನೆರವಾಗಿ: ಡಾ. ರಂಗಸ್ವಾಮಿ

KannadaprabhaNewsNetwork | Published : May 7, 2025 12:47 AM
Follow Us

ಸಾರಾಂಶ

ಜಿಲ್ಲೆಯಲ್ಲಿ ಬೀಜ ಮತ್ತು ಗೊಬ್ಬರ ಮಾರಾಟ ದಾಸ್ತಾನು ಕಂಪನಿಗಳು ಮತ್ತು ಮಾರಾಟ ಮಾಡುತ್ತಿರುವ ವೈರೈಟಿ ಇತ್ಯಾದಿಗಳ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಜಿಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಸೂಚಿಸಿದರು.

ಬ್ಯಾಡಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಿಎಸ್‌ಎಸ್ ಕಂಪನಿಯ ಮೆಣಸಿನಕಾಯಿ ಬೀಜಗಳಿಂದ ಮೋಸ ಹೋದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಮಟ್ಟದಲ್ಲಿ ಚರ್ಚೆಯಾಗಿದೆ. ಕೂಡಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ವಹಿಸುವಂತೆ ಜಿಪಂ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಖಡಕ ಸೂಚನೆ ನೀಡಿದರು.

ತಾಪಂ ಸಭಾಭವನದಲ್ಲಿ ಸೋಮವಾರ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಿರೇಹಳ್ಳಿ, ಬಡಮಲ್ಲಿ ಸೇರಿದಂತೆ ಇನ್ನಿತರ ಕಡೆ ರೈತರನ್ನು ದಾರಿ ತಪ್ಪಿಸುವ ಅಥವಾ ಮೋಸಗೊಳಿಸುವ ಕೆಲಸ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದೇಶಕ್ಕೆ ಅನ್ನ ನೀಡುವ ರೈತ ಕೋರ್ಟ ಕಚೇರಿಗಳಲ್ಲಿ ಅಲೆದಾಡಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಪುನಃ ಇಂತಹ ಘಟನೆ ಮರುಕಳಿಸದಂತೆ ಬೀಜ ಮತ್ತು ಗೊಬ್ಬರ ಮಾರಾಟ ದಾಸ್ತಾನು ಕಂಪನಿಗಳು ಮತ್ತು ಮಾರಾಟ ಮಾಡುತ್ತಿರುವ ವೈರೈಟಿ ಇತ್ಯಾದಿಗಳ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಫಲಿತಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಿ: ಸರ್ಕಾರದ ಎಲ್ಲ ವಸತಿನಿಲಯಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದ್ದು, ನಿಲಯದ ಮೇಲ್ವಿಚಾರಕರು, ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು. ಎಲ್ಲ ನಿಲಯಗಳಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯಬೇಕು. ನಿರ್ಲಕ್ಷಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೊಣೆ ಹೊರಬೇಕಿದೆ ಎಂದರು.

ಬಾಲಕಾರ್ಮಿಕರ ಗುರುತಿಸುವಲ್ಲಿ ವಿಫಲ: ತಾಲೂಕಿನ ವಿವಿಧ ಕೈಗಾರಿಕೆ, ಆಹಾರ ತಯಾರಿಕೆ, ಸಣ್ಣ ಪುಟ್ಟ ಯುನಿಟ್ ಘಟಕಗಳು ಸೇರಿದಂತೆ ವಿವಿಧೆಡೆಗಳಲ್ಲಿ ಬಾಲಕಾರ್ಮಿಕರು ಕೆಲಸ ನಿರ್ವಹಿಸುವ ಕುರಿತು ಸಾಕಷ್ಟು ದೂರುಗಳಿದ್ದು, ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ಪರಿಶೀಲನೆ ನಡೆಸಿದ ಬಗ್ಗೆ ದಾಖಲೆ ಕೊಡಿ ಎಂದು ಕಾರ್ಮಿಕ ನಿರೀಕ್ಷಕರಿಗೆ ತಿಳಿಸಿದರು.

ಕಳೆದ 2020ರಿಂದ 2025ರ ವರೆಗೂ 9 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಮಕ್ಕಳಿಗೆ ಸ್ಕಾಲರಶಿಪ್ ಅರ್ಜಿ ಸಲ್ಲಿಕೆಯಾಗಿದ್ದು, ಏಕೆ ಬಾಕಿ ಉಳಿದುಕೊಂಡಿವೆ. ಬಹುತೇಕ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳು ಲಭ್ಯವಾಗುತ್ತಿಲ್ಲವೆಂಬ ಕಾರ್ಮಿಕರ ದೂರಿದೆ. ತುರ್ತು ಅನಾರೋಗ್ಯದಿಂದ ಬಳಲುವರಿಗೆ ಅನುದಾನ ಸಿಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿರಿ? ಹೀಗಾದರೆ ಸರ್ಕಾರದ ಯೋಜನೆ ಜನರಿಗೆ ತಲುಪುವುದು ಹೇಗೆ ಎಂದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರಪಟ್ಟರು.

ಸಭೆಗೆ ಕಾರ್ಮಿಕ ಅಧಿಕಾರಿ ಗೈರು ಹಾಜರಾಗಿದ್ದು, ಬದಲಾಗಿ ಕಂಪ್ಯೂಟರ್ ಆಪರೇಟರ್ ಕಳುಹಿಸಿದ್ದರು. ಪ್ರತಿ ಬಾರಿಯೂ ಕಾರ್ಮಿಕ ಇಲಾಖೆ ಮಾಹಿತಿ, ಪ್ರಗತಿ, ಯೋಜನೆ ಸಭೆಗೆ ದಾಖಲೆ ಲಭ್ಯವಾಗುತ್ತಿಲ್ಲವೆಂದು ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಎರಡು ದಿನಗಳಲ್ಲಿ ಮಾಹಿತಿ ಪೂರೈಸುವಂತೆ ಸೂಚಿಸಿದರು.

ಈ ವೇಳೆ ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಕೆ.ಎಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ, ನರೇಗಾ ಸಂಯೋಜಕ ಪರಶುರಾಮ ಅಗಸನಹಳ್ಳಿ ಇತರರಿದ್ದರು.