ಬಡ ಮಕ್ಕಳ ಕಲಿಕೆಗೆ ಸಹಕಾರ ನೀಡುವುದು ಪುಣ್ಯದ ಕೆಲಸ: ಡಾ. ಎಂ.ಡಿ. ಕಮ್ಮಾರ

KannadaprabhaNewsNetwork | Updated : Jun 20 2024, 01:08 AM IST

ಸಾರಾಂಶ

ಏಕ ಪೋಷಕ, ಪೋಷಕರಿಲ್ಲದೆ ಬಡತನದಲ್ಲಿ ಶಿಕ್ಷಣದಿಂದ ವಂಚಿತರಾಗುವ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಕಾರ ನೀಡುವುದು ಅತ್ಯಂತ ಪುಣ್ಯದ ಕೆಲಸ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಎಂ.ಡಿ. ಕಮ್ಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಏಕ ಪೋಷಕ, ಪೋಷಕರಿಲ್ಲದೆ ಬಡತನದಲ್ಲಿ ಶಿಕ್ಷಣದಿಂದ ವಂಚಿತರಾಗುವ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಕಾರ ನೀಡುವುದು ಅತ್ಯಂತ ಪುಣ್ಯದ ಕೆಲಸ ಎಂದು ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಎಂ.ಡಿ. ಕಮ್ಮಾರ ತಿಳಿಸಿದರು.

ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್ಲ ತಾಲೂಕಿನ ಇನಾಂನೀರಲಗಿ ಗ್ರಾಮದ ವಿದ್ಯಾರ್ಥಿನಿ ಲಾವಣ್ಯ ಪಾಟೀಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೯೪ ಅಂಕ ಗಳಿಸುವ ಮೂಲಕ ಸಾಧನೆ ಮಾಡಿರುವುದಕ್ಕೆ ಪ್ರೋತ್ಸಾಹಿಸಿ ಸನ್ಮಾನಿಸಿದ ಸಂದರ್ಭ ಹಾಗೂ ತಾಲೂಕಿನ ಏಕ ಪೋಷಕ, ಪೋಷಕರಿಲ್ಲದ ೨೦ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಇಂತಹ ಮಕ್ಕಳ ಕಲಿಕೆಗೆ ಬೇಕಾಗುವ ಕಲಿಕೆಯ ವೆಚ್ಚವನ್ನು ಭರಿಸುತ್ತಿರುವುದು ನಿಜಕ್ಕೂ ಅತ್ಯುತ್ತಮ ಕಾರ್ಯ. ಪ್ರಸ್ತುತ ವರ್ಷ ೧ ಪ್ಯಾರಾ ಮಡಿಕಲ್, ೪ ಬಿಎ, ೪ ಪದವಿಪೂರ್ವ ಶಿಕ್ಷಣ, ೩ ಎಸ್‌ಎಸ್‌ಎಲ್‌ಸಿ, ೮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಓದುವ ಮಕ್ಕಳಿಗೆ ಇಂತಹ ಸೌಲಭ್ಯವನ್ನು ಈ ವರ್ಷ ರೋಶನಿ ನೀಡುತ್ತಿದೆ ಎಂದರು.

ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಇಂತಹ ಹತ್ತು ಹಲವು ಸಾಮಾಜಿಕ ಕಾರ್ಯದಲ್ಲಿ ರೋಶನಿ ಕೆಲಸ ಮಾಡುತ್ತಿದೆ. ಮಕ್ಕಳು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಸಹಕಾರಿಯಾಗುವ ಉದ್ದೇಶ ನಮ್ಮದು. ಪ್ರತಿಭಾವಂತ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳಿಲ್ಲದೆ ತೊಂದರೆ ಅನುಭವಿಸುವ ಸಂದರ್ಭಗಳಿವೆ. ಅಂತಹ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸೇವೆ ಸಲ್ಲಿಸುವುದು ನಮ್ಮ ಧ್ಯೇಯ. ಮಕ್ಕಳು ಕೂಡ ರೋಶನಿ ನೀಡಿದ ಸಾಮಗ್ರಿಗಳು ಹಾಗೂ ಇತರ ಸಹಾಯವನ್ನು ಸದುಪಯೋಗ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದರು.

ರೋಶನಿ ಸಂಸ್ಥೆಯ ಜಾನೆಟ್ ಪಿಂಟೋ, ಸಿಸ್ಟರ್ ಶಾಂತಿಡಿಸೋಜಾ, ಜನವೇದಿಕೆ ಮುಖಂಡ ಕಲೀಂ ಮಾಸನಕಟ್ಟಿ, ಕ್ಲೇಟಾ, ನಿರ್ಮಲಾ ಮಡಿವಾಳರ, ವೈ.ಕೆ. ಗೌರಮ್ಮ ಇದ್ದರು.

Share this article