ಕನ್ನಡಿಗರಿಗಾಗಿ ಸಹಾಯವಾಣಿ ಶುರು: ಸಿಎಂ ಸೂಚನೆ

KannadaprabhaNewsNetwork |  
Published : Mar 02, 2026, 02:15 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

‘ದುಬೈ ಸೇರಿ ವಿವಿಧ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಈ ಸಂಬಂಧ ನಾಳೆಯೇ(ಸೋಮವಾರ) ಸಹಾಯವಾಣಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ದುಬೈ ಸೇರಿ ವಿವಿಧ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಈ ಸಂಬಂಧ ನಾಳೆಯೇ(ಸೋಮವಾರ) ಸಹಾಯವಾಣಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು, ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಮಾತನಾಡಿ, ಧೈರ್ಯ ತುಂಬಿದ್ದೇನೆ. ಪ್ರತಿಯೊಬ್ಬರನ್ನೂ ರಕ್ಷಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.

ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಜಿ ಸಚಿವರಾದ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಅವರ ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಈ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕನ್ನಡಿಗರ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಪಡೆದ್ದೇನೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವುದು ತುಸು ಸಮಾಧಾನಕರ ವಿಚಾರ. ಯಾರೊಬ್ಬರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.ಶಾಸಕರೂ ಸೇರಿ ಎಲ್ಲ ರಕ್ಷಣೆಗೆ ಕ್ರಮ:

ದುಬೈನಲ್ಲಿರುವ ನಮ್ಮ ಶಾಸಕರಾದ ಎ.ಸಿ.ಶ್ರೀನಿವಾಸ್, ನಾರಾ ಭರತ್ ರೆಡ್ಡಿ ಅವರ ಕುಟುಂಬ, ಪರಿಷತ್‌ ಸದಸ್ಯ ಭೋಜೇಗೌಡ ಅವರು ಸೇರಿ ಹಲವು ಕನ್ನಡಿಗರು ಕೊಲ್ಲಿ ದೇಶಗಳಲ್ಲಿ ಸಿಲುಕಿದ್ದಾರೆ. ಎಲ್ಲರನ್ನೂ ಕರೆತರಬೇಕಿದ್ದು, ಇದಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಕನ್ನಡಿಗರು, ದಕ್ಷಿಣ ಭಾರತೀಯರೂ ಸೇರಿ ಹಲವು ಭಾರತೀಯರು ಸಿಲುಕಿದ್ದಾರೆ. ಎಲ್ಲರಿಗೂ ಧೈರ್ಯ ತುಂಬುವ ಕೆಲಸ ನಾವು ಮಾಡುತ್ತೇವೆ. ಈ ಸಂಬಂಧ ದೆಹಲಿ ನಿವಾಸಿ ಆಯುಕ್ತರೊಂದಿಗೂ ಮುಖ್ಯಮಂತ್ರಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದರು. ಯುದ್ಧ ಸರಿಯಲ್ಲ. ವೈಮಾನಿಕ ದಾಳಿಯಲ್ಲಿ ಏನೂ ಮಾಡದ 70 ಮಂದಿ ಶಾಲಾ ಮಕ್ಕಳು ಸತ್ತಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.ಕನ್ನಡಿಗರ ನೆರವಿಗಾಗಿ ಸಹಾಯವಾಣಿ ಶುರು:

ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಸರ್ಕಾರದ ಸೂಚನೆಯಂತೆ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರ(ಎಸ್‌ಇಒಸಿ) ಮತ್ತು ಎಲ್ಲಾ ಜಿಲ್ಲೆಗಳ ತುರ್ತು ಕಾರ್ಯಾಚರಣಾ ಕೇಂದ್ರಗಳು (ಡಿಇಒಸಿ) ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಆರಂಭಿಸಲಾಗಿದೆ.ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇರಾನ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಬಂದ್‌ ಮಾಡಿವೆ. ಪರಿಣಾಮ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ಇದರಿಂದ ಕರ್ನಾಟಕ ಸೇರಿ ನಮ್ಮ ದೇಶದ ವಿವಿಧ ರಾಜ್ಯಗಳ ಸಾಕಷ್ಟು ಸಂಖ್ಯೆ ಪ್ರಯಾಣಿಕರು ಮಧ್ಯಪ್ರಾಚ್ಯ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಯುಎಇ (ದುಬೈ) ನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ನೆರವಿಗಾಗಿ ಈ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯಾರಂಭಿಸಿವೆ ಎಂದು ತಿಳಿಸಿದ್ದಾರೆ.ಅಗತ್ಯ ನೆರವಿಗೆ ಕ್ರಮ: ಸಾರ್ವಜನಿಕರಿಂದ ಬರುವ ಕರೆ, ಮಾಹಿತಿ ಆಧರಿಸಿ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿಯನ್ನು ವಿದೇಶಾಂಗ ಸಚಿವಾಲಯ ಮತ್ತು ದೆಹಲಿ ಕರ್ನಾಟಕ ಭವನದ ಆಯುಕ್ತರ ನೇತೃತ್ವದ ತಂಡಕ್ಕೆ ರವಾನಿಸಿ ಅವರ ರಕ್ಷಣೆ ಹಾಗೂ ವಾಪಸ್‌ ಕರೆತರಲು ಅಗತ್ಯ ನೆರವಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ, ದುಬೈ ಸೇರಿ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ನಮ್ಮ ರಾಜ್ಯದ ನಾಗರಿಕರಿಗೆ ನೆರವಾಗಲು ರಾಜ್ಯ ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಸೂಚಿಸಿದ್ದು ಅದರಂತೆ ಅವು ಕಾರ್ಯಾರಂಭಿಸಿವೆ. ಈ ಕೇಂದ್ರಗಳಲ್ಲಿ ರಾಯಭಾರ ಕಚೇರಿಗಳ ಸಹಾಯವಾಣಿ ಸಂಖ್ಯೆಗಳು ಮತ್ತು ಸಲಹೆಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಜೊತೆಗೆ ಎಕ್ಸ್‌, ವಾಟ್ಸ್‌ಅಪ್‌ ಸೇರಿ ಇತರೆ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಲಾಗಿದೆ.ರಾಯಭಾರ ಕಚೇರಿ ಜತೆ ಸಂಪರ್ಕ: ಪರಿಸ್ಥಿತಿ ಮೇಲ್ವಿಚಾರಣೆ ಮೂಲಕ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಅವರಿಂದ ಬರುವ ನಿರ್ದೇಶನ, ಸೂಚನೆಗಳ ಅನುಸಾರ ಸಂಕಷ್ಟದಲ್ಲಿರುವವರ ನೆರವಿಗೆ ಈ ಕೇಂದ್ರಗಳ ಸಿಬ್ಬಂದಿ ಕ್ರಮ ವಹಿಸಲಿದ್ದಾರೆ. ಜೊತೆಗೆ ದೆಹಲಿಯ ಕರ್ನಾಟಕ ಭವನದ ಆಯುಕ್ತರು ನೇತೃತ್ವದ ತಂಡವನ್ನು ಕೂಡ ಸಮನ್ವಯಕ್ಕಾಗಿ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.ಇನ್ನು, ಮಧ್ಯಪ್ರಾಚ್ಯ ದೇಶಗಳಲ್ಲಿ ವಾಸಿಸುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರಗಳು ನೀಡುವ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವರ ಸಹಾಯವಾಣಿ ಸಂಖ್ಯೆಗಳ ಮೂಲಕ ಆಯಾ ಭಾರತೀಯ ರಾಯಭಾರ ಕಚೇರಿಗಳನ್ನು ಸಂಪರ್ಕಿಸಲು ಮತ್ತು ಸಾರಥಿ ಸಹಾಯ ಪೋರ್ಟಲ್ ಮತ್ತು ಸಂಬಂಧಪಟ್ಟ ದೂತಾವಾಸಗಳ ಇತರ ಅಧಿಕೃತ ಪೋರ್ಟಲ್‌ಗಳಲ್ಲಿ ತಮ್ಮ ಮಾಹಿತಿ ನೋಂದಾಯಿಸುವಂತೆ ಸೂಚಿಸಲಾಗಿದೆ.-------ಬಾಕ್ಸ್‌-ಸಹಾಯವಾಣಿ ಸಂಖ್ಯೆಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದ ಸಹಾಯವಾಣಿ- 080-22340676, 080-22253707 (ಶಾರ್ಟ್‌ ಕೋಡ್‌ 1070).ದುಬೈ ಕನ್ನಡಿಗರೊಂದಿಗೆ ಫೋನಲ್ಲಿ ಸಿಎಂ ಮಾತು:

ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಶಾಸಕ ಶ್ರೀನಿವಾಸ್ ಮದುವೆಗೆ ತೆರಳಿದ್ದ ಸಮಯದಲ್ಲಿ ಊಟದ ಹಾಲ್‌ನಲ್ಲಿ ಕುಳಿತು ದುಬೈನಲ್ಲಿ ಸಿಲುಕಿದ ಕನ್ನಡಿಗರೊಂದಿಗೆ ವಿಡಿಯೋ ಕಾಲ್‌ ಮುಖಾಂತರ ಮಾತನಾಡಿದರು. ಈ ವೇಳೆ ಎಲ್ಲರೂ ಚೆನ್ನಾಗಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ಕನ್ನಡಿಗರನ್ನು ವಿಚಾರಿಸಿದರು. ಬಳಿಕ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ ಎಂದು ಅವರಿಗೆ ಧೈರ್ಯ ಹೇಳಿದರು.ದುಬೈನಲ್ಲಿನ ಕನ್ನಡಿಗರ ರಕ್ಷಣೆ ಆದ್ಯತೆ:ಇರಾನ್-ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸದ್ಯ ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ನಾನು ದೆಹಲಿಗೆ ಹೋಗುತ್ತಿದ್ದು, ಸಂಬಂಧಿಸಿದ ಮಂತ್ರಾಲಯ, ಮಂತ್ರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ. ಕನ್ನಡಿಗರು ಯಾರು ಸಿಕ್ಕಿ ಹಾಕಿಕೊಂಡಿದ್ದಾರೆ, ಅವರನ್ನು ವಾಪಸ್ ಕರೆತರುವ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡುತ್ತೇವೆ ಎಂದರು. ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರು ಸಹ ಅಲ್ಲಿ ಸಿಲುಕಿದ್ದಾರೆ. ಅವರು ನಮ್ಮ ಸ್ನೇಹಿತರು. ಅವರ ಜೊತೆ, ಅಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆ ತರುವುದು ನಮ್ಮ ಪ್ರಥಮ ಆದ್ಯತೆ. ಆದಷ್ಟು ಬೇಗ ಅಲ್ಲಿರುವವರು ಸುರಕ್ಷಿತವಾಗಿ ನಮ್ಮ ತಾಯ್ನಾಡಿಗೆ ಬರಬೇಕು ಎಂಬುದು ನಮ್ಮ ಆಶಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ಅವಲಂಬಿತ ಸಮುದಾಯಗಳ ಬಲವರ್ಧನೆಗೆ ಯೋಜನೆ: ನಾಗೇಶ
ಖಾಸಗಿ ಶಾಲಾ ಮಾನ್ಯತೆ ಮಾನದಂಡ ಇನ್ನಷ್ಟು ಸರಳ!