ಇಲ್ಲಿರುವ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಧಾರವಾಡ: ಇಲ್ಲಿರುವ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ದಾವಣಗೆರೆಗೆ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡರಾದ ಶ್ರೀಶೈಲ ಕಮತರ ಹಾಗೂ ವೀರಯ್ಯ ಚಿಕ್ಕಮಠ, ರಾಜ್ಯ ಸರ್ಕಾರದ ಆದೇಶದಂತೆ ಕಚೇರಿಯನ್ನು ಅಧಿಕಾರಿಗಳು ಸ್ಥಳಾಂತರಿಸುವ ಪ್ರಕ್ರಿಯೆ ಶುರು ಮಾಡಿದ್ದಾರೆ. ಆದರೆ, ಈ ಬಗ್ಗೆ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಕಚೇರಿ ಸ್ಥಳಾಂತರ ಆಗದಂತೆ ಪ್ರಯತ್ನಿಸುತ್ತೇವೆ. ಅಲ್ಲಿಯ ವರೆಗೆ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳುವುದು ಬೇಡ ಎಂದು ಆಗ್ರಹಿಸಿದರು.
ಕಚೇರಿ ಸ್ಥಳಾಂತರ ಆಗದಂತೆ ನೋಡಿಕೊಳ್ಳಲು ಕಳೆದ ನಾಲ್ಕೈದು ದಿನಗಳಿಂದ ಕಚೇರಿ ಕೆಳಗಡೆ ರೈತರು ಅಹೋರಾತ್ರಿ ಹೋರಾಟ ಮಾಡುತ್ತಿದ್ದು, ಸ್ಥಳೀಯ ರಾಜಕಾರಣಿಗಳು ಕಿಂಚಿತ್ ಬೆಂಬಲ ಸೂಚಿಸಿಲ್ಲ. ಸುಮಾರು ನಾಲ್ಕು ದಶಕಗಳಿಂದ ಇಲ್ಲಿದ್ದ ರೈತರಿಗೆ ಅನುಕೂಲಕರ ಭೂಸ್ವಾಧೀನ ಕಚೇರಿಯನ್ನು ದೂರದ ಊರಿಗೆ ಸ್ಥಳಾಂತರ ಮಾಡುವುದು ಯಾವ ನ್ಯಾಯ? ಇದರಿಂದ ರೈತರಿಗೆ ತುಂಬಾ ಅನ್ಯಾಯ ಆಗಲಿದೆ. ಕೂಡಲೇ ಸರ್ಕಾರ ಈ ಕ್ರಮವನ್ನು ಕೈ ಬಿಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.
ಮುಖಂಡರಾದ ವಿಠ್ಠಲ ಪೀರಗಾರ, ನೇತಾಜಿ ಪಾಟೀಲ, ಗಂಗಪ್ಪ ಗಾಯಕವಾಡ, ಮಡಿವಾಳಪ್ಪ ಏಣಗಿ, ಬಸವರಾಜ ಚಳಗೇರಿ, ವಿಜಯ ಮಾದರ, ಪುಂಡಲೀಕಪ್ಪ ದೊಡ್ಡಮನಿ, ಶ್ರೀಕಾಂತ್ ಕ್ಯಾತಪ್ಪನವರ, ಹನುಮಂತಪ್ಪ ಬೋಗೂರ ಇದ್ದರು. ಸ್ಥಳಾಂತರಕ್ಕೆ ತಾತ್ಕಾಲಿಕ ತಡೆ
ಧಾರವಾಡದಲ್ಲಿರುವ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರ ಪ್ರಕ್ರಿಯೆಗೆ ಎರಡು ದಿನಗಳ ಕಾಲ ತಡೆ ನೀಡಿದ್ದಾರೆ. ಈ ಸಮಯದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಈ ಕಚೇರಿಯನ್ನು ಶಾಶ್ವತವಾಗಿ ಧಾರವಾಡದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೋರಾಟಗಾರ ಶ್ರೀಶೈಲ ಕಮತರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.