ಬಳ್ಳಾರಿ: ದುಬೈ ವೀಕ್ಷಿಸಲು ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ 32 ಪ್ರವಾಸಿಗರು ಇರಾನ್ ಮೇಲೆ ಅಮೆರಿಕ ಸಾರಿದ ಯುದ್ಧದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಯುದ್ಧ ನಡೆಯುತ್ತಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪ್ರವಾಸದಲ್ಲಿದ್ದ ಮಹಿಳೆಯರು ಅಳಲು ಶುರು ಮಾಡಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರವಾಸಿಗರನ್ನು ಸಂತೈಸಿದ್ದಾರಲ್ಲದೆ, ಭಾರತೀಯರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸುರಕ್ಷಿತವಾಗಿ ನೀವು ಭಾರತಕ್ಕೆ ತಲುಪುತ್ತೀರಿ ಎಂದು ವಿಶ್ವಾಸ ಮೂಡಿಸಿದ್ದಾರೆ.
ಕೆಲವರು ತಮ್ಮ ಕುಟುಂಬ ಸದಸ್ಯರ ಜತೆ ಮಾತನಾಡಿ, ನಾವು ಬಳ್ಳಾರಿಗೆ ವಾಪಸ್ ಬರುತ್ತಿದ್ದೇವೆ ಎಂಬ ಕಾರಣಕ್ಕಾಗಿ ಎಲ್ಲ ಹಣವನ್ನು ಖರ್ಚು ಮಾಡಿಕೊಂಡಿದ್ದೇವೆ. ಇನ್ನು ಇಲ್ಲಿ ಎಷ್ಟು ದಿನ ಉಳಿಯಬೇಕೋ ಗೊತ್ತಿಲ್ಲ. ನಮ್ಮ ಬಳಿ ಹಣವೂ ಇಲ್ಲ. ಅಮೆರಿಕ ಯುದ್ಧ ಶುರು ಮಾಡಿರುವುದರಿಂದ ಹೊಟೇಲ್ ಹಾಗೂ ಲಾಡ್ಜ್‌ಗಳ ದುಬಾರಿಯಾಗಿದ್ದು, ಮುಂದೇನು ಮಾಡಬೇಕು ಎಂಬುದು ತೋಚದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಭರತರೆಡ್ಡಿ, ನಾಗೇಂದ್ರ ಮಾತು:
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಪ್ರವಾಸಿಗರನ್ನು ಸಂಪರ್ಕಿಸಿ, ಏರ್ ಸ್ಟ್ರೈಕ್ ಆರಂಭವಾಗಿದೆ. ಎಲ್ಲ ವಿಮಾನಗಳು ನಿಲುಗಡೆಯಾಗಿವೆ. ಹೀಗಾಗಿ, ಮಾ. 2ರ ವರೆಗೆ ಯಾವುದೇ ವಿಮಾನ ಹಾರಾಟವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದುಬೈ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.ಈ ಪ್ರವಾಸಿಗರನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಪ್ರವಾಸಕ್ಕೆ ತೆರಳಿರುವವರ ಕುಟುಂಬ ಸದಸ್ಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬಳ್ಳಾರಿಯ ಎಲ್ಲರೂ ಸುರಕ್ಷಿತವಾಗಿ ಬಳ್ಳಾರಿಗೆ ಮರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ''''''''ಕನ್ನಡಪ್ರಭ''''''''ಕ್ಕೆ ತಿಳಿಸಿದರಲ್ಲದೆ, ಹೆಲ್ಪ್‌ಲೈನ್ ಸಂಖ್ಯೆ 08392–277100 ಗೆ ಸಂಪರ್ಕಿಸಬಹುದು ಎಂದು ಹೇಳಿದರು.
ಫೆ. ೨೫ರಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಪತ್ನಿ, ಮೂರು ವರ್ಷದ ಪುತ್ರಿ ಸೇರಿದಂತೆ ಕುಟುಂಬದ ಐವರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಫೆ. ೨೮ರಂದು ವಾಪಸ್ ಆಗುವಷ್ಟರಲ್ಲಿ ಯುದ್ಧದ ಕಾರ್ಮೋಡದಿಂದಾಗಿ ಕುಟುಂಬದ ಜತೆ ದುಬೈನಲ್ಲಿ ಉಳಿದುಕೊಂಡಿದ್ದಾರೆ.
ಪ್ರವಾಸಕ್ಕೆ ಹೋಗಿದ್ದ ಬಳ್ಳಾರಿಯ 32 ಜನರು ದುಬೈನಲ್ಲಿ ಸಿಲುಕಿಕೊಂಡಿದ್ದು, ಎಲ್ಲರೂ ಸುರಕ್ಷಿತವಾಗಿ ಬರಲಿದ್ದಾರೆ. ಶಾಸಕ ಭರತ್ ರೆಡ್ಡಿ ಸೇರಿ ಎಲ್ಲ ಪ್ರವಾಸಿಗರನ್ನು ಸಂಪರ್ಕಿಸಲಾಗಿದೆ. ಸಂಸದ ತುಕಾರಾಂ ಸಹ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಎರಡು ದಿನದಲ್ಲಿ ವಾಪಸ್ ಆಗುವ ಸಾಧ್ಯತೆಗಳಿವೆ. ದೆಹಲಿ ರಾಯಭಾರಿ ಕಚೇರಿಯಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪ್ರವಾಸಿಗರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್.