ಕೊಲ್ಲಿ ಯುದ್ಧ: ಸಂಕಷ್ಟದಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು

KannadaprabhaNewsNetwork |  
Published : Mar 02, 2026, 02:15 AM ISTUpdated : Mar 02, 2026, 11:04 AM IST
war

ಸಾರಾಂಶ

ಯುದ್ಧಪೀಡಿತ ಇರಾನ್‌ ಮತ್ತು ಇಸ್ರೇಲ್‌ ರಾಷ್ಟ್ರಗಳ ವಿವಿಧೆಡೆ ನೂರಾರು ಕನ್ನಡಿಗರು ತವರಿಗೆ ವಾಪಸಾಗಲು ವಿಮಾನಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಆದಷ್ಟು ಶೀಘ್ರ ಅವರು ತವರಿಗೆ ಮರಳಲು ಕ್ರಮ ವಹಿಸುವಂತೆ ಸಂಕಷ್ಟದಲ್ಲಿರುವವರ ಕುಟುಂಬದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

 ಬೆಂಗಳೂರು :  ಯುದ್ಧಪೀಡಿತ ಇರಾನ್‌ ಮತ್ತು ಇಸ್ರೇಲ್‌ ರಾಷ್ಟ್ರಗಳ ವಿವಿಧೆಡೆ ನೂರಾರು ಕನ್ನಡಿಗರು ತವರಿಗೆ ವಾಪಸಾಗಲು ವಿಮಾನಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಆದಷ್ಟು ಶೀಘ್ರ ಅವರು ತವರಿಗೆ ಮರಳಲು ಕ್ರಮ ವಹಿಸುವಂತೆ ಸಂಕಷ್ಟದಲ್ಲಿರುವವರ ಕುಟುಂಬದವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಈ ಮಧ್ಯೆ ಬಳ್ಳಾರಿ ಶಾಸಕ ನಾ.ರಾ.ಭರತ್‌ ರೆಡ್ಡಿ, ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ, ಬಿಗ್‌ ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಮತ್ತಿತರು ಕೂಡ ವಿಮಾನಗಳ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ ಮೇಲೆ ಏರ್‌ಸ್ಟ್ರೈಕ್ ನಡೆಸುತ್ತಿವೆ. ಇದರಿಂದ ಅಲ್ಲಿನ ಟೆಹ್ರಾನ್‌, ಕುಮ್ಮು ನಗರಗಳಲ್ಲಿ ನೆಲೆಸಿದ್ದ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಜೀವಭಯಲ್ಲಿ ಸಿಲುಕಿದ್ದಾರೆ. ಇದರಲ್ಲಿ ಬಹಳಷ್ಟು ಮಂದಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರದವರು ಎನ್ನಲಾಗಿದೆ.

ಎಂಬಿಬಿಎಸ್‌ ಸೇರಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಇದರಲ್ಲಿದ್ದು, ಸದ್ಯ ಇರಾನ್‌ನಲ್ಲಿ ಇಂಟರ್‌ನೆಟ್‌ ಸೇವೆಯೂ ಸ್ಥಗಿತಗೊಂಡಿದೆ. ಇದರಿಂದ ಪೋಷಕರ ಸಂಪರ್ಕಕ್ಕೂ ಸಿಗದೆ ಭಯ, ಆತಂಕದ ಛಾಯೆ ಹೆಚ್ಚುವಂತೆ ಮಾಡಿದೆ. ಈ ಮಧ್ಯೆ ಶಾಸಕ ಭರತ್‌ ರೆಡ್ಡಿ, ಕರ್ನಾಟಕದಿಂದ ಪ್ರವಾಸಕ್ಕೆಂದು ಹೋಗಿದ್ದ 25 ಮಹಿಳೆಯರೂ ಸೇರಿ 52 ಕನ್ನಡಿಗರು ದುಬೈನಲ್ಲಿ ವಿಮಾನವಿಲ್ಲದೆ ಸಿಲುಕಿರುವುದಾಗಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಕರೆತರಲು ಕ್ರಮ ವಹಿಸುವಂತೆ ಮನವಿ

ಏರ್‌ ಸ್ಟ್ರೈಕ್‌ನಿಂದ ವಿಮಾನ ನಿಲ್ದಾಣಕ್ಕೂ ಪ್ರವೇಶ ನೀಡದ ಕಾರಣ ಎಲ್ಲರೂ ಹೋಟೆಲ್‌ನಲ್ಲಿ ಉಳಿದಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿ ಅವರನ್ನು ಕರೆತರಲು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ದುಬೈ ಮಾರ್ಗವಾಗಿ ಪ್ಯಾರಿಸ್‌ಗೆ ಹೊರಟಿದ್ದ ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ನಿವಾಸಿ ಗಿರೀಶ್‌ ಎಂಬುವವರು ಕೂಡ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಎಲ್ಲರೂ ಸುರಕ್ಷಿತ

ಇರಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾತನಾಡಿರುವ ಇಂಡೋ-ಇರಾನ್ ಚೇಂಬರ್ಸ್ ಆಫ್ ಕಾಮರ್ಸ್‌ನ ರಾಷ್ಟ್ರೀಯ ಅಧ್ಯಕ್ಷ ಹಕೀಮ್ ರಾಜಾ, ಇರಾನ್‌ನ ಟೆಹ್ರಾನ್‌, ಕುಮ್ಮು ಮತ್ತಿತರೆಡೆ ನಮ್ಮ ಕುಟುಂಬಸ್ಥರು, ಸಂಬಂಧಿಕರು ಇದ್ದಾರೆ. ಚಿಕ್ಕಬಳ್ಳಾಪುರದ ಅಲಿಪುರದ ಹಲವು ವಿದ್ಯಾರ್ಥಿಗಳೂ ಇದ್ದಾರೆ. ಮಧ್ಯಾಹ್ನದ ತನಕ ಅವರ ಜತೆ ಸಂಪರ್ಕದಲ್ಲಿದ್ದೆ. ಸದ್ಯಕ್ಕೆ ಎಲ್ಲರೂ ಸುರಕ್ಷಿತರಾಗಿರುವುದಾಗಿ ಹೇಳಿದ್ದರು. ನಂತರ ಇಂಟರ್‌ನೆಟ್‌ ಸೇವೆ ಸ್ಥಗಿತ ಆಗಿದ್ದು ಆತಂಕ ಮೂಡಿಸಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಇರಾನ್‌ನ ಭಾರತೀಯ ರಾಯಭಾರಿ ಕಚೇರಿ ಸಂಪರ್ಕ ಹಾಗೂ ಸಹಕಾರದೊಂದಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಎಲ್ಲ ಕನ್ನಡಿಗರನ್ನು ಕರೆತರಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.  

ಯುದ್ಧದ ಆತಂಕ ಇದೆ, ಆದರೂ ಜನಜೀವನ ಯಥಾಸ್ಥಿತಿ: ಪ್ರತಾಪ್‌

ಇನ್ನು, ಇರಾನ್‌ನ ಬುರ್ಜ್‌ ಖಲೀಫಾ ಸಮೀಪ ನಿಂತು ವಿಡಿಯೋ ಮಾಡಿರುವ ಪ್ರತಾಪ್‌ ಅಲ್ಲಿನ ಪರಿಸ್ಥಿತಿ ಸಾಮಾನ್ಯ ದಿನಗಳಂತೆಯೇ ಇದೆ. ಆದರೆ, ಯುದ್ಧದ ಕಾರ್ಮೋಡದ ಆತಂಕ ಜನರಲ್ಲಿದೆ. ರಸ್ತೆಗಳಲ್ಲಿ ವಾಹನ ಸಂಚಾರ, ಸಾರ್ವಜನಿಕರ ಒಡಾಟ ಎಲ್ಲವೂ ಯಥಾಸ್ಥಿತಿಯಲ್ಲಿದೆ. ಸದ್ಯಕ್ಕೆ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಒಂದೆರಡು ದಿನಗಳಲ್ಲಿ ವಿಮಾನ ಸಂಚಾರ ಪುನಾರಂಭಗೊಳ್ಳುವ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅನಗತ್ಯ ಗೊಂದಲ, ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ. ಅಂಥವರ ವಿರುದ್ಧ ಇರಾನ್‌ ಸರ್ಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. 

ದುಬೈ ಹೋಟೆಲಲ್ಲಿ ಬಳ್ಳಾರಿಯ 40 ಮಂದಿ:

ಬಳ್ಳಾರಿ ಜಿಲ್ಲೆಯಿಂದ ದುಬೈ ಪ್ರವಾಸಕ್ಕೆ ತೆರಳಿದ್ದ 40 ಮಂದಿ ವಾಪಸ್‌ ಬರಲು ವಿಮಾನಗಳ ಹಾರಾಟ ಸ್ಥಗಿತದಿಂದಾಗಿ ಸ್ಥಳೀಯ ಹೋಟೆಲ್‌ ಒಂದರಲ್ಲಿ ಸಿಲುಕಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರವಾಸಿಗರ ಗುಂಪಿನಲ್ಲಿರುವ ಸಹನಾ ಭಟ್‌ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಟ್ರಾವೆಲ್‌ ಏಜೆನ್ಸಿಯೊಂದರ ಮೂಲಕ ಪ್ರವಾಸಕ್ಕೆಂದು ನಾವು 40 ಜನ ದುಬೈಗೆ ಬಂದಿದ್ದೆವು. ಆದರೆ, ಯುದ್ಧದ ಹಿನ್ನೆಲೆಯಲ್ಲಿ ಬಹುತೇಕ ಪ್ರವಾಸಿಸ್ಥಳಗಳನ್ನು ಬಂದ್‌ ಮಾಡಲಾಗಿದೆ. ವಾಪಸ್‌ ಬರಲು ವಿಮಾನ ಹಾರಾಟವೂ ಸ್ಥಗಿತಗೊಂಡಿವೆ. ಹಾಗಾಗಿ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದೇವೆ. ಸೋಮವಾರ ವಿಮಾನಗಳ ಹಾರಾಟ ಮತ್ತೆ ಶುರುವಾಗಬಹುದು ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಇಲ್ಲಿನ ಸ್ಥಿತಿ ತಿಳಿಯಾಗಿದೆ. ಗಂಭೀರ ಸಮಸ್ಯೆ ಏನೂ ಇಲ್ಲ. ಬೆಳಗ್ಗೆ 7.30 ಮತ್ತು 11.30 ಸಮಯಕ್ಕೆ ನಾವಿರುವ ಜಾಗದಿಂದ ಎಲ್ಲೋ ದೂರದಲ್ಲಿ ಮಿಸೈಲ್‌ ದಾಳಿಯ ಶಬ್ಧ ಕೇಳಿಸಿತು. ಅದು ಬಿಟ್ಟರೆ ಬಸ್ಸು, ಟ್ಯಾಕ್ಸಿ, ಮೆಟ್ರೋ ಸಂಚಾರ ಸಾಮಾನ್ಯವಾಗಿದೆ. ಜನ ಜೀವನವೂ ಎಂದಿನಂತೆಯೇ ಇದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ನಮ್ಮಲ್ಲಿ ಭಯ ಇದ್ದೇ ಇದೆ. ಆದಷ್ಟು ಬೇಗ ವಿಮಾನ ಸಂಚಾರ ಆರಂಭಗೊಂಡರೆ ನಾವು ವಾಪಸ್‌ ಬರುತ್ತೇವೆ ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು