ಕನ್ನಡಪ್ರಭ ವಾರ್ತೆ ನಾಗಮಂಗಲ
ನಂತರ ರಾತ್ರಿ ನಡೆಯುವ ಸರ್ವಧರ್ಮ ಸಮ್ಮೇಳನ, ತಿರುಗಣಿ ಉತ್ಸವ, ತೆಪ್ಪೋತ್ಸವ ಹಾಗೂ ಮಾ.3ರ ಮುಂಜಾನೆ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಮಾ.2ರ ಸಂಜೆ 7ಗಂಟೆಗೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಹಾಗೂ ಗವಿಪುರದ ಗೋಸಾಯಿ ಮಠದ ಪೀಠಾಧ್ಯಕ್ಷ ಶ್ರೀಮಂಜುನಾಥ ಭಾರತಿ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ.ಹಿಂದೂ ಧರ್ಮ ಕುರಿತು ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭೂನಾಥ ಸ್ವಾಮೀಜಿ, ಜೈನ ಧರ್ಮ ಕುರಿತು ಹುಂಚ ಶ್ರೀಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಬೌದ್ಧ ಧರ್ಮ ಕುರಿತು ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿಯ ಭಿಕ್ಖು ನ್ಯಾನಂದರು, ಕ್ರೈಸ್ತ ಧರ್ಮ ಕುರಿತು ಚಿಕ್ಕಮಗಳೂರಿನ ಸಂತ ಅಂಡ್ರಸ್ ಚರ್ಚ್‌ನ ಸಭಾಪಾಲಕ ರೆವರೆಂಡ್ ಜಾರ್ಜ್ ವಿನೋದ್‌ಕುಮಾರ್ ಹಾಗೂ ಇಸ್ಲಾಂ ಧರ್ಮ ಕುರಿತು ಮಂಗಳೂರಿನ ರಾಜ್ಯ ಸುನ್ನೀ ಯುವಜನ ಸಂಘದ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಅವರು ಉಪನ್ಯಾಸ ನೀಡಲಿದ್ದಾರೆ. ನಾಡಿನ ಅನೇಕ ಮಠಾಧಿಪತಿಗಳು, ಎಲ್ಲಾ ಶಾಖಾ ಮಠಗಳ ಶ್ರೀಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು.
ಸರ್ವಧರ್ಮ ಸಮ್ಮೇಳನದ ನಂತರ ಶ್ರೀ ಕಾಲಭೈರವೇಶ್ವರ ಸ್ವಾಮಿ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ಹಾಗೂ ಇಡೀ ರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ.3ರ ಮುಂಜಾನೆ ಶ್ರೀಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀಯವರ ಅಡ್ಡಪಾಲಕಿ ಉತ್ಸವವು ಬಹಳ ವಿಜೃಂಭಣೆಯಿಂದ ಜರುಗಲಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಮಂದಿ ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಸಂಜೆ 6 ಗಂಟೆಗೆ ವಿವಿಧ ಗ್ರಾಮಗಳ ನೂರಾರು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣಿ ನಡೆಯಲಿದೆ. ಬಳಿಕ ಶ್ರೀ ಸೋಮೇಶ್ವರ ಸ್ವಾಮಿ ಉತ್ಸವ ಜರುಗಲಿದೆ.
ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ದೂರದ ಊರುಗಳಿಂದ ಭಕ್ತರನ್ನು ಕರೆತರಲು ಮಂಡ್ಯ ಕೆಎಸ್‌ಆರ್‌ಟಿಸಿ ಡಿಪೋ ವತಿಯಿಂದ 140ಕ್ಕೂ ಹೆಚ್ಚು ಜಾತ್ರೆ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.