ವಿಶೇಷ ವರದಿ
ಈ ಬಾರಿ ಕ್ಯಾಲೆಂಡರ್ ಪ್ರಕಾರ ಮಾ. 3ರಂದು ಹೋಳಿ ಹುಣ್ಣಿಮೆ. ಆದರೆ, ಅಂದು ವರ್ಷದ ಮೊದಲ ಚಂದ್ರಗ್ರಹಣ ನಿಮಿತ್ತ ಬಹುತೇಕ ಧಾರವಾಡ ಸುತ್ತಲಿನ ಪ್ರದೇಶದಲ್ಲಿ ಮುಂಚಿತವಾಗಿ ಮಾ. 2ರಂದೇ ಹಬ್ಬದ ಆಚರಣೆಗೆ ಸಿದ್ಧರಾಗಿದ್ದಾರೆ. ಕೆಲವು ಕಡೆಗಳಲ್ಲಿ ಮಾ. 3ರಂದು ಕಾಮಣ್ಣನ ಪೂಜೆ ಹಾಗೂ ಮರು ದಿನ ಬುಧವಾರ ಬಣ್ಣದಾಟ ಸಹ ಆಚರಣೆ ಆಗಲಿದೆ.
ಸುಪ್ರಸಿದ್ಧ ಭೂಸಪ್ಯಾಟಿ ಕಾಮಣ್ಣಧಾರವಾಡ ಭಾಗದಲ್ಲಿ ಯಾರಾದರೂ ಸ್ಫುರದ್ರೂಪಿ ವ್ಯಕ್ತಿ, ಮೀಸೆಹೊಂದಿ, ರುಮಾಲು ಸುತ್ತಿ, ಜುಬ್ಬಾ ಧರಿಸಿ, ಧೋತರ ಉಟ್ಟ ವ್ಯಕ್ತಿಯನ್ನು ಕಂಡರೆ, ‘ಭೂಸಪ್ಯಾಟಿ ಕಾಮಣ್ಣ ಆಗ್ಯಾನ, ಮಗಾ’ಎನ್ನುವ ರೂಢಿಯಿತ್ತು. ಅಷ್ಟು ಸುಪ್ರಸಿದ್ಧ ಧಾರವಾಡದ ಭೂಸಪೇಟೆ ಕಾಮಣ್ಣ.
ಈ ಬಾರಿ ಮಾ. 1ರ ಭಾನುವಾರವೇ ರತಿ-ಕಾಮಣ್ಣನ ಪ್ರತಿಷ್ಠಾಪನೆ ಆಗಿದ್ದು, ಮಾ. 3ರ ಬುಧವಾರ ವರೆಗೆ ಇಂತಹ ಅಪರೂಪದ ರತಿ-ಕಾಮರ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ.
ಮುಳಮುತ್ತಲ ಕಾಮಣ್ಣಭಕ್ತರ ಇಷ್ಟಾರ್ಥ ಸಿದ್ಧಿಸುವ ಕಾಮಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ಮುಳಮುತ್ತ ಕಾಮಣ್ಣನ ಹಬ್ಬ ಸೋಮವಾರ ಜರುಗಲಿದೆ. ಗ್ರಾಮದ ಬಡಿಗೇರ ಮನೆಯಿಂದ ಆಗಸಿಯ ಮಂಟಪದ ವರೆಗೆ ಕಾಮದೇವರ ಪ್ರತಿಮೆಯನ್ನು ಡೊಳ್ಳು, ಕರಡಿ ಮಜಲು, ಇತರ ಕಲಾಮೇಳಗಳ ಮೆರವಣಿಗೆಯೊಂದಿಗೆ ತಂದು ಊರಿನ ಅಗಸಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಕಾಮಣ್ಣನ ಪೂಜೆಗೆ ಸುತ್ತಲೂ ಹಳ್ಳಿಯ ಜನರು ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರ ವಾಹನಗಳ ಮೂಲಕ ಬಂದು ದರ್ಶನ ಪಡೆಯುವುದು ವಾಡಿಕೆ. ಅಣ್ಣಿಗೇರಿಯ ಕಾಮಣ್ಣನ ರುಂಡವನ್ನು ಮುಳಮುತ್ತಲ ಗ್ರಾಮದ ಯುವಕನೋರ್ವ ತಂದಿದ್ದು, ಈ ಕುರಿತು ರೋಚಕವಾದ ಕಥೆಯೇ ಇದೆ. ಇಂದಿಗೂ ಮುಳಮುತ್ತಲ ಗ್ರಾಮಸ್ಥರು ತಮ್ಮೂರಿನ ಕಾಮಣ್ಣನ ರುಂಡವನ್ನು ಯಾರಾದರೂ ಒಯ್ಯಲು ಬರುತ್ತಾರೆ ಎಂದು ಇಡೀ ರಾತ್ರಿ -ಬೆಳಗಿನ ವರೆಗೆ ಕಾಯುವುದು ವಿಶೇಷ. ಮಾ. 2ರ ಮಂಗಳವಾರ ಪೂಜೆ ನಡೆಯಲಿದ್ದು, ಬುಧವಾರ ಬಣ್ಣದಾಟ ಇರಲಿದೆ.
ಇವುಗಳಲ್ಲದೇ ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೀದಿ ಬೀದಿಗಳಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ನಂತರ ದಹನ ಮಾಡಲಾಗುತ್ತದೆ. ಇದಾದ ಬಳಿಕ ಬೆಳೆಗ್ಗೆಯಿಂದ ಸಂಜೆ ವರೆಗೂ ಬಣ್ಣದೋಕುಳಿ ಇರಲಿದೆ. ವಿಶೇಷವಾಗಿ ಮಕ್ಕಳು, ಯುವಕರಿಗೆ ಬಣ್ಣದ ಹಬ್ಬ ಎಂದರೆ ಅಚ್ಚು ಮೆಚ್ಚಾಗಿದೆ.ತೊಂದರೆಯಾಗದಂತೆ ಆಚರಿಸಿ
ಧಾರವಾಡವು ಸಂಗೀತ, ಸಾಹಿತ್ಯ, ಕಲೆ, ನಾಟಕ, ವಿಜ್ಞಾನ ಯಾವುದೇ ಕ್ಷೇತ್ರವಿದ್ದರೂ ತನ್ನದೇ ಆದ ವಿಶಿಷ್ಟ ಮೆರಗನ್ನು ಹೊಂದಿದೆ. ಹೋಳಿ ಹುಣ್ಣಿಮೆಯ ಕಾಮಣ್ಣನ ವಿಷಯಕ್ಕೂ ಅದೇ ಅನ್ವಯವಾಗಿದೆ. ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಹ ಹತ್ತಿರದಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ, ಮತ್ತೊಬ್ಬರಿಗೆ ಆಚರಣೆಯೂ ಕಿರಿಕಿರಿ ಆಗದಂತೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎನ್ನುತ್ತಾರೆ ಧಾರವಾಡ ನಿವಾಸಿ ಉದಯ ಯಂಡಿಗೇರಿ.