ಹೂವಿನಹಡಗಲಿ: ತನ್ನ ಭಕ್ತಿ, ನಿಷ್ಠೆಯಿಂದ ಶಿವನನ್ನು ಗೆದ್ದು ರಡ್ಡಿ ಕುಲವನ್ನು ಉದ್ಧಾರ ಮಾಡಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಹೇಮರಡ್ಡಿ ಮಲ್ಲಮ್ಮನಿಗೆ ಮನೆಯಲ್ಲಿ ಅತ್ತಿಗೆ, ನಾದಿಯರು ನೀಡಿದ ಹಿಂಸೆ, ಕಷ್ಟಗಳನ್ನು ಮೆಟ್ಟಿನಿಂತು ಗೋ ರಕ್ಷಣೆ ಕಾಯಕದಲ್ಲಿ ತೊಡಗಿ, ತನಗೆ ನೀಡಿದ ಹಳಸಿದಂಬಲಿಯನ್ನು ಶಿವನಿಗೆ ಉಣಬಡಸಿ ಶಿವನನ್ನು ಸಾಕ್ಷಾತ್ಕರಿಸಿಕೊಂಡಿದ್ದಾಳೆ. ಇಂತಹ ಶಿವಶರಣೆ ತನ್ನ ರಡ್ಡಿ ಕುಲಕ್ಕೆ ಯಾವ ಕಾಲದಲ್ಲಿಯೂ ಬಡತನ ಬಾರದಿರಲಿ, ಅವರ ಬಾಳು ಬಂಗಾರವಾಗಲಿ. ಇವರಿಂದ ಸದಾ ಕಾಲ ದಾನ, ಧರ್ಮ ನಿರಂತರ ನಡೆಯುತ್ತಿರಲಿ ಎಂದು ವರ ಪಡೆದಿದ್ದಾಳೆ. ಅವಳ ಭಕ್ತಿಗೆ ಮೆಚ್ಚಿ ಶಿವ ವರ ನೀಡಿದ ಪರಿಣಾಮ ಇಂದು ಎಲ್ಲ ರಡ್ಡಿ ಕುಲ ಬಡತನ ಅರಿಯದೇ ತಮ್ಮ ಕಾಯಕದಿಂದ ಸಮಾಜಕ್ಕೆ ಕೊಡುಗೈ ದಾನಿಗಳಾಗಿ ನಡೆದುಕೊಂಡಿದ್ದಾರೆ ಎಂದರು.
ಮಠದ ಚನ್ನವೀರ ಸ್ವಾಮೀಜಿ ಹಲವು ದಶಕಗಳಿಂದ ಪ್ರತಿ ವರ್ಷ ತಮ್ಮ ಮಠದಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮಗಳ ಜೊತೆ, ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ವಿಶೇಷವಾಗಿ ಈ ಭಾಗದ ರೈತರ ಹಿತದೃಷ್ಟಿಯಿಂದ ಹಲವು ವರ್ಷದಿಂದ ಕೃಷಿ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಠ ಅಭಿವೃದ್ಧಿ ಪಡಿಸುವ ಮೂಲಕ ಇಡೀ ಕರ್ನಾಟಕ ಮಠದತ್ತ ನೋಡುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣಾನಾಯ್ಕ, ಶಿಕ್ಷಕ ದ್ವಾರಕೀಶ ರೆಡ್ಡಿ ಮಾತನಾಡಿದರು. ಚನ್ನವೀರ ಸ್ವಾಮೀಜಿ, ನೀಲಗುಂದ ಚನ್ನ ಬಸವ ಸ್ವಾಮೀಜಿ, ಹೊಳಲು ಗ್ರಾಮದ ಚನ್ನಬಸವ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಮಾಜಿ ಶಾಸಕ ಬಿ. ಚಂದ್ರನಾಯ್ಕ, ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವ ರೆಡ್ಡಿ, ಮುಖಂಡ ಪುತ್ರೇಶ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಸಿ. ಮೋಹನರೆಡ್ಡಿ ಉಪಸ್ಥಿತರಿದ್ದರು.