ಚಿತ್ರದುರ್ಗ: ಕಾಯಕದ ಮೂಲಕವೇ ತನ್ನ ಆರಾಧ್ಯ ದೈವ ಮಲ್ಲಿಕಾರ್ಜುನನನ್ನು ಕಾಣಲು ಸಾಧ್ಯವಾಗಿಸಿದವಳು ಹೇಮರೆಡ್ಡಿ ಮಲ್ಲಮ್ಮ ಎಂದು ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಸಂಸಾರದಲ್ಲಿಯೇ ಇದ್ದು ಸಾಧಕಿಯಾಗಿ, ಸ್ತ್ರೀ ಸಮಾಜಕ್ಕೆ ಆದರ್ಶ ಸ್ತ್ರೀ ಅವರಾಗಿದ್ದರೆ ಎಂದರು.ಕಾಯಕದ ಮೂಲಕ, ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ಭಕ್ತಿ ಮಾರ್ಗದ ಮೂಲಕ ಅನುಭಾವಿಯಾದವಳು ಮಲ್ಲಮ್ಮ. ತಾನು ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಇತರರಿಗೆ ಹಂಚುವ, ದಾರಿ ತೋರುವ ಅನುಭಾವಿ ಆಕೆ. ಗೃಹಧರ್ಮ ಪಾಲಿಸುತ್ತಾ ನೋವುಂಡ ಸ್ಥಳದಲ್ಲೇ ನೋವಿಗೆ ಮದ್ದು ಮಾಡುತ್ತಾ ತನ್ನವರನ್ನು ಅವರ ಅಜ್ಞಾನದಿಂದ ಅರಿವಿನ ಕಡೆಗೆ ಕರೆತಂದು ಕಾಯಕದ ಮೂಲಕವೇ ಮಲ್ಲಿಕಾರ್ಜುನನ್ನು ಕಾಣಲು ಸಾಧ್ಯವಾಗಿಸಿದವಳು ಮಲ್ಲಮ್ಮ. ಮನೆಗೆದ್ದು-ಜಗಗೆಲ್ಲು ಎನ್ನುವ ತತ್ವ ಅವಳದ್ದು ಎಂದರು. ನಾಡಿನ ಚರಿತ್ರೆಯೊಳಗೆ ನೂರಾರು ರಾಣಿ-ಮಹಾರಾಣಿಯರು ಸಿಗಬಹುದು. ಹಾಗೆಯೇ ಸಾಂಸ್ಕೃತಿಕ, ಆಧ್ಯಾತ್ಮಿಕ ಸಾಧನೆಯ ಉತ್ತುಂಗಕ್ಕೇರಿದ ಅನುಭಾವಿ ಮಹಿಳೆಯರು ದೊರಕಬಹುದು. ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ಕುಟುಂಬದ ಗೃಹಿಣಿಯಾಗಿ ತನ್ನ ಮನೆಯೊಳಗೆ ನೂರಾರು ಕಷ್ಟ-ನೋವುಗಳ ನಡುವೇ ಬದುಕಿ ಅದನ್ನೇ ಸಾಧನೆಯ ಹಾದಿಯಾಗಿಸಿಕೊಂಡು ಬದುಕಿ ತೋರಿಸಿಕೊಟ್ಟ ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮ. ಮಹಿಳೆಯನ್ನು ಗುರುವಾಗಿಸಿಕೊಂಡು ಆ ಹೆಸರಿನ ಮೂಲಕ ಗುರುತಿಸುವ ಏಕೈಕ ಸಮುದಾಯ ಹೇಮರೆಡ್ಡಿಯವರಾಗಿದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಹೇಮರೆಡ್ಡಿ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿರುವಂತಹ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿನಿಂತು, ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯ ರೂಢಿಸಿಕೊಂಡು ಧಾರ್ಮಿಕ ಸಾಧನೆಗೈದ ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ತಿಳಿಸಿದರು.ರೆಡ್ಡಿ ಸಮಾಜಕ್ಕೆ ಬಡತನ ಬರದಂತೆ ಶ್ರೀ ಶೈಲ ಮಲ್ಲಿಕಾರ್ಜುಸ್ವಾಮಿಯಲ್ಲಿ ಬೇಡಿಕೊಂಡು ಸಮಾಜದ ಏಳಿಗೆಗಾಗಿ ಹೇಮರೆಡ್ಡಿ ಮಲ್ಲಮ್ಮ ಶ್ರಮಿಸಿದ್ದಾರೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಅವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠ. ಎಷ್ಟೇ ಕಷ್ಟ ತೊಂದರೆಗಳು ಬಂದರೂ ಕೂಡ ಅದನ್ನು ಎದುರಿಸಿದ ದಿಟ್ಟ ಮಹಿಳೆ. ಇವರ ಆದರ್ಶ ಜೀವನ ಎಲ್ಲರಿಗೂ ಮಾದರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬ ಮಹಿಳೆ ನಡೆಯುವುದು ಅವಶ್ಯವಿದೆ ಎಂದು ಹೇಳಿದರು. ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜ ಅಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೂ ಆದರ್ಶ ಬದುಕು ಸಾಗಿಸಿ ಸಮಾಜಕ್ಕೆ ದಾರಿ ದೀಪವಾದವರು. ರೆಡ್ಡಿ ಸಮುದಾಯದ ಬದುಕು ಸದಾ ಬಂಗಾರವಾಗಲಿ ಎಂದು ಪ್ರಾರ್ಥಿಸಿದ ಆ ಮಹಾ ತಾಯಿ ಸಮಾಜಕ್ಕೆ ಮಾದರಿ ಎಂದರು. ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಿಲ್ಲಾ ವೀರಶೈವ-ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಮುಖಂಡರಾದ ನಾಗರಾಜ್ ಸಂಗಂ, ಡಾ.ಪಾಲಾಕ್ಷಪ್ಪ, ಡಾ.ಮಹಂತೇಶ್, ಬಸವರಾಜ್ ಮೇಟಿಕುರ್ಕಿ, ವೀರಭದ್ರಪ್ಪ, ಡಾ.ರಮೇಶ್, ಜಿ.ನಾಗಭೂಷಣ್, ಸುಜಾತ ಶಿವಾನಂದಪ್ಪ, ಸುನೀತಾ ಮಲ್ಲಿಕಾರ್ಜುನ್, ಅಲ್ಲಾಡಿ ವಿಜಯ್ ಕುಮಾರ್, ಮನೋಹರ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಮಹಂತೇಶ್, ಚಂದ್ರಶೇಖರ್, ಪ್ರತಿಭಾ ಅರುಣ್, ಜಿಪಂ ಮಾಜಿ ಸದಸ್ಯ ಪಾಪಯ್ಯ. ಡಿ.ಆರ್.ಲೋಕೇಶ್ವರಪ್ಪ ಮತ್ತಿತರರು ಇದ್ದರು.